ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Aug 14, 2025, 01:00 AM IST
ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಚರ್ಮ ಹಾಗೂ ಕೂದಲು ಚಿಕಿತ್ಸೆಯಲ್ಲಿ ತೊಡಗಿರುವ ಯಾವುದೇ ವೈದ್ಯಕೀಯ ಪದವಿ ಇಲ್ಲದ ನಕಲಿ ವೈದ್ಯರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಭಾರತೀಯ ಚರ್ಮರೋಗ, ಕುಷ್ಠರೋಗ, ಲೈಂಗಿಕ ರೋಗಗಳ ತಜ್ಞರ ಸಂಘ ಕರ್ನಾಟಕ ಶಾಖೆಯ ಕರೆಯ ಮೇರೆಗೆ ಗದಗ ಜಿಲ್ಲಾ ಘಟಕ ಹಾಗೂ ಗದಗ ಐಎಂಎ ವತಿಯಿಂದ ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು.

ಗದಗ: ಚರ್ಮ ಹಾಗೂ ಕೂದಲು ಚಿಕಿತ್ಸೆಯಲ್ಲಿ ತೊಡಗಿರುವ ಯಾವುದೇ ವೈದ್ಯಕೀಯ ಪದವಿ ಇಲ್ಲದ ನಕಲಿ ವೈದ್ಯರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಭಾರತೀಯ ಚರ್ಮರೋಗ, ಕುಷ್ಠರೋಗ, ಲೈಂಗಿಕ ರೋಗಗಳ ತಜ್ಞರ ಸಂಘ ಕರ್ನಾಟಕ ಶಾಖೆಯ ಕರೆಯ ಮೇರೆಗೆ ಗದಗ ಜಿಲ್ಲಾ ಘಟಕ ಹಾಗೂ ಗದಗ ಐಎಂಎ ವತಿಯಿಂದ ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು.

ಅಪರ ಜಿಲ್ಲಾಧಿಕಾರಿ ಡಾ. ದುರುಗೇಶ್ ಕೆ.ಆರ್. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಅವರಿಗೆ ಸಂಘಟನೆಯಿಂದ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.

ಈಗಾಗಲೇ ಭಾರತೀಯ ಚರ್ಮರೋಗ, ಕುಷ್ಠರೋಗ, ಲೈಂಗಿಕ ರೋಗಗಳ ತಜ್ಞರ ಸಂಘ ಕರ್ನಾಟಕ ಶಾಖೆಯ ರಾಜ್ಯದಾದ್ಯಂತ ನಕಲಿ ಚರ್ಮ ವೈದ್ಯರು ಮುಕ್ತ ಭಾರತ ಅಭಿಯಾನ ಪ್ರಾರಂಭಿಸಿದೆ. ಎಂಸಿಐ, ಎನ್‌ಎಂಸಿ ಮಾನ್ಯತೆ ಇಲ್ಲದೆ, ಯಾವುದೇ ವೈದ್ಯಕೀಯ ಪದವಿ ಅರ್ಹತೆ ಇಲ್ಲದವರು ಚರ್ಮರೋಗ, ಕೂದಲು ಕಸಿ ತಜ್ಞರೆಂದು ಹೇಳಿಕೊಂಡು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡುತ್ತಿರುವುದನ್ನು ತಡೆಗಟ್ಟಿ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದೇ ಸಂಘಟನೆಯ ಸದಾಶಯವಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳ ಚರ್ಮರೋಗ ತಜ್ಞರು, ಶಂಕಿತ ವೈದ್ಯರ ಪಟ್ಟಿಗಳನ್ನು ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರಿಗೆ ಸಲ್ಲಿಸಲಾಗುತ್ತಿದೆ.

ದಂತವೈದ್ಯರು, ಆಯುಷ್ ವೈದ್ಯರು, ಬ್ಯೂಟಿಷಿಯನ್‌ಗಳು, 10-12ನೇ ತರಗತಿ ಪಾಸಾದವರು ಹಾಗೂ ಎಂಸಿಐ, ಎನ್‌ಎಂಸಿ ಮಾನ್ಯತೆ ಸ್ಪೆಷಲೈಸೇಶನ್ ಇಲ್ಲದ ಎಂಬಿಬಿಎಸ್ ಪದವೀಧರರು ನಕಲಿ ದಾಖಲೆಗಳನ್ನು ಹೊಂದಿ ತನ್ನನ್ನು ಚರ್ಮರೋಗ ಅಥವಾ ಕಾಸ್ಮೆಟಾಲಜಿಸ್ಟ್ ಎಂದು ಪರಿಚಯಿಸಿಕೊಂಡು ಚಿಕಿತ್ಸೆ ನೀಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ. ಇಂತಹ ಅನರ್ಹ ವ್ಯಕ್ತಿಗಳು ಸ್ಕಿನ್-ಹೇರ್ ಕ್ಲಿನಿಕ್‌ಗಳನ್ನು ನಡೆಸುತ್ತಿದ್ದು, ಲೇಸರ್, ಮೈಕ್ರೋನೀಡ್ಲಿಂಗ್ ಯಂತ್ರಗಳಂತಹ ವೈದ್ಯಕೀಯ ಸಾಧನಗಳನ್ನು ಬಳಸುತ್ತಿದ್ದಾರೆ. ಇವುಗಳನ್ನು ಕಾನೂನಿನ ಪ್ರಕಾರ ಮಾತ್ರ ಮಾನ್ಯ ಡರ್ಮಟಾಲಜಿಸ್ಟ್‌ಗಳು ಮತ್ತು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರು ಬಳಸಬಹುದು. ಇಂತಹ ನಕಲಿ ತಜ್ಞರು ಮಾಡಿದ ಚಿಕಿತ್ಸೆಗಳಿಂದ ಮುಖ, ಕೂದಲು, ಚರ್ಮಗಳಿಗೆ ಹಾನಿಯಾಗಿದ್ದು ಹಲವಾರು ಸಂದರ್ಭಗಳಲ್ಲಿ ಜೀವಕ್ಕೂ ಹಾನಿಯಾಗಿದೆ. ಅಂತಹ ನಕಲಿ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಕೋರಲಾಗಿದೆ.

ಹಿರಿಯ ಚರ್ಮರೋಗ ತಜ್ಞ ಡಾ. ಪ್ರಕಾಶ ಕೊಲೋಳಗಿ, ಕೆ.ಎಚ್. ಪಾಟೀಲ ವೈದ್ಯಕೀಯ ವಿದ್ಯಾಲಯದ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಗಿರೀಶ ನಾಗರಾಳ, ಡಾ. ವೀರೇಶ ದ್ಯಾವಣ್ಣವರ, ಡಾ. ತುಕಾರಾಮ ಸೋರಿ, ಡಾ. ಸಲೀಂ ಜಮಾದಾರ, ಡಾ. ಜಿ.ಎಸ್. ಪಲ್ಲೇದ, ಡಾ. ಶರಣ ಆಲೂರ ಮುಂತಾದವರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