ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ

KannadaprabhaNewsNetwork | Published : Aug 23, 2024 1:14 AM

ಸಾರಾಂಶ

ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್​ ನಾಯಕರ ನಡೆ ಖಂಡಿಸಿ, ಮುಡಾ ಹಗಣದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಿಸಿ ಕಲಬುರಗಿ ನಗರದ ಸರ್ದಾರ್​ ವಲ್ಲಭಬಾಯಿ ಪಟೇಲ್​ ವೃತ್ತದ ಬಳಿ ಜಿಲ್ಲಾ ಭಾರತೀಯ ಜನತಾ ಪಕ್ಷದಿಂದ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯದ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್​ ನಾಯಕರ ನಡೆ ಖಂಡಿಸಿ, ಮುಡಾ ಹಗಣದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಿಸಿ ಕಲಬುರಗಿ ನಗರದ ಸರ್ದಾರ್​ ವಲ್ಲಭಬಾಯಿ ಪಟೇಲ್​ ವೃತ್ತದ ಬಳಿ ಜಿಲ್ಲಾ ಭಾರತೀಯ ಜನತಾ ಪಕ್ಷದಿಂದ ಪ್ರತಿಭಟನೆ ನಡೆಯಿತು.

ಪಟೇಲ್‌ ವೃತ್ತದಲ್ಲಿ ಸೇರಿದ್ದ ಬಿಜೆಪಿ ಮುಖಂಡರು ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ ಪಕ್ಷದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಕಾಂಗ್ರೆಸ್​ ಸರ್ಕಾರದ ದಲಿತ ವಿರೋಧಿ ನೀತಿಗಳನ್ನು ಖಂಡಿಸಿದರು. ಅಲ್ಲಿಂದ ಕಾಲ್ನಡಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೂ ಸಾಗಿ ಅಲ್ಲಿ 1 ಗಂಟೆ ರಸ್ತೆತಡೆ ನಡೆಸಿ ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖರಾದ ರಾಜಕುಮಾರ್ ಪಾಟೀಲ್ ತೆಲ್ಕೂರ್, ಶಶಿಲ್ ನಮೋಶಿ, ಶಿವರಾಜ ಪಾಟೀಲ್ ರದ್ದೆವಾಡಿ, ಅವಿನಾಶ್ ಜಾಧವ್, ನೀತಿನ್ ಗುತ್ತೆದಾರ್, ಹರ್ಷಾ ಗುತ್ತೆದಾರ್, ದತ್ತಾತ್ರೇಯ ಪಾಟೀಲ್ ರೇವೂರ್, ಮಾತನಾಡುತ್ತ ಹಿಂದೆ ಯಡಿಯೂರಪ್ಪನವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿಸಿದ್ದಾಗ ಸಿದ್ರಾಮಯ್ಯನವರು ನಾನೇಕೆ ರಾಜೀನಾಮೆ ನೀಡಬೇಕೆಂದು ಪ್ರಶ್ನಿಸುತ್ತಿದ್ದಾರೆ. ಪ್ರಸ್ತುತ ರಾಜ್ಯಪಾಲರ ನಿರ್ಣಯಿಂದ ಅಂತಹದ್ದೇ ಸಂದರ್ಭ ಉಂಟಾದರೂ ಕೂಡಾ ಸ್ವಾಗತಿಸಿದ್ದರು. ಈಗ ಅದೇ ಸಿದ್ದರಾಮಯ್ಯನವರು ರಾಜೀನಾಮೆ ನೀಡೋದಿಲ್ಲವೆಂದು ಹಠಕ್ಕೆ ಬಿದ್ದಿದ್ದಾರೆ ಹಿಂದೆ ಇವರೇ ರಾಜೀನಾಮೆಗೆ ಆಗ್ರಹಿಸಿದ್ದನ್ನು ಮರೆತಿದ್ದಾರೆ. ಆರೋಪ ಕೇಳಿ ಬಂದಾಕ್ಷಣ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಸಿದ್ದಾಮಯ್ಯನವರು ಈಗ ಅದೇ ಪ್ರಸಂಗ ಎದುರಾದರೂ ರಾಜೀನಾಮೆ ನೀಡೋದಿಲ್ಲವೆಂದಿದ್ದಾರೆ. ರಾಜ್ಪಾಲರ ನಡೆಯನ್ನೇ ಪ್ರಶ್ನಿಸಿ ಹೋರಾಟಕ್ಕೆ ಮುಂದಾಗಿದೆ ಕಾಂಗ್ರೆಸ್‌ ಪಕ್ಷ ಇದೆಲ್ಲವನ್ನು ನೋಡುತ್ತಿದ್ದಾರೆಂದು ಹೇಳಿದರು.

