ಚರ್ಮ ಉತ್ಪನ್ನಗಳ ಮಾರಾಟ ಮಳಿಗೆಗೆ ನುಗ್ಗಿ ಮಹಿಳಾ ಉದ್ಯೋಗಿ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ಸರಗಳ್ಳತನಕ್ಕೆ ಯತ್ನಿಸಿದ್ದ ಕಿಡಿಗೇಡಿಯೊಬ್ಬನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದಿರಾನಗರದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚರ್ಮ ಉತ್ಪನ್ನಗಳ ಮಾರಾಟ ಮಳಿಗೆಗೆ ನುಗ್ಗಿ ಮಹಿಳಾ ಉದ್ಯೋಗಿ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ಸರಗಳ್ಳತನಕ್ಕೆ ಯತ್ನಿಸಿದ್ದ ಕಿಡಿಗೇಡಿಯೊಬ್ಬನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದಿರಾನಗರದಲ್ಲಿ ನಡೆದಿದೆ.

ಹಲಸೂರು ಸಮೀಪದ ನಿವಾಸಿ ಪ್ರಭುರಾಜ್ ಅಲಿಯಾಸ್ ರಾಜ್ ಬಂಧಿತ. 3 ದಿನಗಳ ಹಿಂದೆ ಇಂದಿರಾ ನಗರದ 100 ಅಡಿ ರಸ್ತೆಯ ಖಾಸಗಿ ಕಚೇರಿಗೆ ನುಗ್ಗಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನನಗೆ ಸರ ಕೊಡಿ ಎಂದು ಬೇಡಿದ

ಇಂದಿರಾನಗರದ 100 ಅಡಿ ರಸ್ತೆ ಬಳಿ ‘ರೆನ್‌ ಇನ್‌’ ಹೆಸರಿನ ಚರ್ಮದ ಬ್ಯಾಗ್ ಹಾಗೂ ಶೂ ಮಾರಾಟ ಹಾಗೂ ರಿಪೇರಿ ಮಳಿಗೆ ಇದೆ. ಇದರಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದು, ಎಂದಿನಂತೆ ಅ.31ರಂದು ಶನಿವಾರ ಆಕೆ ಕೆಲಸಕ್ಕೆ ಬಂದಿದ್ದಳು. ಆ ಅಂಗಡಿಗೆ 11.45ರ ಸುಮಾರಿಗೆ ಹೆಲ್ಮೆಟ್‌ ಧರಿಸಿ ನುಗ್ಗಿದ ಪ್ರಭುರಾಜ್‌, ತನ್ನನ್ನು ಯಾರೋ ಓಡಿಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದ್ದಾನೆ.

ಈ ಮಾತಿಗೆ ಆಕೆ, ನೀವು ಅಂಗಡಿಯಲ್ಲಿ ಹೀಗೆಲ್ಲ ಕೂರಬಾರದು ಹೊರಡಿ ಎಂದಿದ್ದಾಳೆ. ಆಗ ನನಗೆ ಆರ್ಥಿಕವಾಗಿ ಸಮಸ್ಯೆ ಇದೆ. ನೀವು ಧರಿಸಿರುವ ಚಿನ್ನದ ಸರ ಕೊಟ್ಟರೆ ಸಹಾಯವಾಗಲಿದೆ ಎಂದು ಆತ ಮನವಿ ಮಾಡಿದ್ದಾನೆ. ಇದಕ್ಕೆ ಒಪ್ಪದೇ ಹೋದಾಗ ಆಕೆಯಿಂದ ಸರ ಕಸಿಯಲು ಆತ ಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧಿಸಿ ಸಂತ್ರಸ್ತೆ ಕಿರುಚಿಕೊಂಡಾಗ ಆಕೆಯ ಕಾಲನ್ನು ದುಪ್ಪಟ್ಟದಿಂದ ಕಟ್ಟಿ, ಕೈಗಳಿಗೆ ಫೆವಿಕ್ವಿಕ್ ಹಾಕಿ ಟೇಬಲ್‌ಗೆ ಅಂಟಿಸಿದ್ದಾನೆ. ಬಳಿಕ ಆಕೆಯಿಂದ 35 ಗ್ರಾಂ ಸರ ಕಸಿದು ಪರಾರಿಯಾಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಈಕೆಯ ಚೀರಾಟ ಕೇಳಿದ ನೆರೆಹೊರೆಯ ಅಂಗಡಿಯಲ್ಲಿದ್ದವರು ನೆರವಿಗೆ ಧಾವಿಸಿದ್ದಾರೆ. ಅದೇ ಹೊತ್ತಿಗೆ ಅಂಗಡಿ ಮಾಲಿಕ ರಂಜಿತ್ ಕುಮಾರ್ ಸಹ ಬಂದಿದ್ದಾರೆ.

ಅಂಗಡಿ ಹೊರಗೆ ಜನ ಜಮಾವಣೆಗೊಂಡಿದ್ದರಿಂದ ಭೀತಿಗೊಂಡ ಆತ, ಸಂತ್ರಸ್ತೆಗೆ ಕುತ್ತಿಗೆ ಚಾಕು ಇಟ್ಟು ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ತನ್ನನ್ನು ಹಿಡಿಯಲು ಬಂದರೆ ಆಕೆಯನ್ನು ಕೊಲ್ಲುವುದಾಗಿ ಬೆದರಿಸಿದ್ದಾನೆ. ಈ ವೇಳೆ ಆರೋಪಿಗೆ ಸಂತ್ರಸ್ತೆಯನ್ನು ಬಿಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಈ ಮಾತಿಗೆ ಆತ ಕ್ಯಾರೇ ಎಂದಿಲ್ಲ. ಐದಾರು ನಿಮಿಷಗಳ ಕಾಲ ತಳ್ಳಾಟ-ನೂಕಾಟ ನಡೆದಿದೆ. ಈ ಹಂತದಲ್ಲಿ ಸಾರ್ವಜನಿಕರು, ಹಿಂದಿನಿಂದ ಹೋಗಿ ಆತನನ್ನು ತಬ್ಬಿ ಚಾಕು ಕಸಿದುಕೊಂಡು ಸಂತ್ರಸ್ತೆಯನ್ನು ಬಂಧ ಮುಕ್ತಗೊಳಿಸಿದ್ದಾರೆ.

ಕೂಡಲೇ ಆತನಿಗೆ ಮನಬಂದಂತೆ ಜನರು ಥಳಿಸಿದ್ದಾರೆ. ಅಷ್ಟರಲ್ಲಿ ಮಾಹಿತಿ ಘಟನಾ ಸ್ಥಳಕ್ಕೆ ತೆರಳಿದ ಇಂದಿರಾ ನಗರ ಠಾಣೆ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ಬಳಿಕ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧನಕ್ಕೆ ಒಳಪಡಿಸಿದ್ದಾರೆ.