ಬೆಳ್ತಂಗಡಿ ಪ್ರಾಧಿಕಾರ ರಚನೆಗೆ ಒತ್ತಾಯ, ಪ್ರತ್ಯೇಕ ಫೀಡರ್‌ ಅಳವಡಿಸಲು ಮನವಿ

KannadaprabhaNewsNetwork | Published : Mar 30, 2025 3:03 AM

ಸಾರಾಂಶ

ಬೆಳ್ತಂಗಡಿ ನಗರದಲ್ಲಿ ಮಹಾಯೋಜನೆ ಜಾರಿಯಿಂದ ನಗರದ ಅಭಿವೃದ್ಧಿಗೆ ಮತ್ತು ಜನರಿಗೆ ತೊಂದರೆಯಾಗುತ್ತಿದ್ದು, ಇದುವರೆಗೆ ಮೂಡ ಮೇಲಾಧಿಕಾರಿಗಳಿಂದ ಸ್ಪಷ್ಟ ಮಾಹಿತಿ ನಗರ ಪಂಚಾಯಿತಿ ಸದಸ್ಯರಾಗಲಿ, ಸಾರ್ವಜನಿಕರಿಗಾಗಲಿ ತಿಳಿದಿಲ್ಲ. ಈ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯದೆ ಮಹಾಯೋಜನೆ ಜಾರಿಗೆ ಅನುಮತಿ ನೀಡುವುದಿಲ್ಲ ಎಂದು ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ನಿರ್ಣಯಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಇಲ್ಲಿನ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಅಧ್ಯಕ್ಷ ಜಯಾನಂದಗೌಡ ಅಧ್ಯಕ್ಷತೆಯಲ್ಲಿ ಶುಕ್ರವಾರ ಪ.ಪಂ. ಸಭಾಂಗಣದಲ್ಲಿ ನಡೆಯಿತು.

ನಗರದಲ್ಲಿ ಮಹಾಯೋಜನೆ ಜಾರಿಯಿಂದ ನಗರದ ಅಭಿವೃದ್ಧಿಗೆ ಮತ್ತು ಜನರಿಗೆ ತೊಂದರೆಯಾಗುತ್ತಿದ್ದು, ಇದುವರೆಗೆ ಮೂಡ ಮೇಲಾಧಿಕಾರಿಗಳಿಂದ ಸ್ಪಷ್ಟ ಮಾಹಿತಿ ನಗರ ಪಂಚಾಯಿತಿ ಸದಸ್ಯರಾಗಲಿ, ಸಾರ್ವಜನಿಕರಿಗಾಗಲಿ ತಿಳಿದಿಲ್ಲ. ಈ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯದೆ ಮಹಾಯೋಜನೆ ಜಾರಿಗೆ ಅನುಮತಿ ನೀಡುವುದಿಲ್ಲ ಎಂದು ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ನಿರ್ಣಯಿಸಿದರು.

