ಶನಿವಾರಸಂತೆ: ಹಾಸನ- ಕೊಡಗು ಪಶ್ಚಿಮಘಟ್ಟ ಸಾಲಿನಲ್ಲಿರುವ ಭತ್ತದರಾಶಿ ಬೆಟ್ಟ ಮತ್ತು ಗವಿ ಬೆಟ್ಟ ಮಧ್ಯ ಭಾಗದಲ್ಲಿರುವ ಹೊಸೂರು-ಹೊಸಕೋಟೆ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ನೀಡಿರುವ ಅನುಮತಿಗೆ ವಿರೋಧ ವ್ಯಕ್ತವಾಗಿದೆ. ಶನಿವಾರ ಹೊಸೂರು ಗ್ರಾಮದಲ್ಲಿ ಸಕಲೇಶಪುರ ತಾಲೂಕಿನ ವಿವಿಧ 5 ಗ್ರಾ.ಪಂ. ವ್ಯಾಪ್ತಿಯ ಪ್ರಮುಖರು ಮತ್ತು ಕೊಡಗು ಜಿಲ್ಲೆಯ ಪುಷ್ಪಗಿರಿ ಪಶ್ಚಿಮಘಟ್ಟ ಸಾಲಿನಲ್ಲಿರುವ ಕೂತಿ, ತೋಳೂರು ಶೆಟ್ಟಳ್ಳಿ ವ್ಯಾಪ್ತಿಯ ಹೋರಾಟಗಾರರು ಮತ್ತು ಹಸಿರು ಸೇನಾ ಹೋರಾಟಗಾರರ ಸಭೆ ನಡೆಯಿತು.
ಸಭೆಯಲ್ಲಿ ಹಸಿರು ಸೇನಾ ಹೋರಾಟಗಾರ ಎಚ್.ಟಿ.ಪುಟ್ಟೇಗೌಡ ಮಾತನಾಡಿ, ಹೊಸೂರು -ಹೊಸಕೋಟೆ ಬೆಟ್ಟವು ಪಶ್ಚಿಮಘಟ್ಟ ಸಾಲಿನಲ್ಲಿರುವ ಬೆಟ್ಟವಾಗಿದ್ದು ಇದರ ಕೆಳ ಭಾಗದಲ್ಲಿ 5 ಗ್ರಾ.ಪಂ.ಗಳು ವ್ಯಾಪ್ತಿಯನ್ನು ಒಳಗೊಂಡಿದೆ. ಬೆಟ್ಟದ ಕೆಳ ಭಾಗದಲ್ಲಿ ಮೂರು ಹೊಳೆಗಳಿದ್ದು, ಈ ಭಾಗದಿಂದ ನೀರು ಹರಿಯುವುದರಿಂದ ನಿತ್ಯ ಹಸಿರು ಪ್ರದೇಶವಾಗಿದೆ. ರೈತರು ಮತ್ತು ಜನರು ಹಸಿರು ವಾತಾವರಣ ನಡುವೆ ವ್ಯವಸಾಯ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ ಸರ್ಕಾರ ನಮ್ಮ ವಿರೋಧದ ನಡುವೆ ಬೆಟ್ಟದಲ್ಲಿ ಗಣಿಗಾರಿಕೆ ಮಾಡಲು ಗುತ್ತಿಗೆದಾರರಿಗೆ ಪರವಾನಗಿ ನೀಡಿದೆ ಎಂದರು.
ಪರಿಸರ ಹೋರಾಟಗಾರ ಆರ್.ಪಿ.ವೆಂಕಟೇಶ್‍ಮೂರ್ತಿ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವುದಕ್ಕೆ ಪರಿಸರ ನಾಶವಾಗುತ್ತಿರುವುದು ಕಾರಣವಾಗಿದೆ ಎಂದು ಹೇಳುತ್ತಿರುವ ಅಧಿಕಾರಿಗಳೇ ಈಗ ಪಶ್ಚಿಮಘಟ್ಟ ಸಾಲಿನ ಬೆಟ್ಟದಲ್ಲಿ ಗಣಿಗಾರಿಕೆ ಮಾಡಲು ಗುತ್ತಿಗೆದಾರರಿಗೆ ಪರವಾನಗಿ ನೀಡಿರುವುದು ದುರಂತ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಪಕ್ಷ, ಜಾತಿ-ಧರ್ಮ ಭೇದಭಾವ ಬಿಟ್ಟು ಪಶ್ಚಿಮಘಟ್ಟ ಉಳಿಸುವ ಸಲುವಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.
ಸೋಮವಾರಪೇಟೆಯ ಕೂತಿ ದಿವಾಕರ್, ವಿವಿಧ ಸಂಘಟನಾ ಹೋರಾಟಗಾರರಾದ ಡಾ.ರಾಮಚಂದ್ರ, ಎಚ್.ಸಿ.ವಿಠಲ, ಕೊಡಗಿನ ಹೊಸಬೀಡು ಶಶಿ, ಗುಂಡೇಗೌಡ, ಪುರುಷೋತ್ತಮ್, ಹೋರಾಟ ಸಮಿತಿ ಪ್ರಮುಖ ಹೊಸೂರು ರಮೇಶ್ ಮುಂತಾದವರು ಮಾತನಾಡಿದರು.
ಸರ್ಕಾರ ನೀಡಿರುವ ಗಣಿಗಾರಿಕೆ ಪರವಾನಗಿ ರದ್ದುಗೊಳಿಸುವಂತೆ ಮಂಗಳವಾರ ಬೆಟ್ಟದಲ್ಲಿ ಅಳವಡಿಸಿರುವ ಪರವಾನಗಿ ಸೂಚನಾ ಫಲಕಕ್ಕೆ ಮಸಿ ಬಳಿಯುವುದು ಮತ್ತು ಮುಂದಿನ ಲೋಕಾಸಭಾ ಚುನಾವಣೆ ಬಹಿಷ್ಕರಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಪ್ರಮುಖರಾದ ಶಶಿಕುಮಾರ್, ಜಯಣ್ಣ, ರವಿ, ಹೊಸೂರು ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಮಂಜುನಾಥ್, ಉಪಾಧ್ಯಕ್ಷೆ ಜಾನಕಿ ಶಿವಣ್ಣ, ಜಯರಾಜ್, ದಿನೇಶ್, ಬಸಪ್ಪ ಮುಂತಾದವರಿದ್ದರು.