ಕನ್ನಡಪ್ರಭ ವಾರ್ತೆ ಬೆಂಗಳೂರು
ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆ, ಕೆಲಸದ ಧಾವಂತದ ನಡುವೆ ಪ್ರಕೃತಿಯು ವಸಂತ ಮಾಸದಲ್ಲಿ ಸುಂದರ ತೆಬಿಯಾ ರೋಸಿಯಾ ಹೂವುಗಳ ಮೂಲಕ ಮನಸ್ಸಿಗೆ ಮುದ ನೀಡಿದೆ.ಪ್ರತಿ ವರ್ಷದಿಂದ ಈ ವರ್ಷವೂ ಬೆಂಗಳೂರಿನ ರಸ್ತೆ ಬದಿಗಳಲ್ಲಿ, ಉದ್ಯಾನಗಳು, ಕೆರೆ ಪ್ರದೇಶಗಳು, ಅಪಾರ್ಟ್‌ಮೆಂಟ್, ಕಚೇರಿ ಆವರಣಗಳು ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಗುಲಾಬಿ, ಬಿಳಿ, ತಿಳಿ ಗುಲಾಬಿ, ಹಳದಿ ಬಣ್ಣದ ‘ತೆಬಿಯಾ ರೋಸಿಯಾ’ ಹೂವುಗಳು ಅರಳಿ ನಿಂತಿವೆ.
ಎಲೆಗಳು ಇಲ್ಲದೆ, ಕೇವಲ ಹೂವುಗಳನ್ನೇ ಹೊದ್ದು ನಿಂತಿರುವ ಮರಗಳನ್ನು ನೋಡಿದಾಗ, ಇದು ಬೆಂಗಳೂರೋ ಅಥವಾ ಜಪಾನಿನ ‘ಚೆರ್ರಿ ಬ್ಲಾಸಮ್’ ಹಬ್ಬವೋ ಎಂಬ ಅನುಮಾನ ಮೂಡುವಂತಿದೆ. ಈ ಹೂವುಗಳು ನಾಗರಿಕರು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.ಡಿಸೆಂಬರ್ ಕೊನೆಯ ವಾರದಿಂದಂದಲೇ ಹೂವು ಅರಳಲು ಆರಂಭವಾಗುತ್ತದೆ. ಆದರೆ, ಫೆಬ್ರವರಿ ತಿಂಗಳಲ್ಲಿ ಬಹುತೇಕ ಮರವನ್ನು ಈ ಹೂವುಗಳು ಆವರಿಸಿಕೊಳ್ಳುತ್ತವೆ. ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರು ನಗರದ ಸೌಂದರ್ಯವನ್ನು ಹೂವುಗಳು ಇಮ್ಮಡಿಗೊಳಿಸಿವೆ. ಕಬ್ಬನ್ ಪಾರ್ಕ್, ಲಾಲ್‌ಬಾಗ್, ಜಯನಗರ, ಎಚ್.ಎಸ್.ಆರ್ ಲೇಔಟ್ ಮತ್ತು ವೈಟ್‌ಫೀಲ್ಡ್ ಭಾಗದ ರಸ್ತೆಗಳನ್ನು ಹೂಗಳು ಆವರಿಸಿವೆ.ಮೂಲತಃ ಮೆಕ್ಸಿಕೋ, ಉತ್ತರ ಅಮೆರಿಕ ದೇಶದ ತಳಿಯಾದ ಈ ಮರಗಳನ್ನು 19ನೇ ಶತಮಾನದ ಕೊನೆಯಲ್ಲಿ ಬ್ರಿಟಿಷರ ಕಾಲದಲ್ಲಿ ಬೆಂಗಳೂರಿಗೆ ತರಲಾಯಿತು. ನಗರದ ಹವಾಮಾನಕ್ಕೆ ಈ ಮರಗಳು ಅದೆಷ್ಟು ಹೊಂದಿಕೊಂಡಿವೆ ಎಂದರೆ, ಬೆಂಗಳೂರಿನ ಅವಿಭಾಜ್ಯ ಅಂಗವಾಗಿ ಹೋಗಿವೆ. ಸುಂದರವಾಗಿ ಅರಳುವ ಈ ಹೂವುಗಳು, ನಗರದ ಮಾಲಿನ್ಯದ ನಡುವೆಯೂ ಹೊಸ ಚೈತನ್ಯ ನೀಡುತ್ತಿವೆ.ಸೋಷಿಯಲ್ ಮೀಡಿಯಾದಲ್ಲಿ ಹವಾ: ಜಾಲತಾಣಗಳಾದಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ರೀಲ್ಸ್‌ಗಳಲ್ಲಿ ಈ ಹೂವುಗಳ ಸೌಂದರ್ಯದ್ದೇ ಕಾರುಬಾರು. ಬೆಳ್ಳಂಬೆಳಗ್ಗೆ ಯುವಜನರು ಹೂವುಗಳ ಫೋಟೋಗ್ರಾಫಿ ಮಾಡುತ್ತಾರೆ. ಪ್ರವಾಸಿಗರು ಮರದ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ಪಡುವುದು ಕಂಡು ಬಂತು.