ಶವ ಸಾಗಾಟಕ್ಕೆ ಹಳ್ಳದ ಬಳಿ ಸೇತುವೆ ನಿರ್ಮಾಣಕ್ಕೆ ಒತ್ತಾಯ

KannadaprabhaNewsNetwork |  
Published : Dec 20, 2024, 12:46 AM IST
ಹೂವಿನಹಡಗಲಿ ತಾಲೂಕಿನ ಬಾವಿಹಳ್ಳಿಯಲ್ಲಿ ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಇವರ ನೇತೃತ್ವದಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆ ಜರುಗಿತು. ಗ್ರಾಮದಲ್ಲಿ ಸಮಸ್ಯೆ ಇರುವ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. | Kannada Prabha

ಸಾರಾಂಶ

ಗ್ರಾಮದಲ್ಲಿರುವ ಸ್ಮಶಾನಕ್ಕೆ ಶವ ಹೊತ್ತುಕೊಂಡು ಹೋಗಲು ಸಮಸ್ಯೆ ಇದೆ.

ಹೂವಿನಹಡಗಲಿ: ತಾಲೂಕಿನ ಹೊಳಗುಂದಿ ಗ್ರಾಪಂ ವ್ಯಾಪ್ತಿಯ ಬಾವಿಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ನೇತೃತ್ವದಲ್ಲಿ ಕುಂದು-ಕೊರತೆ ಸಭೆ ಜರುಗಿತು.ಗ್ರಾಮದಲ್ಲಿರುವ ಸ್ಮಶಾನಕ್ಕೆ ಶವ ಹೊತ್ತುಕೊಂಡು ಹೋಗಲು ಸಮಸ್ಯೆ ಇದೆ. ಹಳ್ಳವನ್ನು ದಾಟಬೇಕಿದೆ. ಕೂಡಲೇ ಸೇತುವೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡಲು ಸಾಧ್ಯವಿಲ್ಲ. ಲೋಕೋಪಯೋಗಿ ಇಲಾಖೆ ಇಲ್ಲವೇ, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ ಅಧಿಕಾರಿಗಳಿಗೆ ಹೇಳಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.ಗ್ರಾಮದಲ್ಲಿ ವಿದ್ಯುತ್‌ ಕಂಬಗಳು ಶಿಥಿಲಾವಸ್ಥೆಯಲ್ಲಿವೆ. 55 ವಿದ್ಯುತ್‌ ಕಂಬಗಳನ್ನು ಬದಲಾವಣೆ ಮಾಡುವ ಜತೆಗೆ, ಹೆಚ್ಚುವರಿಯಾಗಿ ವಿದ್ಯುತ್‌ ಪರಿವರ್ತಕ ನೀಡಬೇಕೆಂಬ ಗ್ರಾಮಸ್ಥರ ಬೇಡಿಕೆಗೆ, ಜೆಸ್ಕಾಂ ಎಇಇ ಸ್ಪಂದಿಸಿ ಕೂಡಲೇ ಕ್ರಮ ವಹಿಸುತ್ತೇವೆ ಎಂದು ಹೇಳಿದರು.

ಜಲ ಜೀವನ್‌ ಮಿಷನ್‌ ಯೋಜನೆಯಡಿ ಪೈಪ್‌ಲೈನ್‌ ಮಾಡುವಾಗ, ಎಲ್ಲ ಕಡೆಗೂ ಸಿಸಿ ರಸ್ತೆ ಕಿತ್ತು ಹಾಕಿದ್ದಾರೆ. ಇದರಿಂದ ಸಂಚಾರಕ್ಕೆ ಸಾಕಷ್ಟು ತೊಂದರೆ ಉಂಟಾಗಿದೆ. ವರ್ಷ ಕಳೆದರೂ ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. 3-4 ತಿಂಗಳ ಕಾಲ ಗುತ್ತಿಗೆದಾರರ ಕಾಮಗಾರಿ ನಿಲ್ಲಿಸಿದ್ದರು. ಕೂಡಲೇ ಸಿಸಿ ರಸ್ತೆ ದುರಸ್ತಿ ಹಾಗೂ ಜಲ ಜೀವನ್‌ ಮಿಷನ್‌ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು.

