ನ್ಯಾ.ಸದಾಶಿವ, ಕಾಂತರಾಜ್ ಆಯೋಗ ವರದಿ ಅಂಗೀಕಾರಕ್ಕೆ ಆಗ್ರಹ

KannadaprabhaNewsNetwork |  
Published : Nov 30, 2023, 01:15 AM IST
ಚಿತ್ರದುರ್ಗ ಎರಡನೇ ಪುಟದ  ಬಾಟಂ  | Kannada Prabha

ಸಾರಾಂಶ

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆ ನ್ಯಾಯಮೂರ್ತಿ ಸದಾಶಿವ ಹಾಗೂ ಕಾಂತರಾಜ್ ಆಯೋಗದ ವರದಿಯನ್ನು ಅಂಗೀಕರಿಸಿ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ದಾದಾಸಾಹೇಬ್ ಎನ್.ಮೂರ್ತಿ ಸ್ಥಾಪಿತ) ವತಿಯಿಂದ ಬುಧವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಚಿತ್ರದುರ್ಗದಲ್ಲಿ ದಸಂಸದಿಂದ ಪ್ರತಿಭಟನೆ । ಜಿಲ್ಲಾಧಿಕಾರಿಗೆ ಮನವಿ ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆ ನ್ಯಾಯಮೂರ್ತಿ ಸದಾಶಿವ ಹಾಗೂ ಕಾಂತರಾಜ್ ಆಯೋಗದ ವರದಿಯನ್ನು ಅಂಗೀಕರಿಸಿ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ದಾದಾಸಾಹೇಬ್ ಎನ್.ಮೂರ್ತಿ ಸ್ಥಾಪಿತ) ವತಿಯಿಂದ ಬುಧವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಸಭೆ ಮಾಡಿದರು. ಪರಿಶಿಷ್ಟ ಜಾತಿಗೆ ಉದ್ಯೋಗ, ಶಿಕ್ಷಣದಲ್ಲಿ ಕಲ್ಪಿಸಿರುವ ಶೇಕಡ 15 ರಷ್ಟು ಮೀಸಲಾತಿ ಪರಿಶಿಷ್ಟ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಸಮನಾಗಿ ಹಂಚಿಕೆಯಾಗಿಲ್ಲ. ಈ ತಾರತಮ್ಯ ನಿವಾರಣೆಗಾಗಿ ಕಳೆದ 30 ವರ್ಷಗಳಿಂದ ಸಂಘಟನೆಯ ಹೋರಾಟದ ಫಲವಾಗಿ 2005 ರಲ್ಲಿ ಎ.ಜೆ.ಸದಾಶಿವ ಆಯೋಗ ರಚನೆಯಾಗಿತ್ತು. ಆದರೆ ಆ ವರದಿಯನ್ನು ಜಾರಿಗೊಳಿಸದೆ ಸರ್ಕಾರಗಳು ನಿರಾಸಕ್ತಿ ತೋರುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.

ರಾಜ್ಯ ಸರ್ಕಾರ ಕಾಂತರಾಜ್ ಆಯೋಗದ ವರದಿ ಸ್ವೀಕಾರದ ವಿಚಾರದಲ್ಲಿ ಮೀನಮೇಷ ಎಣಿಸುತ್ತಿದೆ. ಶೋಷಿತರ ಪರವಾಗ ಮಾತನಾಡುವ ಸಿಎಂ ಸಿದ್ದರಾಮಯ್ಯನವರು ವರದಿಗಳನ್ನು ಸದನದಲ್ಲಿ ಮಂಡಿಸಿ, ಚರ್ಚೆಗೆ ಅವಕಾಶ ನೀಡಬೇಕು. ಜನಸಂಖ್ಯೆ ಆಧರಿಸಿ ಮೀಸಲಾತಿ ಹಂಚಿಕೆ ಮಾಡುವ ಮೂಲಕ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.

ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಉಭಯ ಸದನಗಳಲ್ಲಿ ಮಂಡಿಸಿ, ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ತುರ್ತಾಗಿ ಶಿಫಾರಸ್ಸು ಮಾಡಬೇಕು. ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಪರಿಶಿಷ್ಟ ಒಳ ಮೀಸಲಾತಿ ವರ್ಗಿಕರಣಕ್ಕೆ ಮುಂದಾಗಬೇಕು. 2008ರಲ್ಲಿ ಉಷಾ ಮೆಹ್ರ ಸಮಿತಿ ನೀಡಿರುವ ವರದಿಯಂತೆ ಸಂವಿಧಾನದ ಅನುಚ್ಛೇದ 341ಕ್ಕೆ ತಿದ್ದುಪಡಿ ಮಾಡಿ ಸಂವಿಧಾನ ಷೆಡ್ಯೂಲ್-9 ರಲ್ಲಿ ಸೇರಿಸಬೇಕೆಂದು ಒತ್ತಾಯಿಸಿದರು.ಸುಪ್ರೀ ಕೋರ್ಟ್ 7 ನ್ಯಾಯಾಧೀಶರ ಪೀಠದಲ್ಲಿರುವ ವಿವಿಧ ರಾಜ್ಯಗಳ ಒಳಮೀಸಲಾತಿ ಪ್ರಕರಣಗಳ ಪರವಾಗಿ ಕೇಂದ್ರ ಸರ್ಕಾರ ಬಲವಾಗಿ ವಾದ ಮಂಡಿಸಿ ಒಳ ಮೀಸಲಾತಿ ವರ್ಗಿಕರಿಸಬೇಕು. ಕಾಂತರಾಜ್ ಆಯೋಗದ ವರದಿಯನ್ನು ಸದನದಲ್ಲಿ ಚರ್ಚಿಸಿ, ಅಂಗೀಕರಿಸಿ ಜನಸಂಖ್ಯೆ ಗನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಬೇಕು. ನಾಗಮೋಹನದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡಿ ಸಂವಿಧಾನದ ಷೆಡ್ಯೂಲ್-೯ ರಲ್ಲಿ ಸೇರಿಸಬೇಕು. ಮೀಸಲಾತಿ ಪ್ರಮಾಣವನ್ನು ಶೇಕಡ 75 ಕ್ಕೆ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿಯಲ್ಲಿ ಸಲ್ಲಿಸಿದರು.

ದಸಂ ಜಿಲ್ಲಾಧ್ಯಕ್ಷ ಸಿ.ಎಚ್.ಮಂಜುನಾಥ, ಸಂಘಟನೆಯ ವಿಭಾಗೀಯ ಕಾರ್ಯದರ್ಶಿ ನೇಹ ಮಲ್ಲೇಶ್‌, ತಾಲೂಕ ಅಧ್ಯಕ್ಷ ಡಿ.ವೀರಭದ್ರಪ್ಪ, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ದಾದಾಪೀರ್, ಡಿ.ಶಿವಣ್ಣ, ಜಾಕೀರ್ ಹುಸೇನ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬ ವ್ಯಾಪಾರಸ್ಥ ಜಿಎಸ್‌ಟಿ ಅಡಿಯಲ್ಲೇ ವ್ಯವಹರಿಸಿ: ಡಾ.ಕಿಶೋರ ಭಟ್ಟ
ಬಸವತತ್ವ ಪಾಲನೆಯಿಂದ ವಿಶ್ವಮಾನವರಾಗಲು ಸಾಧ್ಯ: ಸಚಿವ ತಿಮ್ಮಾಪುರ