ಬಿಜೆಪಿ ಮುಖಂಡರಾದ ಅಶೋಕ್ ಬಗಲಿ, ಓಬಿಸಿ ಮೋರ್ಚಾ ರಾಜ್ಯ ಪ್ರ. ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಗಂಗಪ್ಪ ಗೌಡ ಭೋದನ, ನಿಂಗಣ್ಣ ಹುಳಗೋಳಕರ್, ಶೋಭಾ ಭಾಣಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಖ್ಯ ರಸ್ತೆ ಸಂಚಾರ 1 ಗಂಟೆಗೂ ಹೆಚ್ಚುಕಾಲ ಬಂದ್‌ ಆಗಿದ್ದರಿಂದ ವಾಹನಗಳಲ್ಲಿ ಜಿಲ್ಲಾ ಕೋರ್ಟ್‌ ಮುಖಾಂತರ ಸಂಚರಿಸಲು ಪೊಲೀಸರು ಕ್ರಮ ಕೈಗಗೊಂಡರು. ಇದರಿಂದಾಗಿ ರಸ್ತೆಯಲ್ಲೆಲ್ಲಾ ಭಾರಿ ಸಂಚಾರ ದಟ್ಟಣೆ ಕಾಡಿತ್ತು.

ರಾಜ್ಯಪಾಲರಿಗೆ ಕಾಂಗ್ರೆಸ್‌ ಅವಮಾನ ಖಂಡನೀಯ:

ಕಾಂಗ್ರೆಸ್ ಪ್ರತಿಭಟನೆ ಸಂದರ್ಭದಲ್ಲಿ ಮಾನ್ಯ ರಾಜ್ಯಪಾಲರ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ. ಅಲ್ಲದೆ, ಕೆಲವೆಡೆ ಭಾವಚಿತ್ರವನ್ನು ದಹಿಸಲಾಗಿದೆ. ಇದಲ್ಲದೆ, ಸಚಿವರಾದ ಜಮೀರ್ ಅಹ್ಮದ್, ಕೃಷ್ಣಬೈರೇಗೌಡ, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಮೊದಲಾದವರು ರಾಜ್ಯಪಾಲರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಕೊಟ್ಟಿದ್ದಾರೆ.

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಅವರು ಪ್ರಧಾನಿಯವರ ವಿರುದ್ಧ ಆಕ್ಷೇಪಾರ್ಹ ಮಾತನಾಡಿದ್ದಾರೆ. ಹಿಂಸೆಗೆ ಪ್ರಚೋದಿಸುವ ಹೇಳಿಕೆಗಳನ್ನು ಕಾಂಗ್ರೆಸ್ಸಿಗರು ನೀಡುತ್ತಿದ್ದು, ಇದರ ವಿರುದ್ಧ ಪೊಲೀಸ್ ಇಲಾಖೆಯು ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಬೇಕು ಎಂದು ಮಾಜಿ ಶಾಸಕರಾದ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌, ದತ್ತಾತ್ರೇಯ ಪಾಟೀಲ್‌ ರೇವೂರ್‌, ಹಾಲಿ ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ್‌ ಆಗ್ರಹಿಸಿದರು.

Share this article