ಭತ್ತ ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯ

KannadaprabhaNewsNetwork | Published : May 1, 2025 12:49 AM

ಸಾರಾಂಶ

Demand for establishment of paddy buying center

- ಜಿಲ್ಲಾ ರೈತರ ಒಕ್ಕೂಟದ ಮುಖಂಡ ಬಿ.ಎಂ.ಸತೀಶ ಮನವಿ । ವ್ಯಾಪಾರಸ್ಥರೊಂದಿಗೆ ಶಾಮೀಲಾಗಿ ರೈತರಿಗೆ ಜಿಲ್ಲಾಡಳಿತ ಮೋಸ: ಆರೋಪ

----

ಕನ್ನಡಪ್ರಭ ವಾರ್ತೆ ದಾವಣಗೆರೆ

ಭತ್ತ ಕಟಾವು ಶುರುವಾದ ಹಿನ್ನೆಲೆಯಲ್ಲಿ ಭತ್ತ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭಿಸುವ ಜೊತೆಗೆ ಖರೀದಿ ಕೇಂದ್ರ ಸ್ಥಾಪಿಸುವಂತೆ ಜಿಲ್ಲಾ ರೈತರ ಒಕ್ಕೂಟದ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಕ್ತ ಮಾರುಕಟ್ಟೆಯಲ್ಲಿ ಭತ್ತದ ದರ ಕ್ವಿಂಟಾಲ್‌ಗೆ 1900ರಿಂದ 1950 ರು. ಮಾತ್ರ ಇದ್ದು, ಬೆಲೆ ಕುಸಿತದಿಂದ ರೈತರಿಗೆ ತೀವ್ರ ಅನ್ಯಾಯವಾಗುವ ಹಿನ್ನೆಲೆಯಲ್ಲಿ ಕನಿಷ್ಟ ಬೆಂಬಲ ಬೆಲೆಯಡಿ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದರು.

ರಾಜ್ಯದ ಭತ್ತದ ಕಣಜ ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ದರ ಕುಸಿತದಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ದರ ಕುಸಿದಾಗ ಕನಿಷ್ಟ ಬೆಂಬಲ ಬೆಲೆಯಡಿ ಖರೀದಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ದರ ಕುಸಿತದ ಹಿಂದೆ ವ್ಯಾಪಾರಿಗಳ ಕೈವಾಡವಿದೆ. ಹಿಂದಿನ ಹಂಗಾಮಿನಲ್ಲಿ ಇ-ಟೆಂಡರ್ ಜಾರಿ ಮಾಡಿಸಿದ್ದರಿಂದ ಬತ್ತದ ಧಾರಣೆಯಲ್ಲಿ ಏರಿಕೆಯಾಗಿತ್ತು. ಇದರಿಂದ ಸಹಜವಾಗಿಯೇ ಮುನಿಸಿಕೊಂಡ ವ್ಯಾಪಾರಸ್ಥರು ದರ ಏರಿಕೆಗೆ ಹೀಗೆ ಕಡಿವಾಣ ಹಾಕಲು ಯತ್ನಿಸುತ್ತಿದ್ದಾರೆ ಎಂದು ಅ‍ವರು ದೂರಿದರು.

ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಮುಂಗಡವಾಗಿ ಭತ್ತದ ಬೆಳೆ ಬಂದಿದ್ದರಿಂದ ಅಲ್ಲಿಂದ ಅಕ್ಕಿ ರಾಜ್ಯಕ್ಕೆ ಆವಕವಾಗುತ್ತಿದೆ. ದರ ಕುಸಿತಕ್ಕೆ ಇದೂ ಒಂದು ಕಾರಣವಾಗಿದೆ. ಏ.15ರಂದು ಪ್ರಭಾರ ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ್ ಅಧ್ಯಕ್ಷತೆಯ ಜಿಲ್ಲಾ ಟಾಸ್ಕ್ ಫೋರ್ಸ್‌ ಸಮಿತಿ ಸಭೆಯಲ್ಲಿ ಹಿಂಗಾರು ಭತ್ತ ಖರೀದಿಗೆ ರೈತರ ನೋಂದಣಿಯನ್ನು ಏ.25ರವರೆಗೆ ನಡೆಸಲು, ನೋಂದಣಿ ಮಾಡಿಸಿದ ರೈತರಿಂದ ಏ.1ರಿಂದ ಮೇ.31ರವರೆಗೆ ಖರೀದಿ ಪ್ರಕ್ರಿಯೆಗೆ ನಿರ್ಣಯಿಸಿದ್ದು, ರೈತ ವಿರೋಧಿ ಕುತಂತ್ರ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಅಮಾನತುಪಡಿಸಬೇಕೆಂದು ಒತ್ತಾಯಿಸಿದರು.

