ಹಳಿಯಾಳ: ಪುರಸಭೆಯವರು ಗೂಡಂಗಡಿಗಳನ್ನು ತೆರವು ಮಾಡುವಾಗ ನೀಡಿದ ಭರವಸೆಯಂತೆ ಗೂಡಂಗಡಿಕಾರರ ಬದುಕಿಗಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ತಾಲೂಕು ಕರವೇ ಘಟಕ ಆಗ್ರಹಿಸಿದೆ.ಗುರುವಾರ ತಾಲೂಕು ಕರವೇ ಘಟಕದ ಮುಂದಾಳತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಗೂಡಂಗಡಿಕಾರರು ಪುರಸಭೆಗೆ ತೆರಳಿ ಅಧ್ಯಕ್ಷೆ ದ್ರೌಪದಿ ಅಗಸರ ಅವರೊಂದಿಗೆ ಸಭೆ ನಡೆಸಿ ತಮ್ಮ ಅಳಲನ್ನು ತೋಡಿಕೊಂಡರು.
ಮರಳು ಸಮಸ್ಯೆಗೆ ಬಿಜೆಪಿಯವರೇ ನೇರ ಕಾರಣ: ವೆಂಕಟೇಶ ನಾಯ್ಕ
ಭಟ್ಕಳ: ತಲೆದೋರಿರುವ ಮರಳಿನ ಸಮಸ್ಯೆಗೆ ಬಿಜೆಪಿಯವರೇ ನೇರ ಕಾರಣವಾಗಿದ್ದಾರೆ. ಮಾಜಿ ಶಾಸಕ ಸುನೀಲ ನಾಯ್ಕ ಅವರು ಮರಳು ಸಮಸ್ಯೆ ಬಗೆಹರಿಸಲು ಸಹಕಾರ ನೀಡುವುದನ್ನು ಬಿಟ್ಟು ಪತ್ರಿಕಾ ಹೇಳಿಕೆ ನೀಡಿ ಮರಳು ಸಮಸ್ಯೆ ಮತ್ತಷ್ಟು ಜಟಿಲ ಮಾಡುವುದು ಸರಿಯಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಟೀಕಿಸಿದರು.ಬುಧವಾದ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರ ಕುಮ್ಮಕ್ಕಿನಿಂದಲೇ ಕೆಲ ಸಂಘಟನೆಯವರು ಮರಳು ಸಮಸ್ಯೆ ಉಂಟಾಗಿದೆ ಎಂದು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಗೆ ಎರಡು ದಿನ ಮೊದಲೇ ಮರಳು ಸಮಸ್ಯೆ ಪರಿಹಾರಕ್ಕೆ ಸಚಿವ ಮಂಕಾಳ ವೈದ್ಯ ಅವರು ಪ್ರಯತ್ನಿಸಿ ಎಲ್ಲವೂ ಸುಸೂತ್ರವಾಗುವಂತೆ ಮಾಡಿದ್ದರು.ಆದರೆ ಬಿಜೆಪಿಯವರ ಕುಮ್ಮಕ್ಕಿನಿಂದ ಕೆಲ ಸಂಘಟನೆಯವರು ಪ್ರತಿಭಟನೆ ನಡೆಸಿ ಸರ್ಕಾರ, ಸಚಿವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದ ಅವರು, ಮತ್ಸ್ಯಮೇಳವನ್ನು ಮೀನುಗಾರರಿಗೋಸ್ಕರ ಮಾಡಿದ್ದು, ಇದರಿಂದ ಮೀನುಗಾರರಿಗೆ ಅನುಕೂಲವಾಗಿದೆ. ಆದರೆ ಮಾಜಿ ಶಾಸಕರು ಮತ್ಸ್ಯಮೇಳದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಒಬ್ಬ ಮೀನುಗಾರಿಕಾ ಸಚಿವರಾಗಿ ಸ್ವ ಕ್ಷೇತ್ರದಲ್ಲಿ ಮೀನುಗಾರರಿಗೆ ಅನುಕೂಲ ಆಗಲು ಮತ್ಸ್ಯಮೇಳ ಮಾಡುವುದು ತಪ್ಪೇ? ಮತ್ಸ್ಯಮೇಳದ ಕಾರ್ಯಕ್ರಮದಲ್ಲಿ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ಬಗ್ಗೆಯೂ ಅವರು ಅಪಸ್ವರ ಎತ್ತಿ ಟೀಕಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಮಹಿಳಾ ಅಧ್ಯಕ್ಷೆ ನಯನಾ ನಾಯ್ಕ, ಮುಖಂಡರಾದ ಟಿ.ಡಿ. ನಾಯ್ಕ, ವಿಷ್ಣು ದೇವಡಿಗ, ಭಾಸ್ಕರ ಮೊಗೇರ, ಮಂಜುನಾಥ ನಾಯ್ಕ, ಗಣಪತಿ ನಾಯ್ಕ, ಮಂಜಪ್ಪ ನಾಯ್ಕ, ನಾಗೇಶ ನಾಯ್ಕ, ನಾಗೇಂದ್ರ ನಾಯ್ಕ ಮುಂತಾದವರಿದ್ದರು.