ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ನಗರದ ಎಂ.ಜಿ.ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿ ಮುಂದೆ ಜಮಾಯಿಸಿದ ರೈತರು, ಬೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಸಂಕಲಗೆರೆ ಫೀಡರ್ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ರೈತರ ಜಮೀನುಗಳಿಗೆ ಪ್ರತಿನಿತ್ಯ ಮೂರು ತಾಸು ವಿದ್ಯುತ್ ಅನ್ನು ಸಹ ಪೂರೈಸುತ್ತಿಲ್ಲ. ಕರೆಂಟ್ ಯಾವಾಗ ಬರುತ್ತದೆ, ಯಾವಾಗ ಹೋಗುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ವಿದ್ಯುತ್‌ಗಾಗಿ ರೈತರು ಜಮೀನಗಳ ಬಳಿ ಕಾದು ಕುಳಿತುಕೊಳ್ಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಣಬಿಸಿಲಿನ ತಾಪಕ್ಕೆ ಬೆಳೆಗಳು ಒಣಗಿಹೋಗಿವೆ. ಎಲ್ಲೋ ಒಂದಷ್ಟು ಬೆಳೆಗಳು ಉಳಿದಿದ್ದು, ಅವುಗಳನ್ನಾದರೂ ಉಳಿಸಿಕೊಳ್ಳೋಣ ಎಂದರೆ ಬೆಸ್ಕಾಂ ಇಲಾಖೆ ವಿದ್ಯುತ್ ಅನ್ನು ಸರಿಯಾಗಿ ಪೂರೈಸದೇ ಕಣ್ಣಾಮುಚ್ಚಾಲೆ ಆಡುತ್ತಿದೆ. ಸಾಲ ಮಾಡಿ ಬೆಳೆಸಿದ ಬೆಳೆಗಳು ಕಣ್ಣುಮುಂದೆಯೇ ಒಣಗುತ್ತಿರುವುದನ್ನು ನೋಡಲು ಆಗುತ್ತಿಲ್ಲ. ಇದನ್ನು ಪ್ರಶ್ನಿಸಿದರೆ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳಾದ ಎಇಇ ಪುಷ್ಪಾ, ಜೆಇ ಗಿರೀಶ್, ಬೇಸಿಗೆ ಕಾರಣಕ್ಕೆ ರಾಜ್ಯದ ಎಲ್ಲ ಜಲಾಶಯಗಳು ಬಹುತೇಕ ಬರಿದಾಗಿವೆ. ಇದರಿಂದ ವಿದ್ಯುತ್ ಅಭಾವ ಸೃಷ್ಠಿಯಾಗಿದ್ದು, ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ರೈತರ ಜಮೀನುಗಳಿಗೆ ರಾತ್ರಿ ವೇಳೆ ವಿದ್ಯುತ್ ನೀಡಿದರೆ ಜಮೀನುಗಳಿಗೆ ತೆರಳಲು ತೊಂದರೆಯಾಗುತ್ತದೆ. ಕಾಡುಪ್ರಾಣಿಗಳು, ಹಾವುಗಳ ಕಾಟಕ್ಕೆ ಸಿಲುಕಬೇಕಾಗುತ್ತದೆ. ತಾಲೂಕಿನ ರೈತರ ನೈಜ್ಯ ಸಮಸ್ಯೆಗಳನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು. ಮೇಲಾಧಿಕಾರಿಗಳಿಗೆ ಇಲ್ಲಿನ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು, ವಿದ್ಯುತ್ ಸಮಸ್ಯೆ ಪರಿಹರಿಸಬೇಕು. ಒಂದು ವಾರದೊಳಗೆ ಸಮಸ್ಯೆ ಪರಿಹರಿಸದಿದ್ದಲ್ಲಿ ರೈತಸಂಘದ ಜೊತೆಗೂಡಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.