ಕೊಪ್ಪಳ: ರೈಲ್ವೆ ಇಲಾಖೆಯಲ್ಲಿರುವ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ನಗರದ ರೈಲ್ವೆ ಸ್ಟೇಷನ್‌ನಲ್ಲಿ ಎಐಡಿವೈಒ ಸಂಘಟನೆಯಿಂದ ಸಹಿ ಸಂಗ್ರಹಿಸುವ ಮೂಲಕ ಪ್ರತಿಭಟನೆ ಮಾಡಲಾಯಿತು.
ರೈಲ್ವೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಎಲ್ಲ ರೈಲುಗಳಲ್ಲಿ ಅನ್ ರಿಸರ್ವ್ಡ್ ಮತ್ತು ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್‌ಗಳನ್ನು ಹೆಚ್ಚಿಸಲು ಆಗ್ರಹಿಸಲಾಯಿತು.ಜಿಲ್ಲಾ ಕಾರ್ಯದರ್ಶಿ ಶರಣಬಸವ ಪಾಟೀಲ್ ಮಾತನಾಡಿ, ''''ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಉದ್ಯಮವಾಗಿರುವ ಭಾರತೀಯ ರೈಲ್ವೆ ಸಂಪೂರ್ಣ ವಿನಾಶದತ್ತ ಸಾಗುತ್ತಿದೆ. ಖಾಸಗೀಕರಣ ಮತ್ತು ವ್ಯಾಪಾರೀಕರಣದ ಕ್ರಮಗಳು ರೈಲ್ವೆ ಪ್ರಯಾಣಿಕರನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿವೆ. ದೂರ ಯಾನದ ರೈಲುಗಳಲ್ಲಿನ ಪ್ರಯಾಣವು ದುಸ್ಸಾಧ್ಯವಾಗಿದೆ ಮತ್ತು ಸಾಮಾನ್ಯ ಜನರು ಅಸಹನೀಯ ಪರಿಸ್ಥಿತಿಗಳಲ್ಲಿ ಪ್ರಯಾಣಿಸುವಂತಾಗಿದೆ. ಆದ್ದರಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ರೈಲ್ವೆಗಳ ಸಂಖ್ಯೆ ಹೆಚ್ಚಳ ಮಾಡುವಂತೆ ಆಗ್ರಹಿಸಿದರು.
ರೈಲ್ವೆಯಲ್ಲಿ 3.5 ಲಕ್ಷ ಸಿಬ್ಬಂದಿ ಕೊರತೆ ಇದೆ. ಗ್ರೂಪ್ ಸಿ ಮತ್ತು ಲೆವೆಲ್ ವರ್ಗಗಳಲ್ಲಿ ಸುಮಾರು 2.74 ಲಕ್ಷ ಹುದ್ದೆಗಳು ಖಾಲಿ ಇವೆ. ಜೂನ್ 2023 ಅಂಕಿ-ಅಂಶಗಳ ಪ್ರಕಾರ ಸುರಕ್ಷತಾ ವಿಭಾಗಗಳಲ್ಲೇ 1.7 ಲಕ್ಷ ಹುದ್ದೆಗಳು ಖಾಲಿ ಇವೆ. ಮೆಕ್ಯಾನಿಕ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ 1.57 ಲಕ್ಷ ಹುದ್ದೆಗಳು ಖಾಲಿ ಇವೆ. ಶುಚಿತ್ವ, ನಿರ್ವಹಣೆ ಮತ್ತು ಕೆಲವು ಭದ್ರತೆಗೆ ಸಂಬಂಧಿಸಿದ ವಿಭಾಗಗಳನ್ನು ಈಗಾಗಲೇ ಖಾಸಗಿ ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡಲಾಗಿದೆ. ರೈಲ್ವೆ ಅಪಘಾತಗಳಿಗೆ ಇದು ಒಂದು ಕಾರಣವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರವು ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಲು ಮತ್ತು ಸೇವೆಗಳ ವಿಸ್ತರಣೆಗೆ ಅನುಗುಣವಾಗಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಮಾಡಬೇಕು ಎಂದು ಆಗ್ರಹಿಸಿದರು.ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಶರಣು ಗಡ್ಡಿ ಮಾತನಾಡಿ, ''''ಇಂದು ಪ್ರತಿ ರೈಲು ಜನದಟ್ಟಣೆಯಿಂದ ಓಡುತ್ತಿವೆ. ಇದರ ನಿವಾರಣೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ. ಕಾಯ್ದಿರಿಸದ (UR) ಮತ್ತು ಸ್ಲೀಪರ್ (SL) ರೈಲುಗಳು ತುಂಬಾ ಜನದಟ್ಟಣೆಯಿಂದ ಕೂಡಿರುತ್ತವೆ. ಕೆಲವು ರೈಲುಗಳ ಶೌಚಾಲಯಗಳಲ್ಲಿ ಸಹ 8ರಿಂದ 10 ಜನರು ನಿಂತು ಪ್ರಯಾಣ ಮಾಡುವ ಪರಿಸ್ಥಿತಿ ಇದೆ. ರೈಲ್ವೆ ಅಧಿಕಾರಿಗಳು ಕಾಯ್ದಿರಿಸದ (ಯುಆರ್) ಬೋಗಿಗಳು ಮತ್ತು ಸ್ವೀಪರ್ ಕ್ಲಾಸ್ (ಎಸ್‌ಎಲ್) ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಬದಲು ಅವುಗಳ ಸಂಖ್ಯೆಯನ್ನು ಮೊಟಕುಗೊಳಿಸಿ, ಎಸಿ ಬೋಗಿಗಳನ್ನು ಹೆಚ್ಚಿಸುತ್ತಿದ್ದಾರೆ. ಸಾರ್ವಜನಿಕ ಉದ್ದಿಮೆಯಲ್ಲಿ ಇಂತಹ ಲಾಭದಾಹ ಯಾತಕ್ಕಾಗಿ? ರೈಲ್ವೆ ಇಲಾಖೆಯು ಜನರ ಈ ಅಸಹಾಯಕ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಆದಾಯ ಗಳಿಸುತ್ತಿದೆ'''' ಎಂದು ಟೀಕಿಸಿದರು.
ಜಿಲ್ಲಾ ಕಾರ್ಯದರ್ಶಿಯಾದ ಶರಣು ಪಾಟೀಲ್, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಶರಣುಗಡ್ಡಿ, ಜಿಲ್ಲಾ ಸಂಘಟನಾಕಾರರಾದ ದೇವರಾಜ್ ಹೊಸಮನಿ, ಮೌನೇಶ್, ಪ್ರದೀಪ್ ಭಾಗವಹಿಸಿದ್ದರು.