ಹೊಸಕೋಟೆ: ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕ ವಲಯದ ಟೈಲರಿಂಗ್ ಕುಟುಂಬಗಳು ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದು, ನೆರೆ ರಾಜ್ಯಗಳಂತೆ ಟೈಲರಿಂಗ್ ವೃತ್ತಿ ಗೌರವ, ಭದ್ರತೆ ಮತ್ತು ಭವಿಷ್ಯದ ದೃಷ್ಟಿಯಿಂದ ರಾಜ್ಯದಲ್ಲೂ ಪ್ರತ್ಯೇಕ ಟೈಲರಿಂಗ್ ನಿಗಮ ಮಂಡಳಿ ಸ್ಥಾಪಿಸಬೇಕೆಂದು ಅಖಿಲ ಕರ್ನಾಟಕ ಟೈಲರಿಂಗ್ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಆನಂದ್ ಜಿ ಕಾಂಚನ್ ಸರ್ಕಾರವನ್ನು ಒತ್ತಾಯಿಸಿದರು.
ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, 2024ರ ಜನವರಿಯಲ್ಲಿ ಬೆಂಗಳೂರಿನ ಶಾಲಿನಿ ಮೈದಾನದಲ್ಲಿ ರಾಜ್ಯ ಮಟ್ಟದ ಟೈಲರ್‌ಗಳ ಬೃಹತ್ ಸಮಾವೇಶ ಆಯೋಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ನಮ್ಮ ವೃತ್ತಿಗೆ ಎದುರಾಗಿರುವ ಗಂಭೀರ ಸಮಸ್ಯೆಗಳು ಹಾಗೂ ಬೇಡಿಕೆಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದೇವೆ. ಆರಂಭದಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ ಸರ್ಕಾರ ದತ್ತಾಂಶ ಕೊರತೆಯಿದೆ ಎಂದು ಹೇಳಿ ಕಾಲಹರಣ ಮಾಡಿತು. ಸಂಘಟನೆ ಮೂಲಕ ಪ್ರತೀ ಜಿಲ್ಲೆಯಲ್ಲಿ 6-7 ಸಾವಿರಕ್ಕೂ ಹೆಚ್ಚು ಟೈಲರ್‌ಗಳು ಇರುವುದಾಗಿ ದತ್ತಾಂಶ ಕೊಟ್ಟರೂ ಸಂಖ್ಯೆ ಹೆಚ್ಚಿದೆ ಇದನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ಸಂಬಂಧಪಟ್ಟ ಇಲಾಖೆಗಳು ಪುನಃ ನಿರ್ಲಕ್ಷಿಸುತ್ತಿದೆ. ಶೀಘ್ರದಲ್ಲೇ ಟೈಲರ್ಸ್ ನಿಗಮ ಮಂಡಳಿ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂದರು.
ಜಂಟಿ ಕಾರ್ಯದರ್ಶಿ ಡಾ.ಸುಮತಿ ಮಾತನಾಡಿ, ಅಖಿಲ ಕರ್ನಾಟಕ ಟೈಲರ್ ಸಂಫಟನೆಗಳ ಒಕ್ಕೂಟದಲ್ಲಿ ಪ್ರತಿ ಟೈಲರ್ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲ್ಲೂಕು, ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಎಲ್ಲಾ ಟೈಲರ್‌ಗಳನ್ನು ಒಗ್ಗೂಡಿಸಲಾಗುವುದು. ಸಂಘಟನೆಯ ಮೂಲಕ ರಾಜ್ಯಮಟ್ಟದ ಹೋರಾಟ ನಡೆಸಿ ಟೈಲರ್‌ಗಳ ಹಕ್ಕುಗಳಿಗಾಗಿ ಧ್ವನಿ ಎತ್ತಲಾಗುವುದು ಎಂದರು.ಖಜಾಂಚಿ ರಾಧಮ್ಮ, ಉಪಾಧ್ಯಕ್ಷರಾದ ರಮಣ, ಗೋವರ್ಧನ್, ಸಹ ಕಾರ್ಯದರ್ಶಿಗಳಾದ ಅಶ್ವಥ್ ರೆಡ್ಡಿ, ವಿಜಯ್ ಕುಮಾರ್, ಮಮತ, ಖಜಾಂಚಿ ರಾಧಮ್ಮ, ಜಂಟಿ ಕಾರ್ಯದರ್ಶಿ ಸುಮತಿರೆಡ್ಡಿ, ಸಂಚಾಲಕ ಹಬೀಬ್ ಸಾಬ್, ಸಂಘಟನಾ ಕಾರ್ಯದರ್ಶಿ ಮುಹಿಬ್, ಅನ್ನಪೂರ್ಣ, ಲಿಯಾಕಾರ ಪಾಷ ಇತರರಿದ್ದರು.
ಫೋಟೋ: 27 ಹೆಚ್‌ಎಸ್‌ಕೆ 2ಹೊಸಕೋಟೆಯಲ್ಲಿ ಅಖಿಲ ಕರ್ನಾಟಕ ಟೈಲರಿಂಗ್ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಆನಂದ್ ಜಿ ಕಾಂಚನ್ ಪಧಾದಿಕಾರಿಗಳಿಗೆ ಗುರ್ತಿನ ಚೀಟಿ ವಿತರಿಸಿದರು.