ಗೋಕರ್ಣದಿಂದ ಸಮರ್ಪಕ ಬಸ್ ಸಂಪರ್ಕಕ್ಕೆ ಆಗ್ರಹ

KannadaprabhaNewsNetwork | Published : Jun 17, 2024 1:35 AM

ಸಾರಾಂಶ

ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗದಿಂದ ಹೊರಜಿಲ್ಲೆಯ ಪ್ರವಾಸಿ ತಾಣ ಅಥವಾ ಪ್ರಮುಖ ಸ್ಥಳಕ್ಕೆ ಇದುವರೆಗೂ ನೇರ ಬಸ್ ವ್ಯವಸ್ಥೆ ಮಾಡಿಲ್ಲ.

ಗೋಕರ್ಣ: ರಾತ್ರಿ ವೇಳೆ ಪ್ರವಾಸಿ ತಾಣದಿಂದ ಅಂಕೋಲಾ ಮತ್ತು ಕುಮಟಾಕ್ಕೆ ಸಾರಿಗೆ ವ್ಯವಸ್ಥೆ ಹಾಗೂ ಸ್ಥಳೀಯವಾಗಿ ತಾಲೂಕು ಕೇಂದ್ರಕ್ಕೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಈ ಹಿಂದೆ ಹಲವು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಹೇಳುತ್ತಿದ್ದು, ಸಂಜೆಯಾದರೆ ಇಲ್ಲಿನ ಬಸ್ ನಿಲ್ದಾಣ ಹೊರ ಊರಿಗೆ ಹೋಗುವ ಪ್ರಯಾಣಿಕರು ಬಸ್ ಇಲ್ಲದೆ ಇಲ್ಲೇ ರಾತ್ರಿ ಕಳೆಯುತ್ತಿದ್ದು, ಬಸ್ ನಿಲ್ದಾಣ ವಸತಿಗೃಹವಾಗಿ ಮಾರ್ಪಡುತ್ತಿದೆ.

ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗದಿಂದ ಹೊರಜಿಲ್ಲೆಯ ಪ್ರವಾಸಿ ತಾಣ ಅಥವಾ ಪ್ರಮುಖ ಸ್ಥಳಕ್ಕೆ ಇದುವರೆಗೂ ನೇರ ಬಸ್ ವ್ಯವಸ್ಥೆ ಮಾಡಿಲ್ಲ, ಮೈಸೂರು, ಹುಬ್ಬಳ್ಳಿ,ಮಂಗಳೂರು, ಉಡುಪಿ ಡಿಪೋಗಳಿಂದ ಬೆರಳೆಣಿಕೆಯ ಬಸ್ ಇದ್ದು, ಇವೆಲ್ಲವೂ ಇಲ್ಲಿಂದ ಮುಂಜಾನೆ ತೆರಳುತ್ತದೆ. ನಂತರ ಕುಮಟಾಕ್ಕೆ ತೆರಳಿ ಮುಂದೆ ಸಾಗಬೇಕಾದ ಅನಿರ್ವಾಯತೆ ಇದೆ.

ಬಸ್ ಅವಶ್ಯವಿರುವ ಸಮಯ: ಸಂಜೆ 7.30 ಅಥವಾ ರಾತ್ರಿ 8.30ಕ್ಕೆ ಇಲ್ಲಿಂದ ಅಂಕೋಲಾ, ಕುಮಟಾಕ್ಕೆ ಬಸ್ ಸೌಲಭ್ಯ ಒದಗಿಸ ಬೇಕಿದೆ. ಬೆಳಗ್ಗೆ ಮಾತ್ರ ಮಂಗಳೂರು ಮತ್ತು ಹುಬ್ಬಳ್ಳಿಗೆ ನೇರ ಬಸ್ ಇದ್ದು, ಮಧ್ಯಾಹ್ನ ಮತ್ತು ಸಂಜೆ ಸಾರಿಗೆ ಸೇವೆ ನೀಡಬೇಕಿದೆ. ಕುಮಟಾ ಮತ್ತು ಅಂಕೋಲಾಕ್ಕೆ ತೆರಳುವ ಬಸ್ ನಿತ್ಯ ಪ್ರಯಾಣಿಕರಿಂದ ತುಂಬಿ ತುಳುಕಿರುತ್ತದೆ. ಅಲ್ಲದೇ ಕೇವಲ 30 ಕಿಮೀ ಸಾಗಲು 60 ಕಿಮೀ ದೂರ ಕ್ರಮಿಸುವ ಸಮಯ ಬೇಕಾಗಿದ್ದು, ಇದರಿಂದ ದೂರದ ಪ್ರಯಾಣದವರಿಗೆ ತೀವ್ರ ತೊಂದರೆಯಾಗುತ್ತಿದೆ. ಕೆಲವೊಂದು ವೇಳೆ ರಸ್ತೆಯಲ್ಲಿ ಹಾಳಾಗಿ ನಿಲ್ಲುವುದು, ನಿಗದಿತ ವೇಳೆಯಲ್ಲಿ ಬಸ್ ಬಿಡದಿರುವುದರಿಂದ ನಿತ್ಯ ಸಮಸ್ಯೆಯಾಗುತ್ತಿದೆ.

ವಿದ್ಯಾರ್ಥಿಗಳ ಗೋಳು: ಗ್ರಾಮೀಣ ಪ್ರದೇಶದವಾದ ತದಡಿ, ಗಂಗಾವಳಿ, ಬಂಕಿಕೊಡ್ಲ, ಹನೇಹಳ್ಳಿ ಭಾಗದಿಂದ ವಿದ್ಯಾರ್ಥಿಗಳು ಬಸ್ ಕೊರತೆಯ ನಡುವೆ ಸಿಕ್ಕ ಬಸ್ ಏರಿ ದೂರದ ಕುಮಟಾ, ಹೊನ್ನಾವರ ಕಾಲೇಜಿಗೆ ತೆರಳಲು ಗೋಕರ್ಣ ತಲುಪಿದರೆ, ಇಲ್ಲಿಂದ ಮುಂದೆ ಸಾಗುವ ಬಸ್ ಪ್ರಯಾಣಿಕರಿಂದ ಭರ್ತಿಯಾಗಿರುತ್ತಿದ್ದು, ನಿಗದಿತ ಸಮಯಕ್ಕೆ ತರಗತಿಗೆ ತೆರಳಲು ಪರದಾಡುತ್ತಿದ್ದಾರೆ.

ಅಧಿಕಾರಿಗಳಿಗೆ ಮನವಿ: ನಿತ್ಯ ಬಸ್ ಸಿಗದೆ ಕಾಲೇಜಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದು, ಮೊದಲ ತರಗತಿಗಳು ತಪ್ಪುತ್ತಿದೆ. ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೊರಟು, ಸಂಜೆ 7 ಗಂಟೆಗೆ ಬರುತ್ತೇವೆ. ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳಿ ನೆರವಾಗುವಂತೆ ಜನಪ್ರತಿನಿಧಿಗಳು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ವಿದ್ಯಾರ್ಥಿ ಗಣೇಶ ತಿಳಿಸಿದರು.

Share this article