ಸದಸ್ಯ ಜಗದೀಶ್‌ ಮಾತನಾಡಿ, ನಗರದ ಜನರ ಅನುಕೂಲದ ಹಿತದೃಷ್ಟಿಯಿಂದ ಬೆಳ್ತಂಗಡಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷ ಜಯಾನಂದ ಗೌಡ ಈ ಬಗ್ಗೆ ಸಭೆಯಲ್ಲಿ ನಿರ್ಣಯಿಸಿ ಸರ್ಕಾರಕ್ಕೆ ಪತ್ರ ಬರೆಯೋಣವೆಂದು ತಿಳಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿದರು.ಮೂಡ ಅಧಿಕಾರಿ ಮೋಕ್ಷ ಮಾತನಾಡಿ, ಮಹಾಯೋಜನೆ ಜಾರಿ ಕುರಿತು ಸಲಹೆ ಸೂಚನೆಗೆ 60 ದಿನಗಳ ಕಾಲವಕಾಶವಿದ್ದು, ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಲಾಗುವುದು. ಬಳಿಕ 60 ದಿನಗಳ ಕಾಲವಕಾಶಗಳಿವೆ ಎಂದರು. ಇದಕ್ಕೆ ಜಗದೀಶ್‌ ಉತ್ತರಿಸಿ, ಮಹಾಯೋಜನೆಯ ಕರಡು ಪ್ರತಿ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷ ಜಯಾನಂದ ಗೌಡ ಧ್ವನಿಗೂಡಿಸಿ, ಈ ಬಗ್ಗೆ 15 ದಿನದೊಳಗೆ ವಿಶೇಷ ಸಭೆ ಕರೆಯಲಾಗುವುದು. ಇದಕ್ಕೆ ಮೂಡದ ಹಿರಿಯ ಅಧಿಕಾರಿಗಳು ಬಂದು ಎಲ್ಲ ಸದಸ್ಯರಿಗೆ ಮಾಹಿತಿ ನೀಡಬೇಕು ಬಳಿಕ ಪಟ್ಟಣ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.ನಗರ ವ್ಯಾಪ್ತಿಯಲ್ಲಿ ವಿದ್ಯುತ್‌ ಸಮಸ್ಯೆಯಾಗದಂತೆ ಪ್ರತ್ಯೇಕ ಫೀಡರ್‌ ಅಳವಡಿಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಶರತ್‌ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ ಬೂಬ ಶೆಟ್ಟಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಈಗ ಅನುಷ್ಠಾನ ಮಾಡಲು ಕಷ್ಟವಾಗಬಹುದು. ನಿನಿಕಲ್ಲ್‌ ಬಳಿ ಹೊಸ ಫೀಡರ್‌ ಮಂಜೂರಾಗಿದ್ದು ಇದು ನಿರ್ಮಾಣವಾದ ಬಳಿಕ ನಗರಕ್ಕೆ ಪ್ರತ್ಯೇಕ ಫೀಡರ್‌ ಅಳವಡಿಸಲು ಸಹಕಾರಿಯಾಗಬಹುದು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಸಮುದಾಯ ಆರೋಗ್ಯ ಕೇಂದ್ರದ ಬಳಿ ಡಯಾಲಿಸಿಸ್‌ ಕೇಂದ್ರವಿದ್ದು, ಇದಕ್ಕೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದ್ದು ಇದನ್ನು ಅಭಿವೃದ್ಧಿ ಪಡಿಸಬೇಕೆಂದು ಆರೋಗ್ಯ ಇಲಾಖಾ ಅಧಿಕಾರಿ ರಕ್ಷಿತ್‌ ಮನವಿ ಮಾಡಿದರು.

ನಗರದಲ್ಲಿ 2025-26ನೇ ಸಾಲಿನ ನೀರಿನ ಶುಲ್ಕವನ್ನು ಏರಿಸಲಾಗುವುದಿಲ್ಲವೆಂದು ಅಧ್ಯಕ್ಷ ಜಯಾನಂದ ಗೌಡ ತಿಳಿಸಿದರು. ಆದರೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದ್ದು ಇದಕ್ಕೆ ಪಂಚಾಯಿತಿ ವತಿಯಿಂದ ಲಕ್ಷಾಂತರ ರು. ಖರ್ಚು ಮಾಡಲಾಗುತ್ತಿದೆ. ಯಾರೂ ನೀರಿನ ಬಿಲ್‌ ಬಾಕಿ ಉಳಿಸಿದ್ದರೂ ತಕ್ಷಣ ಪಾವತಿ ಮಾಡಬೇಕು. ಅಧಿಕಾರಿಗಳು ಕೂಡ ವಸೂಲಾತಿಗೆ ಕ್ರಮ ಕೈಗೊಳ್ಳಬೇಕು. ಯಾರು ನಗರಸಭೆಯ ಮನವಿಗೆ ಬೆಲೆ ಕೊಡುವುದಿಲ್ಲವೊ ಅವರ ನೀರಿನ ಸಂಪರ್ಕವನ್ನು ಕಡಿತಗೊಳಿಸಬೇಕೆಂದು ಸೂಚಿಸಿದರು.ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್‌, ಮುಖ್ಯಾಧಿಕಾರಿ ರಾಜೇಶ್‌, ಎಂಜಿನಿಯರ್‌ ಮಹಾವೀರ ಆರಿಗ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರು, ನಾಮನಿರ್ದೇಶನ ಸದಸ್ಯರು ಉಪಸ್ಥಿತರಿದ್ದರು.

Share this article