ಬಾವಿಹಳ್ಳಿಯಲ್ಲಿ 110, ಹೊಳಗುಂದಿಯಲ್ಲಿ 148 ನಳಗಳ ಸಂಪರ್ಕ ಬಾಕಿ ಇವೆ. ಈ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಗ್ರಾಪಂನಿಂದ ಪತ್ರ ಬರೆಯಲಾಗಿತ್ತು ಎಂದು ಪಿಡಿಒ ಸಭೆಗೆ ಮಾಹಿತಿ ನೀಡಿದರು.

ಇಲಾಖೆಯ ಎಇಇ ಅಂಬೇಡ್ಕರ್‌ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದೆ. ಆದಷ್ಟು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುತ್ತೇವೆಂದು ಸಭೆಯಲ್ಲಿ ಹೇಳಿದರು.

ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೇ ಶಿಕ್ಷಕರನ್ನು ನಿಯೋಜಿಸಬೇಕು. ಗ್ರಾಮದಲ್ಲಿ ಕ್ರೀಡಾಂಗಣ ವ್ಯವಸ್ಥೆ, ಆಟದ ಮೈದಾನದ ಅಭಿವೃದ್ಧಿ ಮಾಡಬೇಕೆಂದು ಗ್ರಾಮದ ಯುಕವರು ಅರ್ಜಿ ಸಲ್ಲಿಸಿದ್ದರು.

ಬಾವಿಹಳ್ಳಿಯ ನವನಗರದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ಪಟ್ಟಾ ನೀಡುವ ಜತೆಗೆ ಇ-ಸ್ವತ್ತು ದಾಖಲೆ ನೀಡಬೇಕೆಂದು ನಿವಾಸಿಗಳು ಅರ್ಜಿ ಸಲ್ಲಿಸಿದ್ದರು. ಈ ಕುರಿತು ಕಂದಾಯ ಇಲಾಖೆಯ ನಿರೀಕ್ಷಕರಿಗೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಸಮಸ್ಯೆ ಇರುವ ಸ್ಥಳಗಳಿಗೆ ಭೀಮಪ್ಪ ಭೇಟಿ ನೀಡಿ, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಕುಂದು-ಕೊರತೆ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆಯ ಕೊರತೆ ಹಾಗೂ ಇ-ಸ್ವತ್ತು ಸಮಸ್ಯೆ ಸೇರಿದಂತೆ ಶಾಲಾ ಅಭಿವೃದ್ಧಿ ಮತ್ತು ವಸತಿ ಬೇಡಿಕೆಗಳ ಕುರಿತು ಜನ ಸರದಿ ಸಾಲಿನಲ್ಲಿ ನಿಂತು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು.

ಸಭೆಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಆಯಾ ಇಲಾಖೆಯ, ಅಧಿಕಾರಿಗಳಿಗೆ ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಹಸ್ತಾಂತರಿಸುವ ಮೂಲಕ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆ ಹರಿಸುವಂತೆ ಸೂಚಿಸಿದರು.

ಗ್ರಾಪಂ ಅಧ್ಯಕ್ಷೆ ಎಚ್‌.ನೇತ್ರಾವತಿ, ಜಿಪಂ ಯೋಜನಾ ನಿರ್ದೇಶಕ ಹಾಗೂ ತಾಪಂ ಆಡಳಿತಾಧಿಕಾರಿ ಅಶೋಕ ತೋಟದ್‌, ತಾಪಂ ಇಒ ಉಮೇಶ, ಗ್ರಾಪಂ ಪಿಡಿಒ, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