ಗಜೇಂದ್ರಗಡ: ತಾಲೂಕಿನ ಕುಂಟೋಜಿ ಪಂಚಾಯ್ತಿ ಪಿಡಿಒ ಅವರನ್ನು ಸೇವೆಯಿಂದ ವಜಾ ಮಾಡಬೇಕು ಹಾಗೂ ೧೩ ಗ್ರಾಪಂಗಳಿಗೆ ಪಿಡಿಒ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂರ್ಘಷ (ದಾದಾಸಾಹೇಬ್ ಡಾ.ಎನ್.ಮೂರ್ತಿ) ಸಮಿತಿಯಿಂದ ಪಟ್ಟಣದ ತಾಪಂ ಎದುರು ಮಂಗಳವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ದುರಗಪ್ಪ ಕಟ್ಟಿಮನಿ ಮಾತನಾಡಿ, ತಾಲೂಕಿನ ೧೩ಗ್ರಾಪಂಗಳಲ್ಲಿ ಕೇವಲ ೪-೫ ಪಿಡಿಒಗಳಿದ್ದಾರೆ. ಪರಿಣಾಮ ಸಕಾಲದಲ್ಲಿ ಗ್ರಾಮಸ್ಥರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇನ್ನೂ ತಾಪಂ ಅಧಿಕಾರಿಗಳು ಮಾತನ್ನು ಕೇಳದ ಬೆರಳಣಿಕೆ ಪಿಡಿಒಗಳು ಮನಸೋ ಇಚ್ಛೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಪರಿಣಾಮ ಕುಂಟೋಜಿ ಗ್ರಾಪಂನ ಪಿಡಿಒ ಕರ್ತವ್ಯಕ್ಕೆ ಮಧ್ಯಾಹ್ನ ೧ಗಂಟೆಗೆ ಆಗಮಿಸಿ ಮರಳಿ ೩ಗಂಟೆಗೆ ಹೋಗುತ್ತಾರೆ. ಇದನ್ನು ಗ್ರಾಮಸ್ಥರು ಪ್ರಶ್ನಿಸಿದರೆ ತಾವು ಬರುವ ಸಮಯಕ್ಕೆ ಬಂದು ಕೆಲಸ ಮಾಡಿಸಿಕೊಂಡು ಹೋಗಿ ಎನ್ನುತ್ತಾರೆ. ೨೦೨೧-೨೨ನೇ ಸಾಲಿನ ಪ್ರಧಾನಮಂತ್ರಿ ಆವಾಸ ಯೋಜನೆಯಲ್ಲಿ ಮನೆ ಕಟ್ಟಿಕೊಂಡ ಫಲಾನುಭವಿಗಳಿಗೆ ಪಿಡಿಒ ನಿರ್ಲಕ್ಷ್ಯದಿಂದ ಹಂತ, ಹಂತವಾಗಿ ಸರ್ಕಾರದ ಹಣ ಜಮೆಯಾಗಿಲ್ಲ ಎಂದು ದೂರಿದರು.ಕುಂಟೋಜಿ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಹೊಸ ಬಡಾವಣೆಗಳ ಅಭಿವೃದ್ಧಿ ಕರ ಕಟ್ಟಿಸಿಕೊಳ್ಳುವ ಅಧಿಕಾರಿಗಳು ಬಡಾವಣೆಯಗಳಲ್ಲಿ ಅಭಿವೃದ್ಧಿಗೆ ಮುಂದಾಗಿಲ್ಲ. ಹೀಗಾಗಿ ನಿರ್ಮಾಣವಾದ ಬಡಾವಣೆಗಳಲ್ಲಿ ಅಭಿವೃದ್ಧಿಯಾಗಿದೆಯೇ ಎಂದು ಮೇಲಾಧಿಕಾರಿಗಳು ಪರಿಶೀಲಿಸಲು ಮುಂದಾಗಬೇಕು. ಈ-ಸ್ವತ್ತು ಉತಾರ ಮಾಡಿಸಿಕೊಳ್ಳಲು ಸಲ್ಲಿಸುವ ಅರ್ಜಿಗಳನ್ನು ಅಧಿಕಾರಿಗಳು ತೆಗೆದು ಸಹ ನೋಡುವದಿಲ್ಲ. ಪ್ರಶ್ನಿಸಿದರೆ ಅರ್ಜಿ ನೀಡಿದ ಸ್ಥಳಗಳಿಗೆ ತೆರಳಿ ಜಿಪಿಎಸ್ ಮಾಡಿದ ಬಳಿಕ ಇ-ಸ್ವತ್ತು ಉತಾರ ಮಾಡುವದಾಗಿ ಹೇಳುತ್ತಾರೆ.ಆದರೆ ಬೆಣಚಮಟ್ಟಿ ಗ್ರಾಮಸ್ಥರು ೬ ತಿಂಗಳ ಹಿಂದೆ ಹಾಕಿದ ೨ ಅರ್ಜಿಗಳು ಇನ್ನೂ ವಿಲೇವಾರಿ ಮಾಡಿರಲಿಲ್ಲ. ನಾವು ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿದು ೨ ದಿನದ ಹಿಂದೆ ಜಿಪಿಎಸ್ ಮಾಡಿದ್ದಾರೆ. ಹೀಗಾಗಿ ಪಿಡಿಒ ಅವರನ್ನು ವಜಾಗೊಳಿಸಿ ಅಥವಾ ಬೇರೆಡೆ ವರ್ಗಾವಣೆ ಮಾಡಿ ಎಂದು ಆಗ್ರಹಿಸಿದರು.
ಪ್ರತಿಭಟನೆ ಹಿನ್ನೆಲೆ ಜಿಪಂ ಪಿಡಿ ಎಂ.ವಿ.ಚಳಗೇರಿ ಪ್ರತಿಭಟನಾಕಾರರ ಅಹವಾಲು ಆಲಿಸಿದ ಬಳಿಕ ನಡೆಸಿದ ಸಂಧಾನ ಸಭೆ ವಿಫಲವಾಯಿತು.ಸಂಘಟನೆಯ ಯಮನೂರಪ್ಪ ಅಬ್ಬಿಗೇರಿ, ಯಮನೂರಪ್ಪ ಹರಿಜನ ಹಾಗೂ ಶಿವಕುಮಾರ ಜಾಧವ, ಕಿರಣ ರಾಠೋಡ, ಎಸ್.ಎಂ. ಪೂಜಾರ, ರೋಣಪ್ಪ ಚಿಲಜರಿ, ಮುತ್ತಪ್ಪ ಹುಣಸಿಮರದ, ಶಿವಪ್ಪ ಮಾದರ, ಮುತ್ತಪ್ಪ ಹುಣಸಿಮರದ, ಸಚಿನ ಕಾಳೆ, ತಾಪಂ ಇಒ ಮಂಜುಳಾ ಹಕಾರಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸೇರಿದಂತೆ ಇತರರು ಇದ್ದರು.