ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೀಳು ಮಟ್ಟದ ಭಾಷೆ ಬಳಸುವ ಜೊತೆಗೆ ಕೆಟ್ಟ ರಾಜಕೀಯ ನೀತಿ ಅನುಸರಿಸುತ್ತಿರುವ ಅಮಿತ್ ಶಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇಸರತ್ ಕ್ಷಮೆ ಯಾಚಿಸಿದರೆ ನಿಜವಾಗಿ ಅವರ ಸ್ಥಾನಮಾನಕ್ಕೆ ಗೌರವ ತಂದುಕೊಡುತ್ತದೆ ಎಂದರು.ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಸಂಸತ್ ಕಲಾಪದ ಸಮಯದಲ್ಲಿ ಅವಹೇಳನಕಾರಿ ಪದ ಬಳಸಿ ದೇಶದ ಜನರ ಭಾವನೆಗಳನ್ನು ಕೆರಳಿಸಿ ಶಾಂತಿ ಕದಡುವ ಪ್ರಯತ್ನ ನಡೆಸಿದ್ದಾರೆ. ಅಮಿತ್ ಶಾ ವಿರುದ್ಧ ದೌರ್ಜನ್ಯ ಪ್ರಕರಣವನ್ನು ದಾಖಲಿಸಿ ಮತ್ತು ಅವರು ಬಳಸಿರುವ ಭಾಷೆಗೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮಾತನಾಡಿ, ಸಂಸತ್ ಅಧಿವೇಶನ ನಡೆಯುತ್ತಿದ್ದ ವೇಳೆ ವಿರೋಧ ಪಕ್ಷವನ್ನು ಟೀಕಿಸುವ ಬರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ನವರು ಮತ್ತು ಅವರ ಅನುಯಾಯಿಗಳು ಅಂಬೇಡ್ಕರ್ ವ್ಯಸನಿಗಳಾಗಿದ್ದಾರೆ ಎಂದು ಅಂಬೇಡ್ಕರ್ ಅವರ ಹೆಸರನ್ನು ವ್ಯಸನ ಎಂಬ ಪದಕ್ಕೆ ಹೋಲಿಕೆ ಮಾಡಿ ಮಾತನಾಡಿರುವುದು ಭಾರತದ ಮಹಾ ನಾಯಕರೊಬ್ಬರ ಶ್ರೇಷ್ಠತೆಗೆ ಧಕ್ಕೆ ಉಂಟಾಗಿರುತ್ತದೆ ಎಂದರು.ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಪಾಧ್ಯಕ್ಷ ತಿಬ್ಬನಹಳ್ಳಿ ರಮೇಶ್, ಸುಂಡಹಳ್ಳಿ ಸಿದ್ದರಾಜು, ಪ್ರಾಣೇಶ್, ಕುಮಾರಸ್ವಾಮಿ, ದೀಪಕ್, ದೇವರಾಜು, ಶಿವಾನಂದ ಮೂರ್ತಿ,ಲವ, ಕೊತ್ತತ್ತಿ ಮಹದೇವು, ನಿತ್ಯಾನಂದ ಇತರರು ಇದ್ದರು.