ಬಗರ್‌ಹುಕುಂ ಜಮೀನು ಮಂಜೂರಾತಿಗೆ ಒತ್ತಾಯ

KannadaprabhaNewsNetwork |  
Published : Feb 18, 2025, 12:33 AM IST
೧೭ಕೆಎಲ್‌ಆರ್-೩ರೈತರ ವಿವಿಧ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಡಿಸಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸುತ್ತಿರುವುದು. | Kannada Prabha

ಸಾರಾಂಶ

ಸರ್ಕಾರ ಭೂಮಿ ಮಂಜೂರಾತಿ ಸಮಿತಿಗಳನ್ನು ಆಯ್ಕೆ ಮಾಡಿದ್ದರೂ ಸಹ ರೈತರ ಅರ್ಜಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೆ ವಜಾ ಮಾಡಲಾಗುತ್ತಿದೆ. ಯಾವ ಕಾರಣದಿಂದ ವಜಾ ಮಾಡಲಾಗುತ್ತಿದೆ ಇದಕ್ಕೆ ನಿರ್ದಿಷ್ಟವಾದ ಕಾರಣಗಳು ಪರಿಹಾರವನ್ನು ಅಧಿಕಾರಿಗಳು ನೀಡುತ್ತಿಲ್ಲ. ಜಮೀನುಗಳನ್ನು ದುರಸ್ತಿ ಮಾಡಿ ಹೊಸ ಸರ್ವೆ ನಂಬರುಗಳನ್ನು ನೀಡಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರ ರೈತರಿಗೆ ಭೂಮಿ ಮಂಜೂರಾತಿಗೆ ಸಲ್ಲಿಸಿದ ಅರ್ಜಿಗಳನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡಿ ಪರಿಹಾರ ಸೇರಿದಂತೆ ರೈತರ ವಿವಿಧ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ, ಜಿಲ್ಲೆಯ ರೈತರು ಶ್ರಮಜೀವಿಗಳು, ಜಿಲ್ಲೆಯಲ್ಲಿ ಮಳೆಯು ಪ್ರತಿ ವರ್ಷ ಕಡಿಮೆಯಾಗುತ್ತಿದೆ ಅಲ್ಪಸ್ವಲ್ಪವಾಗಿಯೇ ಸಿಗುವ ಅಂತರ್ಜಲವನ್ನು ಬಳಸಿಕೊಂಡು ಕೃಷಿ ಮಾಡಿ ಜೀವನ ನಡೆಸುವ ಪರಿಸ್ಥಿತಿ ಉಂಟಾಗಿದೆ ಎಂದರು.

ಪರಿಶೀಲಿಸದೆ ಅರ್ಜಿ ವಜಾ

ರೈತರು ಕೃಷಿ ಮಾಡುತ್ತಿರುವ ಸರ್ಕಾರಿ ಗೋಮಾಳವನ್ನು ಉಳುವವನೇ ಭೂಮಿ ಒಡೆಯ ಯೋಜನೆಯಲ್ಲಿ ಜಿಲ್ಲೆಯ ಸಾವಿರಾರು ರೈತರಿಗೆ ಭೂಮಿ ಮಂಜೂರು ಮಾಡಲಾಗಿದೆ. ರೈತರು ಇನ್ನಷ್ಟು ಭೂಮಿ ಮಂಜೂರು ಮಾಡಲು ಸಾವಿರಾರು ಅರ್ಜಿಗಳನ್ನು ಹಾಕಿದ್ದಾರೆ. ಸರ್ಕಾರ ಭೂಮಿ ಮಂಜೂರಾತಿ ಸಮಿತಿಗಳನ್ನು ಆಯ್ಕೆ ಮಾಡಿದ್ದರೂ ಸಹ ರೈತರ ಅರ್ಜಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೆ ವಜಾ ಮಾಡಲಾಗುತ್ತಿದೆ. ಯಾವ ಕಾರಣದಿಂದ ವಜಾ ಮಾಡಲಾಗುತ್ತಿದೆ. ಇದಕ್ಕೆ ನಿರ್ದಿಷ್ಟವಾದ ಕಾರಣಗಳು ಪರಿಹಾರವನ್ನು ಅಧಿಕಾರಿಗಳು ನೀಡುತ್ತಿಲ್ಲ ಎಂದು ಆರೋಪಿಸಿದರು.ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸುಮಾರು ೬೦-೭೦ ವರ್ಷಗಳಿಂದ ರೈತರಿಗೆ ಮಂಜೂರು ಮಾಡಿರುವ ಜಮೀನುಗಳನ್ನು ದುರಸ್ತಿ ಮಾಡಿ ಹೊಸ ಸರ್ವೆ ನಂಬರುಗಳನ್ನು ನೀಡಿಲ್ಲ. ಇದರಿಂದ ರೈತರು ತಮ್ಮ ಕುಟುಂಬದಲ್ಲಿ ವಿಭಾಗ ಮಾಡಿಕೊಳ್ಳಲು ಜಮೀನಿನ ಮೇಲೆ ಸಾಲ ಪಡೆಯಲು ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗದೆ ತೊಂದರೆಗೆ ಒಳಗಾಗುತ್ತಿರುತ್ತಾರೆ ಎಂದರು.

