ಧಾರವಾಡ: ದೇಶದ ದಕ್ಷಿಣ ಮತ್ತು ಪೂರ್ವ ಭಾತರದ ವಿವಿಧಡೆ ದೇಶದ ಸರ್ವೋಚ್ಛ ನ್ಯಾಯಾಲಯದ ವಿಭಾಗೀಯ ಪೀಠ ಸ್ಥಾಪಿಸುವಂತೆ ಭಾರತೀಯ ಏಕತಾ ಆಂದೋಲನದ ಅಧ್ಯಕ್ಷ ಮಹಾದೇವ ಹೊರಟ್ಟಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದಕ್ಷಿಣ ಹಾಗೂ ಪೂರ್ವ ರಾಜ್ಯದ ಕಕ್ಷಿದಾರರಿಗೆ ದೆಹಲಿಯಲ್ಲಿ ಇರುವ ಸುಪ್ರೀಂ ಕೋರ್ಟ್ ಬಹದೂರ. ಇದಕ್ಕೆ ಸಾಕಷ್ಟು ಹಣದ ಜತೆಗೆ ಸಮಯವೂ ವ್ಯಯವಾಗಲಿದೆ. ಬಲಿಷ್ಠ, ಭದ್ರ, ಏಕತೆಯಿಂದ ಕೂಡಿದ ಪ್ರದೇಶಗಳಿಗೆ ನ್ಯಾಯ ಒದಗಿಸುವುದು, ಸಮೃದ್ಧ ಭಾರತದ ನಿರ್ಮಾಣದ ಡಾ. ಅಂಬೇಡ್ಕರ್ ಕನಸಾಗಿತ್ತು. ಆದರೆ, ನ್ಯಾಯ ಪಡೆಯಲು ದೂರದ ಸುಪ್ರೀಂ ಕೋರ್ಟ್‌ಗೆ ಹೋಗುವುದು ಯಾವ ನ್ಯಾಯ ಎಂದರು.ಭಾರತ ಪ್ರಾದೇಶಿಕ ವೈವಿದ್ಯತೆ ಹೊಂದಿದೆ. ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆ ಬಲಪಡಿಸಲು ದಕ್ಷಿಣ- ಪೂರ್ವ ಭಾರತದ ರಾಜ್ಯಗಳ ಸಂಸತ್ ಅಧಿವೇಶನ ಕರೆದು, ಆಯಾ ಪ್ರದೇಶಗಳ ಬೇಡಿಕೆಗಳಿಗೆ ಸ್ಪಂದಿಸಲು ಅನುಕೂಲ ಕಲ್ಪಿಸಲು ಒತ್ತಾಯಿಸಿದರು.
ದಕ್ಷಿಣ ಮತ್ತು ಪೂರ್ವ ರಾಜ್ಯಗಳ ಅಧಿವೇಶನ ಕರೆಯುವುದು ಮತ್ತು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಸ್ಥಾಪಿಸುವಂತೆ ಧ್ವನಿ ಎತ್ತುವಂತೆ 18 ರಾಜ್ಯಗಳ ಮುಖ್ಯಮಂತ್ರಿಗಳಿಗೂ ಕೂಡ ಪತ್ರ ಬರೆಯಲಾಗಿದೆ ಎಂದು ಹೊರಟ್ಟಿ ಮಾಹಿತಿ ನೀಡಿದರು.ಹೈಕೋರ್ಟ್ ವಕೀಲ ಕೆ. ದಿವಾಕರ್ ಮಾತನಾಡಿ, ಸಂವಿಧಾನದ 130ನೇ ಕಾಯ್ದೆ ಪ್ರಕರ ಮುಖ್ಯ ನ್ಯಾಯಮೂರ್ತಿ ರಾಷ್ಟ್ರಪತಿ ಅನುಮತಿ ಪಡೆದು, ದೇಶದಲ್ಲಿ ಎಲ್ಲಿ ಬೇಕಾದರೂ ಕೂಡ ನ್ಯಾಯದಾನ ಪೀಠ ಸ್ಥಾಪನೆಗೆ ಅವಕಾಶವಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ದೂರದಲ್ಲಿನ ದೆಹಲಿಗೆ ಕಕ್ಷಿದಾರರ ಅಲೆಯುವುದು ತಪ್ಪಿಸಲು ದಕ್ಷಿಣ-ಪೂರ್ವದಲ್ಲಿ ಪೀಠ ಸ್ಥಾಪಿಸಲು ಒತ್ತಾಯ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಕೆ.ಎಸ್. ಕೋರಿಶೆಟ್ಟರ್, ಚಿಂತಕ ರಂಜಾನ್ ದರ್ಗಾ ಇದ್ದರು.