ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಸರ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಕಾಯ್ದೆ ರೂಪಿಸಿದ್ದು, ಅದರ ಭಾಗವಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.ನಗರದ ಹೈಸ್ಕೂಲ್ ಮೈದಾನದಲ್ಲಿ ಬುಧವಾರ ದಾವಣಗೆರೆ-ಹಾವೇರಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಮಂಡಳಿ ಸ್ಥಾಪನೆಯಾಗಿ 50 ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1972ರಲ್ಲಿ ಸ್ಟಾಕ್ ಹೋಮ್ ಸಮ್ಮೇಳನದಲ್ಲಿ ಇಂದಿರಾ ಗಾಂಧಿ ಪರಿಸರ ಸಂರಕ್ಷಣೆ ಬಗ್ಗೆ ಭಾಷಣ ಮಾಡಿದ್ದಲ್ಲದೇ, ದೇಶದಲ್ಲಿ ಅದನ್ನು ಜಾರಿಗೊಳಿಸಲು ಪರಿಸರ ಸಂರಕ್ಷಣೆ, ಅರಣ್ಯ, ವನ್ಯಜೀವಿ ಸಂರಕ್ಷಾ ಕಾಯ್ದೆ ಜಾರಿಗೊಳಿಸಿದರು ಎಂದರು.
ಇಂದಿರಾ ಗಾಂಧಿ ದೂರದೃಷ್ಟಿ ಇಂದು ನಿಜವಾಗಿದ್ದು, ಎಲ್ಲಾ ಕಡೆ ಪರಿಸರ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಹೆಚ್ಚುತ್ತಿದೆ. ಅದರಲ್ಲೂ ಪ್ಲಾಸ್ಟಿಕ್ ಬಳಕೆಯಂತೂ ಗಣನೀಯವಾಗಿದ್ದು, ಇದು ಪರಿಸರಕ್ಕಷ್ಟೇ ಅಲ್ಲ, ಮನುಷ್ಯ ಸೇರಿದಂತೆ ಸಕಲ ಜೀವರಾಶಿಗೂ ಅಪಾಯದ ಸಂಕೇತ. ದಾವಣಗೆರೆ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಿಸಲು ಜಿಲ್ಲಾಡಳಿತ ಕೈಗೊಂಡ ಅಭಿಯಾನಕ್ಕೆ ಎಲ್ಲ ರೀತಿಯ ಸಹಕಾರ, ನೆರವು ನೀಡಲಾಗುವುದು ಎಂದು ಹೇಳಿದರು.ಜಿಲ್ಲೆಯಲ್ಲಿ ಸ್ವಚ್ಛ ಹಾಗೂ ಹಸಿರು ನಗರ ನಿರ್ಮಾಕ್ಕೆ ಶ್ರಮಿಸೋಣ. ಈ ಮೂಲಕ ದಾವಣಗೆರೆಯಲ್ಲಿ ಮಾದರಿ, ಪರಿಸರ ಸ್ನೇಹಿ ನಗರ, ಜಿಲ್ಲೆಯಾಗಿ ಮಾಡಲು ನಾವು, ನೀವೆಲ್ಲರೂ ಕಂಕಣಬದ್ಧರಾಗಿ ಶ್ರಮಿಸೋಣ ಎಂದು ಹೇಳಿದರು.
ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಮಾತನಾಡಿ, ಭವಿಷ್ಯಕ್ಕೋಸ್ಕರ ಶಿಕ್ಷಣ ಪಡೆಯುವುದು ಎಷ್ಟು ಮುಖ್ಯವೋ ಪರಿಸರವನ್ನು ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಸಾರ್ವಜನಿಕರು, ಸ್ಥಳೀಯ ಆಡಳಿತದ ಸಹಕಾರವೂ ಇದಕ್ಕೆ ಅತೀ ಮುಖ್ಯ ಎಂದರು.ದಾವಣಗೆರೆ-ಹಾವೇರಿ ಜಿಲ್ಲೆಗಳಲ್ಲಿ ಒಟ್ಟು 396 ಕೈಗಾರಿಕೆಗಳಿದ್ದು, ಅವುಗಳಿಂದ ಹೊರ ಬರುವ ರಾಸಾಯನಿಕ ಯುಕ್ತ ನೀರು ತುಂಗಭದ್ರಾ ನದಿ ಸೇರುತ್ತಿದೆ. ಇದರಿಂದ ಜಲ ಮಾಲಿನ್ಯವಾಗುತ್ತಿದೆ. ಹರಿಹರ, ದಾವಣಗೆರೆಯಲ್ಲಿ ಎಸ್‌ಟಿಪಿ ಘಟಕವಿದ್ದು, ಹೊನ್ನಾಳಿಯಲ್ಲಿ ಇಲ್ಲ. ಮಲಿನ ನೀರು ಸಹ ನದಿ ಪಾಲಾಗುತ್ತಿದೆ. ಹೊನ್ನಾಳಿ ಸೇತುವೆಯಿಂದ ದಿಡಗೂರುವರೆಗೂ ತುಂಗಭದ್ರಾ ಮಾಲಿನ್ಯ ಹೆಚ್ಚುತ್ತಿದೆ ಎಂದರು.
ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಗುಣಮಟ್ಟದ ಅಳತೆಗೆ ದಾವಣಗೆರೆ-ಹಾವೇರಿಯಲ್ಲಿ ವಾಯು ಮಾಪಕ ಅಳವಡಿಸಿದೆ. ಮುಂದಿನ ದಿನಗಳಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗದಂತೆ ನಿಗಾ ವಹಿಸಲಾಗಿದೆ ಎಂದರು.ಪರಿಸರ ಸ್ನೇಹಿ ಗ್ರಾಪಂ ಪ್ರಶಸ್ತಿ:
ದಾವಣಗೆರೆ ತಾ. ಮುದಹದಡಿ, ಹರಿಹರ ತಾ. ಸಾಲಕಟ್ಟಿ ಗ್ರಾಪಂ, ಚನ್ನಗಿರಿ ತಾ. ಪಾಂಡೋಮಟ್ಟಿ ಗ್ರಾಪಂಗೆ ಪರಿಸರ ಸ್ನೇಹಿ ಪ್ರಶಸ್ತಿ ನೀಡಲಾಗಿದೆ. ದಾವಣಗೆರೆ ಹಾಲುವರ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಕುರ್ಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ವಿವಿಧ ಸ್ಪರ್ಧೆಗಳಿಗೆ ಬಹುಮಾನ ವಿತರಣೆ:
ಸುವರ್ಣ ಮಹೋತ್ಸವ ಅಂಗವಾಗಿ ಚಿತ್ರಕಲೆ, ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ ಜಿಲ್ಲೆಯ ಉತ್ತರ ವಲಯ ಹಾಗೂ ದಕ್ಷಿಣ ವಲಯದ ವಿವಿಧ ಶಾಲೆಗಳ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಯಿತು.ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಸಂವಿಧಾನ ಪೀಠಿಕೆ ಬೋಧಿಸಿದರು. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ದಾವಣಗೆರೆ-ಹಾವೇರಿ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ, ಹಾವೇರಿ ಜಿಪಂ ಸಿಇಓ ರುಚಿ ಬಿಂದಾಲ್, ಹಿರಿಯ ಪರಿಸರ ಅಧಿಕಾರಿ ರಮೇಶ ಡಿ.ನಾಯಕ್, ಕರ್ನಾಟಕಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್.ಮರಿಯೋಜಿರಾವ್, ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಾಲರಾಜ, ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ ಇತರರು ಇದ್ದರು.
ಪರಿಸರ ಪ್ರೇಮಿಗಳಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಜಿಲ್ಲೆಯಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸಿ, ಪರಿಸರದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿದ್ದಕ್ಕಾಗಿ ಜಿಲ್ಲೆಯ ಆವರಗರೆ ಬಸವ ಪರಿಸರ ವೇದಿಕೆ, ದಾವಣಗೆರೆ ಸಾರ್ವಜನಿಕ ಅಭಿವೃದ್ಧಿ ವೇದಿಕೆ ಮತ್ತು ನೆಲ-ಜಲ ಪರಿಸರ ಆಂದೋಲನ ಒಕ್ಕೂಟ ಸಂಚಾಲಕ ಬಳ್ಳೂರು ರವಿಕುಮಾರ ಹಾಗೂ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯ ನಿರ್ವಾಹಕ ನಿರ್ದೇಶಕ ಎಸ್.ಡಿ.ಬಳಿಗಾರ, ನವೋದಯ ಶಿಕ್ಷಣ ಸಂಸ್ಥೆ ಮತ್ತು ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಹೊಳಿಯಪ್ಪ ಫಕೀರಪ್ಪ ಅಕ್ಕಿ, ರಟ್ಟಿಹಳ್ಳಿ ತಾಲ್ಲೂಕಿನ ಸಾ. ಗುಡ್ಡದ ಮಾದಾಪುರ ಕರಿಬಸಪ್ಪ ಕಾಗಿನೆಲ್ಲಿ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪೌರಕಾರ್ಮಿಕರಿಗೆ ಪರಿಸರಸ್ನೇಹಿ ಪ್ರಶಸ್ತಿ:ದಾವಣಗೆರೆಯ ವಾರ್ಡ್ ನಂ.24ರ ಕರಿಬಸಮ್ಮ ಮಂಜಪ್ಪ, ವಾರ್ಡ್ ನಂ.5ರ ವಸಂತಮ್ಮ ರಾಯಪ್ಪ ಮತ್ತು ವಾರ್ಡ್ ನಂ.20ರ ಜಯಮ್ಮ ಪ್ರಭು ಹಾಗೂ ಹಾವೇರಿ ಜಿಲ್ಲೆಯ ನಿಂಗಪ್ಪ ಶೇಖಪ್ಪ ಗಡ್ಡಿ, ರಾಣೇಬೆನ್ನೂರಿನ ನಾಗಪ್ಪ ಪೂಜಾರಾ, ಬ್ಯಾಡಗಿ ಪುರಸಭೆಯ ಗಂಗಮಾಳವ್ವ ಅಂತರವಳ್ಳಿ ಅವರಿಗೆ ಪರಿಸರಸ್ನೇಹಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 5ಕೆಡಿವಿಜಿ5-ದಾವಣಗೆರೆಯಲ್ಲಿ ಬುಧವಾರ ದಾವಣಗೆರೆ-ಹಾವೇರಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಮಂಡಳಿ ಸ್ಥಾಪನೆಯಾಗಿ 50 ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ. ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಶಾಸಕ ಕೆ.ಎಸ್.ಬಸವಂತಪ್ಪ ಇತರರು ಇದ್ದರು.
;Resize=(128,128))
;Resize=(128,128))