ಶಿರೂರು ಮಠದ ಧಾರ್ಮಿಕ ಆಚರಣೆಗಳು, ಸಿಖ್ಖರ ಕಿರ್ಪಾನ್ ಹಾಗೂ ಗೂರ್ಖಾ ಸಮುದಾಯದ ಕುಕ್ರಿಗೆ ನೀಡಿರುವ ಮಾನ್ಯತೆಯ ಮಾದರಿಯಲ್ಲಿ ಕೊಡವರ ತೋಕ್ ಗೂ ಸಾಂವಿಧಾನಿಕ ಹಾಗೂ ಶಾಸನಬದ್ಧ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಶಿರೂರು ಮಠದ ಧಾರ್ಮಿಕ ಆಚರಣೆಗಳು, ಸಿಖ್ಖರ ಕಿರ್ಪಾನ್ ಹಾಗೂ ಗೂರ್ಖಾ ಸಮುದಾಯದ ಕುಕ್ರಿಗೆ ನೀಡಿರುವ ಮಾನ್ಯತೆಯ ಮಾದರಿಯಲ್ಲಿ ಕೊಡವರ ತೋಕ್ ಗೂ ಸಾಂವಿಧಾನಿಕ ಹಾಗೂ ಶಾಸನಬದ್ಧ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಿತು.ಕೊಡವರ ಸಾಂಪ್ರದಾಯಿಕ ತೋಕ್ ಆಚರಣೆಯನ್ನು ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಧಾರ್ಮಿಕ ಆಚರಣೆಯಾಗಿ ಗುರುತಿಸಿ, ಸಾಂವಿಧಾನಿಕ ಹಾಗೂ ಶಾಸನಬದ್ಧ ರಕ್ಷಣೆ ನೀಡಬೇಕೆಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಿ ಕೊಡಗು ಜಿಲ್ಲಾಡಳಿತದ ಮೂಲಕ ಕೇಂದ್ರ ಗೃಹ ಸಚಿವರಿಗೆ ಜ್ಞಾಪನ ಪತ್ರ ಸಲ್ಲಿಸಲಾಯಿತು. ಸಹಾಯಕ ಆಯುಕ್ತ ನಿರಂಜನ್ ಅವರು ಮನವಿ ಪತ್ರ ಸ್ವೀಕರಿಸಿದರು. ಕೊಡವ ಸಮುದಾಯದಲ್ಲಿ ಬಂದೂಕು-ತೋಕ್ ಕೇವಲ ಆಯುಧವಲ್ಲ. ಜನನದಿಂದ ಮರಣದವರೆಗಿನ ಜೀವನಚಕ್ರದ ವಿಧಿವಿಧಾನಗಳು, ನಾಮಕರಣ, ವಿವಾಹ, ಕೈಲ್‌ಪೋಳ್ದ್, ಪುತ್ತರಿ ಹಾಗೂ ಪೂರ್ವಜರ ಆರಾಧನೆಯೊಂದಿಗೆ ಬೆಸೆದುಕೊಂಡಿರುವ ಪವಿತ್ರ ಸಂಪ್ರದಾಯವಾಗಿದೆ. ಐನ್‌ಮನೆಗಳ ಕನ್ನಿಕೊಂಬರೆ, ಮಂದ್‌ಗಳು ಮತ್ತು ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಲ್ಲಿ ಬಂದೂಕಿಗೆ ವಿಶೇಷ ಸ್ಥಾನವಿದೆ. ಹೀಗಾಗಿ ಇದನ್ನು ಸಾಮಾನ್ಯ ಆಯುಧವೆಂದು ಪರಿಗಣಿಸದೆ, ಕೊಡವರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಗುರುತಿಸಬೇಕೆಂದು ಎನ್.ಯು.ನಾಚಪ್ಪ ಒತ್ತಾಯಿಸಿದರು.ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959ರ ಸೆಕ್ಷನ್ 41ರ ಅಡಿಯಲ್ಲಿ ಕೊಡವರಿಗೆ ನೀಡಿರುವ ಬಂದೂಕು ವಿನಾಯಿತಿಯನ್ನು 2029ರ ಅಕ್ಟೋಬರ್ 31ರವರೆಗೆ ವಿಸ್ತರಿಸಿರುವುದನ್ನು ಉಲ್ಲೇಖಿಸಿದ ಅವರು ಈ ವಿನಾಯಿತಿಯನ್ನು ಕೇವಲ ಸವಲತ್ತಾಗಿ ಪರಿಗಣಿಸದೆ, ಐತಿಹಾಸಿಕ ಪರಂಪರೆ ಮತ್ತು ಧಾರ್ಮಿಕ ಸಂಸ್ಕಾರದ ಹಿನ್ನೆಲೆಯಲ್ಲಿ ಗುರುತಿಸಬೇಕೆಂದು ಮನವಿ ಮಾಡಿದರು.ಕೊಡವರ ಭಾಷೆ, ಸಂಸ್ಕೃತಿ ಮತ್ತು ಜನಾಂಗೀಯ ಗುರುತಿನ ರಕ್ಷಣೆಯೂ ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಿದರು.ಕೊಡವರನ್ನು ಬುಡಕಟ್ಟು ಸಮುದಾಯಗಳ ಪಟ್ಟಿಗೆ ಸೇರಿಸುವ ಪ್ರಸ್ತಾವನೆ ಪರಿಗಣನೆ, ಸಂವಿಧಾನದ ಐದನೇ ಅನುಸೂಚಿಯಡಿ ಕೊಡವಲ್ಯಾಂಡ್‌ಗೆ ರಕ್ಷಣೆ, 2027ರ ಜನಗಣತಿಯಲ್ಲಿ ಪ್ರತ್ಯೇಕ ಜನಾಂಗೀಯ ಗುರುತಿನ ಕೋಡ್ ಹಾಗೂ ಕೊಡವಲ್ಯಾಂಡ್ ಸ್ವಾಯತ್ತ ಆಡಳಿತ ಮಂಡಳಿ ರಚನೆಯ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೋರಿದರು.ಕೊಡವ ತೋಕ್ ಆಚರಣೆಗೆ ಸಾಂವಿಧಾನಿಕ ರಕ್ಷಣೆ, ಭಾಷೆ ಮತ್ತು ಜನಾಂಗೀಯ ಗುರುತಿಗೆ ಮಾನ್ಯತೆ, ಪ್ರತ್ಯೇಕ ಜನಗಣತಿ ಕೋಡ್ ಹಾಗೂ ಸ್ವಾಯತ್ತ ಆಡಳಿತದ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.ಸತ್ಯಾಗ್ರಹದಲ್ಲಿ ಮಂದಪಂಡ ಗೊಂಬೆ ಸೀತವ್ವ, ಕಲಿಯಂಡ ಮೀನಾ ಕಾರ್ಯಪ್ಪ, ಅರೆಯಡ ಸವಿತಾ ಗಿರೀಶ್, ಚೋಳಪಂಡ ಜ್ಯೋತಿ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಪಟ್ಟಮಾಡ ಲಲಿತಾ ಗಣಪತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.