ಏ.14ರಂದು ಟಾಸ್ಕ್ ಫೋರ್ಸ್ ಸಮಿತಿ ಸಭೆ ಮಾಡಿ, ಮಾ.20ರಿಂದ ಏ.25ರವರೆಗೆ ಆಸಕ್ತ ರೈತರ ನೋಂದಣಿಗೆ ವೇಳಾಪಟ್ಟಿ ಪ್ರಕಟಣೆ ಹೊರಡಿಸಿದ್ದು, ವ್ಯಾಪಾರಸ್ಥರೊಂದಿಗೆ ಶಾಮೀಲಾಗಿ ರೈತರಿಗೆ ಮಾಡುವ ಮೋಸದ ಸಂಚಾಗಿದೆ. ನೆಪ ಮಾತ್ರಕ್ಕೆ ಟಾಸ್ಕ್ ಫೋರ್ಸ್ ಸಮಿತಿ ಸಭೆ ಮಾಡಿದ ಅಧಿಕಾರಿಗಳು ರೈತರಿಗೆ ಚಳ್ಳೇಹಣ್ಣು ತಿನ್ನಿಸಿ, ಜವಾಬ್ಧಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಸರ್ಕಾರ ಈಗಾಗಲೇ ಕ್ವಿಂಟಾಲ್ ಭತ್ತಕ್ಕೆ 2320 ರು. ನಿಗದಿಪಡಿಸಿದೆ. ಸರ್ಕಾರ 500 ರು. ಪ್ರೋತ್ಸಾಹಧನ ಮಂಜೂರು ಮಾಡಿ, 2820 ರು.ಗೆ ಭತ್ತ ಖರೀದಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಮಾತನಾಡಿ, ಕಳೆದ ವಾರ ಸುರಿದ ಭಾರೀ ಮಳೆಯಂದಾಗಿ ಬಾಳೆ, ಪಪ್ಪಾಯಿ ಇತರೆ ಬೆಳೆ ಸಂಪೂರ್ಣ ಹಾಳಾಗಿವೆ. ಮಾರುಕಟ್ಟೆಯಲ್ಲಿ ಅವುಗಳಿಗೆ ಬೆಲೆಯೇ ಇಲ್ಲವಾಗಿದೆ. ರೈತರ ಪರಿಸ್ಥಿತಿ ಸಂಕಷ್ಟದಲ್ಲಿದೆ. ರಾಜ್ಯ ಸರ್ಕಾರವೇ ಮಳಿಗೆಗಳನ್ನು ಆರಂಭಿಸುವ ಮೂಲಕ ರೈತರಿಂದ ಅವುಗಳನ್ನು ಖರೀದಿಸಿ, ಮಾರಾಟ ಮಾಡುವ ಬಗ್ಗೆ ಕ್ರಮ ಕೈಗೊಳ್ಳಭೇಕು ಎಂದು ಮನವಿ ಮಾಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬೆಳವನೂರು ಬಿ.ನಾಗೇಶ್ವರ ರಾವ್ ಮಾತನಾಡಿ, ಭತ್ತದ ಬೆಲೆ ಕುಸಿತದಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತದ ಬೆಳೆಗಾರರ ಸಮಸ್ಯೆಬಗ್ಗೆ ಚರ್ಚಿಸುವ ಜೊತೆಗೆ ಮುಂದಿನ ಹೋರಾಟದ ಬಗ್ಗೆ ಮೇ.3ರಂದು ದಾವಣಗೆರೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ರೈತರ ಸಭೆಯನ್ನು ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ನಡೆಸಿ, ಮುಂದಿನ ಹಂತದ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲಾಗುವುದು ಎಂದರು.

ಮಾಜಿ ಮೇಯರ್ ಎಚ್.ಎನ್.ಗುರುನಾಥ, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡ ಎಚ್‌.ಜಿ.ಗಣೇಶಪ್ಪ, ಅಣಬೇರು ಕುಮಾರಪ್ಪ, ಬಾತಿ ಬಿ.ಕೆ.ಶಿವಕುಮಾರ, ಕುಂದುವಾಡ ಮಹೇಶ್ವರಪ್ಪ, ಆವರಗೆರೆ ಅಜ್ಜನಗೌಡ್ರು, ಕಡ್ಲೇಬಾಳು ಧನಂಜಯ, ಗೋಣಿವಾಡ ಮಂಜುನಾಥ, ಪುನೀತ್, ಜಿಮ್ಮಿ ಹನುಮಂತಪ್ಪ, ಗೋಶಾಲೆ ಸುರೇಶ ಇದ್ದರು.

ಫೋಟೊ: ದಾವಣಗೆರೆಯಲ್ಲಿ ಜಿಲ್ಲಾ ರೈತರ ಒಕ್ಕೂಟದ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article