ಲಕ್ಷ್ಮೇಶ್ವರ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಸಿದ್ಧವಾಗಿರುವ ಕಪ್ಪತ್ತಗುಡ್ಡದ 10 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ತಹಸೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕಪ್ಪತ್ತಗುಡ್ಡದಲ್ಲಿ ಮತ್ತೆ ಗಣಿಗಾರಿಕೆಗೆ ಅನುಮತಿ ನೀಡಲು ಗಣಿಗಾರಿಕೆಯ ನಡೆಸುವ ಪ್ರಭಾವಿಗಳ ಒತ್ತಡ ಹೆಚ್ಚಾಗಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಪ್ಪತಗುಡ್ಡ ವನ್ಯಜೀವಿಧಾಮ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಕೈಗೊಳ್ಳದಂತೆ ನಿಷೇಧಿಸುವ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ತಕ್ಷಣ ಆಕ್ಷೇಪಣೆ ಪತ್ರ ಸಲ್ಲಿಸಬೇಕು ಎಂದು ಈ ಜಿಲ್ಲೆಯ ಎಲ್ಲ ಜನರ ಪರವಾಗಿ ಆಗ್ರಹಿಸುತ್ತೇವೆ. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಪರವಾನಗಿ ನೀಡಬಾರದು. ಸಾವಿರಾರು ಬಗೆಯ ಖನಿಜ ಸಂಪತ್ತು ಕಪ್ಪತ್ತಗುಡ್ಡದ ಗರ್ಭದಲ್ಲಿದ್ದು, ಅದನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಡುವ ಮೂಲಕ ಯಾವುದೇ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿಯಬಾರದು ಮನವಿ ಮಾಡಿದರು.
ಕಾನಿಪಸಂಘ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಕಳಸಾಪುರ, ಕಾರ್ಯದರ್ಶಿ ಅಶೋಕ ಸೊರಟೂರ, ದಿಗಂಬರ ಪೂಜಾರ, ನಾಗರಾಜ ಹಣಗಿ, ಪರಮೇಶ ಲಮಾಣಿ, ಸುರೇಶ ಲಮಾಣಿ, ಕರಿಯಪ್ಪ ಶಿರಹಟ್ಟಿ, ಶಿವಲಿಂಗಯ್ಯ ಹೊತಗಿಮಠ, ಸೋಮಣ್ಣ ಯತ್ತಿನಹಳ್ಳಿ, ಮಂಜುನಾಥ ರಾಠೋಡ ಇದ್ದರು.