ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Mar 16, 2024, 01:50 AM IST
ಪೊಟೋ ಮಾ.14ಎಂಡಿಎಲ್ 2ಎ, 2ಬಿ. ಮಾಧ್ಯಮದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ನಗರದಲ್ಲಿ ಕಾನಿಪ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಮಾಧ್ಯಮಗಳನ್ನು ತಮ್ಮ ಏಳಿಗೆಗೆ ಬಳಸಿಕೊಂಡು ಸಮಾಜದಲ್ಲಿ ಒಳ್ಳೆಯ ಹೆಸರು ಪಡೆದು, ಕೊನೆಗೆ ಅದೇ ಮಾಧ್ಯಮಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಸಂಸದ ಅನಂತಕುಮಾರ ಹೆಗಡೆ ಅವರ ನಡೆ ಖಂಡನೀಯ.

ಕನ್ನಡ ಪ್ರಭ ವಾರ್ತೆ ಮುಧೋಳ

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮದ ಬಗ್ಗೆ ಅತ್ಯಂತ ಕೀಳುಮಟ್ಟದಲ್ಲಿ ಅವಹೇಳನಕಾರಿ ಮಾತನಾಡಿರುವ ಸಂಸದ ಅನಂತಕುಮಾರ ಹಗಡೆ ಅವರ ನಡೆ ತೀವ್ರ ಖಂಡನೀಯ ಎಂದು ಮುಧೋಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ಅಶೋಕ ಕುಲಕರ್ಣಿ ಹೇಳಿದರು.

ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಮುಧೋಳ ತಾಲೂಕು ಕಾ.ನಿ.ಪ ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗಕ್ಕಿರುವ ಪಾವಿತ್ರ್ಯತೆ ಮರೆತು ಮನಸೋ ಇಚ್ಛೆ ಹೇಳಿಕೆ ನೀಡುವ ಸಂಸದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಾನಿಪ ಸಂಘದ ಕಾರ್ಯದರ್ಶಿ ಎಂ.ಎಚ್.ನದಾಫ್ ಮಾತನಾಡಿ, ಮಾಧ್ಯಮಗಳನ್ನು ತಮ್ಮ ಏಳಿಗೆಗೆ ಬಳಸಿಕೊಂಡು ಸಮಾಜದಲ್ಲಿ ಒಳ್ಳೆಯ ಹೆಸರು ಪಡೆದು, ಕೊನೆಗೆ ಅದೇ ಮಾಧ್ಯಮಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಸಂಸದ ಅನಂತಕುಮಾರ ಹೆಗಡೆ ಅವರ ನಡೆ ಖಂಡನೀಯ. ಇಂತಹ ಹೇಳಿಕೆ ನೀಡುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಕಾನಿಪ ಸಂಘದ ಖಜಾಂಚಿ ಗಣೇಶ ಮೇತ್ರಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀಡಿರುವ ವಾಕ್‌ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿರುವ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಗೃಹ ಇಲಾಖೆಯವರು ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತು ತಮ್ಮ ಹೇಳಿಕೆಗಳಿಂದ ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದು ಟೀಕಿಸಿದರು.

ಪತ್ರಕರ್ತ ವೆಂಕಟೇಶ ಗುಡೆಪ್ಪನವರ ಮಾತನಾಡಿದರು, ಕಾನಿಪ ತಾಲೂಕು ಘಟಕದ ಅಧ್ಯಕ್ಷ ಬಿ.ರತ್ನಾಕರಶೆಟ್ಟಿ ಅವರು ಮನವಿ ಪತ್ರವನ್ನು ಓದಿ ನಂತರ ತಹಸೀಲ್ದಾರ್ ವಿನೋದ ಹತ್ತಳ್ಳಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದರು.

ಕಾನಿಪ ಸಂಘದ ಉಪಾಧ್ಯಕ್ಷ ವಿಶ್ವನಾಥ ಮುನವಳ್ಳಿ, ಸದಸ್ಯ ಲಕ್ಷ್ಮಣ ಹಳ್ಳದ, ಬಿ.ಎಚ್. ಬೀಳಗಿ, ಮಹಾಂತೇಶ ಕರೆಹೊನ್ನ, ಜಗದೀಶ ಜೀರಗಾಳ, ಮಲ್ಲಿಕಾರ್ಜುನ ಗೋವಿಂದಪುರಮಠ, ಬಂದೇನಮಾಜ ತಾಳಿಕೋಟಿ, ಈರಣ್ಣ ಸಾಳಗುಂದಿ, ಗೋವಿಂದಪ್ಪ ತಳವಾರ ಇತರರು ಇದ್ದರು. ಇದಕ್ಕೂ ಮುನ್ನ ನಗರದ ರನ್ನ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪತ್ರಕರ್ತರು ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...