ಶಿಗ್ಗಾಂವಿ: ಮಾಜಿ ಸಂಸದ ರಮೇಶ ಕತ್ತಿ ಅವರು ವಾಲ್ಮೀಕಿ ನಾಯಕ ಸಮುದಾಯದ ಜನರಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಅವಮಾನಿಸಿದ್ದು ಕೂಡಲೇ ಜಾತಿ ನಿಂದನೆ ಕೇಸ್ ಪ್ರಕರಣ ದಾಖಲಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪಟ್ಟಣದ ಪೊಲೀಸ್ ಠಾಣೆಗೆ ಶಿಗ್ಗಾಂವಿ ತಾಲೂಕಿನ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು.ನ್ಯಾಯವಾದಿ ಹಾಗೂ ಮುಖಂಡ ಮಾರುತಿ ವಾಲ್ಮೀಕಿ ಮಾತನಾಡಿ, ವಾಲ್ಮೀಕಿ ಸಮುದಾಯದ ಬಗ್ಗೆ ಮಾತನಾಡುವಾಗ ಇತಿಹಾಸ ತಿಳಿದು ಎಚ್ಚರಿಕೆಯಿಂದ ಮಾತನಾಡಬೇಕು, ಇಡೀ ಭಾರತ ದೇಶಕ್ಕಾಗಿ ಜೀವವನ್ನು ಕೊಟ್ಟು ತ್ಯಾಗ ಮಾಡಿದ ಸಮುದಾಯವಾಗಿದೆ, ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸಮುದಾಯ ಈ ವಾಲ್ಮೀಕಿ ಸಮುದಾಯವಾಗಿದೆ. ಓರ್ವ ಜನ ನಾಯಕನಾಗಿ ಒಂದು ಸಮುದಾಯವನ್ನ ನಿಂದಿಸುವುದು ಎಷ್ಟು ಸರಿ? ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಪೂರ್ವದಲ್ಲಿ ರಾಮಾಯಣ ನೀಡಿದ ಮಹರ್ಷಿ ವಾಲ್ಮೀಕಿಯವರ ವಂಶಸ್ಥರಿಗೆ ಈ ರೀತಿಯ ಅವಾಚ್ಯ ಶಬ್ದ ಬಳಸಿ ಜಾತಿ ನಿಂದನೆ ಮಾಡಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮೂಲಕ ಎಚ್ಚರಿಸಬೇಕಾಗುತ್ತದೆ. ಕೂಡಲೇ ರಮೇಶ ಕತ್ತಿ ಬೇಷರತ್ ಕ್ಷಮೆ ಯಾಚಿಸಬೇಕು, ಇಲ್ಲವಾದರೆ ಅಖಂಡ ವಾಲ್ಮೀಕಿ ಸಮುದಾಯದಿಂದ ಉಗ್ರ ಪ್ರತಿಭಟನೆಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.ವಾಲ್ಮೀಕಿ ಯುವ ಘಟಕದ ತಾಲೂಕಾಧ್ಯಕ್ಷ ಬಸವರಾಜ ವಾಲ್ಮೀಕಿ ಮಾತನಾಡಿ, ಬೆಳಗಾವಿ ಡಿಸಿಸಿ ಬ್ಯಾಂಕಿನ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಬೆಲ್ಲದ ಬಾಗೇವಾಡಿಯಲ್ಲಿ ರಮೇಶ ಕತ್ತಿ ನಮ್ಮ ವಾಲ್ಮೀಕಿ/ನಾಯಕ/ಬೇಡ ಸಮುದಾಯದ ಜನರಿಗೆ ಅವಾಚ್ಯ ಶಬ್ದದಿಂದ ನಿಂದಿಸಿದಲ್ಲದೆ ಜಾತಿ ನಿಂದನೆ ಮಾಡಿ ಅವಮಾನಿಸಿದ್ದಾರೆ. ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದಾಖಲಾಗಿದೆ. ಆದ ಕಾರಣ ರಮೇಶ ಕತ್ತಿಯವರನ್ನು ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದರು.ನಂತರ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿದ ವಾಲ್ಮೀಕಿ ಸಮುದಾಯದ ಮುಖಂಡರು, ಕಾನೂನು ಕ್ರಮ ಕೈಗೊಳ್ಳುವಂತೆ ಶಿಗ್ಗಾಂವಿ ಪೊಲೀಸ್ ಠಾಣೆಯ ಮೂಲಕ ಮನವಿ ಅರ್ಪಿಸಿ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಂಜುನಾಥ ಮಲ್ಲಾಡದ, ಮಲ್ಲೇಶಪ್ಪ ಚೋಟ್ಟೆಪ್ಪನವರ, ಮಲ್ಲಿಕಾರ್ಜುನಗೌಡ ಪಾಟೀಲ, ಪ್ರಕಾಶ ಕ್ಯಾಲಕೊಂಡ, ಮಾರುತಿ ವಾಲ್ಮೀಕಿ, ಮಹೇಶ ತಳವಾರ, ಚಂದ್ರು ಓಲೇಕಾರ, ಶಿವಪ್ಪ ಓಲೇಕಾರ, ಗದಿಗೆಪ್ಪ ಓಲೇಕಾರ, ರವಿ ಹಾದಿಮನಿ, ಮಂಜು ದೊಡ್ಡಮನಿ, ಮಂಜು ಪಾಟೀಲ ಸೇರಿದಂತೆ ಹಲವಾರು ಮುಖಂಡರು ಇದ್ದರು.