ರಿಯಲ್‌ ಎಸ್ಟೇಟ್‌ಗೆ ಕೆಂಪು ಹಾಸು

ಶ್ರೀಮಂತರು ಮತ್ತು ರಿಯಲ್ ಎಸ್ಟೇಟ್ ಏಜೆಂಟರ ಜಮೀನುಗಳು ಮಾತ್ರ ಅಳತೆ ಮಾಡಿ ದುರಸ್ತಿಯಾಗುತ್ತಿರುವುದನ್ನು ಕಂಡರೆ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅನುಮಾನಗಳು ಬರುತ್ತದೆ ಅಳತೆ ಮಾಡಿ ದುರಸ್ತಿ ಮಾಡಿರುವ ಹೊಸ ಸರ್ವೇ ನಂಬರ್ ಗಳನ್ನು ಇಂಡೀಕರಣ ಮಾಡಲು ವರ್ಷಾನುಗಟ್ಟಲೇ ತಾಲೂಕು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ರೈತರಿಗೆ ನಿರ್ಮಾಣಗೊಂಡಿದೆ ಎಂದು ಆರೋಪಿಸಿದರು.ಸಂಘಟನೆಯ ಜಿಲ್ಲಾ ಅಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್ ಮಾತನಾಡಿ, ರೈತರಿಗೆ ಮಂಜೂರು ಮಾಡಿರುವ ಜಮೀನುಗಳನ್ನು ಅಳತೆ ಮಾಡುವ ಮೂಲಕ ದುರಸ್ತಿ ಮಾಡಿ ಪಿ ನಂಬರ್ ಗಳನ್ನು ತೆಗೆದು ಹೊಸ ಸರ್ವೆ ನಂಬರ್ ನೀಡಬೇಕು. ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ನೈಜ ರೈತರಿಗೆ ಕೂಡಲೇ ಜಮೀನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ

ಹಸಿರು ಸೇನೆಯ ರಾಜ್ಯ ಸಂಚಾಲಕ ಕೆ. ಆನಂದ್ ಕುಮಾರ್ ಮಾತನಾಡಿ, ರೈತರಿಗೆ ಮಂಜೂರಾದ ಜಮೀನುಗಳು ಈಗಾಗಲೇ ಪೋಡಿ ಮಾಡಿರುವ ಹೊಸ ಸರ್ವೆ ನಂಬರುಗಳನ್ನು ಆರ್.ಟಿ.ಸಿ.ಯಲ್ಲಿ (ಪಹಣಿ) ಇಂಡೀಕರಣ ಮಾಡಬೇಕು ಕಂದಾಯ ಇಲಾಖೆಯಲ್ಲಿ ರೈತರಿಗೆ ಒಂದು ಕಾನೂನು ಆದರೆ ಶ್ರೀಮಂತರಿಗೆ ಮತ್ತೊಂದು ಕಾನೂನು ಆಗಿದೆ. ರೈತರ ಕೆಲಸ ಕಾರ್ಯಗಳ ವಿಳಂಬ ಧೋರಣೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುವಂತೆ ಒತ್ತಾಯಿಸಿದರು.ಜಿಲ್ಲಾಧಿಕಾರಿ ಭರವಸೆ

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ನಿಮ್ಮ ಬೇಡಿಕೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿಸನಹಳ್ಳಿ ಬೈಚೇಗೌಡ, ಮಹಿಳಾ ಸಂಚಾಲಕಿ ರಾಧಮ್ಮ, ಬಯಲುಸೀಮೆಯ ಕಾರ್ಯದರ್ಶಿ ಪ್ರಭಾಕರ್ ಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ದಿನ್ನೇಹೊಸಹಳ್ಳಿ ರಮೇಶ್, ಮುಖಂಡರಾದ ವರದಾಪುರ ನಾಗರಾಜ, ತಿಪ್ಪಸಂದ್ರ ಹರೀಶ್, ಚಿನ್ನಾಪುರ ಮಂಜುನಾಥ್, ಮುನಿವೆಂಕಟಪ್ಪ, ವೆಂಕಟಸ್ವಾಮಿರೆಡ್ಡಿ, ಗುರಪ್ಪ, ಬೇವಹಳ್ಳಿ ಶ್ರೀನಿವಾಸ್, ಗೋಪಾಲಕೃಷ್ಣ, ಭಾರತಮ್ಮ, ಸರಸ್ವತಮ್ಮ, ಅನ್ನಪೂರ್ಣಮ್ಮ, ನಾಗರಾಜ್, ರಾಜಣ್ಣ, ಯಲ್ಲಪ್ಪ, ನಾರಾಯಣಸ್ವಾಮಿ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