ಕನ್ನಡಪ್ರಭ ವಾರ್ತೆ ಮಡಿಕೇರಿ
ಇತ್ತೀಚೆಗೆ ನಾಕೂರು ಶಿರಂಗಾಲ ಗ್ರಾಪಂ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ಮತಾಂತರ ಮಾಡಲು ತಮಿಳುನಾಡಿನಿಂದ ಬಂದು ಸರ್ಕಾರಿ ಜಾಗದಲ್ಲಿ ಪಂಚಾಯಿತಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ಚರ್ಚ್ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೋಮಶೇಖರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರಿಗೆ ಪ್ರತ್ಯೇಕವಾಗಿ ಮನವಿಪತ್ರ ಸಲ್ಲಿಸಲಾಯಿತು.
ತಮಿಳುನಾಡಿನಿಂದ ವಾಹನದಲ್ಲಿ ಬಂದು ಹೇರೂರು ಗ್ರಾಮದ ನಿವಾಸಿಯೊಬ್ಬರ ಮನೆಯಲ್ಲಿ ಮತಾಂತರ ಮಾಡುವುದರ ಜೊತೆಗೆ ಪರವಾನಗಿ ಇಲ್ಲದೆ ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ವ್ಯಕ್ತಿಯೊಬ್ಬರ ನೇತೃತ್ವದಲ್ಲಿ ಚರ್ಚ್ಅನ್ನು ನಿರ್ಮಾಣ ಮಾಡಿ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಅಲ್ಲಿರುವ ಕೆಲವು ಮನೆಗಳಿಗೆ ತೆರಳಿ ಬುಡಕಟ್ಟು ಮತ್ತು ಸ್ಥಳೀಯರನ್ನು ಮತಾಂತಗೊಳಿಸಲು ಪ್ರಯತ್ನಿಸಿದಾಗ ವಿಷಯ ತಿಳಿದು ಗ್ರಾಮಸ್ಥರು ಕೂಡಲೇ ಸುಂಟಿಕೊಪ್ಪ ಠಾಣೆಗೆ ದೂರು ನೀಡಿದ್ದೇವೆ. ಹಣದ ಆಮಿಷ ಒಡ್ಡಿ ಬುಡಕಟ್ಟಿನ ಮುಗ್ಧ ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಈ ಬಗ್ಗೆ ಪರಿಶೀಲಿಸಿ ಸರ್ಕಾರಿ ಜಾಗದಲ್ಲಿ ಪಂಚಾಯಿತಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಚರ್ಚ್ ಅನ್ನು ತೆರವುಗೊಳಿಸಿ ಹೊರ ರಾಜ್ಯದಿಂದ ಬಂದು ಇಲ್ಲಿಯವರೊಂದಿಗೆ ಸೇರಿಕೊಂಡು ಮತಾಂತರ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.