ಬಹುನಿರೀಕ್ಷೆಯ ಬೆಂಗಳೂರು ಮೆಟ್ರೋ ರೈಲಿನ ಗುಲಾಬಿ ಮಾರ್ಗದ ಉದ್ಘಾಟನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನ.13ರಂದು ನೆರವೇರಿಸಲಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಹುನಿರೀಕ್ಷೆಯ ಬೆಂಗಳೂರು ಮೆಟ್ರೋ ರೈಲಿನ ಗುಲಾಬಿ ಮಾರ್ಗದ ಉದ್ಘಾಟನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನ.13ರಂದು ನೆರವೇರಿಸಲಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಈ ಕುರಿತು ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಗುಲಾಬಿ ಮಾರ್ಗವನ್ನು ಕಾರ್ಯಾರಂಭ ಮಾಡುವ ನಮ್ಮ ಪ್ರಯತ್ನ ಕೈಗೂಡಿದೆ. ಈ ಮಾರ್ಗದ ಕಾರ್ಯಾರಂಭದೊಂದಿಗೆ ಬೆಂಗಳೂರಿನ ಮೆಟ್ರೋ ರೈಲು ಸಂಪರ್ಕ ಜಾಲ 100 ಕಿ.ಮೀ ದಾಟಲಿದೆ. 2027ರ ವೇಳೆಗೆ ಮೆಟ್ರೋ ಜಾಲವನ್ನು 170 ಕಿ.ಮೀ ಗೆ ವಿಸ್ತರಿಸುವ ಗುರಿಯೊಂದಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

7.5 ಕಿ.ಮೀ ಮಾರ್ಗ ಉದ್ಘಾಟನೆ: ಗುಲಾಬಿ ಮಾರ್ಗವು ಒಟ್ಟು 21.26 ಕಿ.ಮೀ. ಉದ್ದವಿದ್ದು, ದಕ್ಷಿಣ ಭಾಗದ ಕಾಳೇನ ಅಗ್ರಹಾರದಿಂದ ಆರಂಭಗೊಂಡು ಉತ್ತರದ ನಾಗವಾರವನ್ನು ಸಂಪರ್ಕಿಸುತ್ತದೆ. ಈ ಪೈಕಿ ಕಾಮಗಾರಿ ಮುಗಿದಿರುವ ಎತ್ತರಿಸಿದ ಮಾರ್ಗದಲ್ಲಿನ ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ 7.5 ಕಿ.ಮೀ ಮಾರ್ಗ ಮಾತ್ರ ಉದ್ಘಾಟನೆಯಾಗಲಿದೆ.ಬನ್ನೇರುಘಟ್ಟ ರಸ್ತೆಯಲ್ಲಿನ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ-ಬಿ (ಬಿಳೇಕಹಳ್ಳಿ), ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ನಿಲ್ದಾಣಗಳು ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿವೆ. ಈ ಪೈಕಿ ಜಯದೇವ ಆಸ್ಪತ್ರೆ ನಿಲ್ದಾಣವು ಹಳದಿ ಮಾರ್ಗದೊಂದಿಗೆ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾಗಿ ಸಾರ್ವಜನಿಕರಿಗೆ ಸೇವೆ ನೀಡಲಿದೆ. ಇನ್ನು ಹಳದಿ ಮಾರ್ಗವೂ ಆರ್.ವಿ. ಕಾಲೇಜು ನಿಲ್ದಾಣದಲ್ಲಿ ಹಸಿರು ಮಾರ್ಗಕ್ಕೆ ಇಂಟರ್‌ಚೇಂಜ್ ಹೊಂದಿದೆ. ಹೀಗಾಗಿ, ಗುಲಾಬಿ ಮಾರ್ಗದ ನಿಲ್ದಾಣದಲ್ಲಿ ಮೆಟ್ರೋ ಹತ್ತುವ ಪ್ರಯಾಣಿಕರು ಮೆಟ್ರೋ ಜಾಲದ ಎಲ್ಲ ನಿಲ್ದಾಣಗಳಿಗೂ ಸಂಪರ್ಕವನ್ನು ಹೊಂದಲು ಸಾಧ್ಯವಾಗಲಿದೆ.

ರೈಲಿನಲ್ಲಿ ಸಂಚರಿಸುವ ಮೋದಿ

ಮೆಟ್ರೋ ರೈಲು ಉದ್ಘಾಟನೆಗೆ ಮುನ್ನ ಪ್ರಧಾನಿ ಮೋದಿಯವರು ರೈಲಿನಲ್ಲಿ ಸಂಚರಿಸಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಹೇಳಲಾಗಿದೆ.