ಕಂಪ್ಲಿ: ಗ್ರಾಪಂ ನೌಕರರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿ ರಾಜ್ಯ ಗ್ರಾಪಂ ನೌಕರರ ಸಂಘದ ಪದಾಧಿಕಾರಿಗಳು ಶಾಸಕ ಜೆ.ಎನ್.ಗಣೇಶಗೆ ಬುಧವಾರ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಸಹ ಕಾರ್ಯದರ್ಶಿ ರಾಜಸಾಬ್ ಮಾತನಾಡಿ, ಗ್ರಾಮ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರೆಂದು ಘೋಸಿಸಬೇಕು. ಪಂಚಾಯತಿ ನೌಕರರಿಗೆ ₹36 ಸಾವಿರ ವೇತನ ನೀಡಬೇಕು. ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು. ನೌಕರರಿಗೆ ನಿವೃತ್ತಿ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ ತಿಂಗಳು ಕನಿಷ್ಠ ₹6 ಸಾವಿರ ಪಿಂಚಣಿ ಅಥವಾ ಗ್ರಾಮ ಸೇವಕರಿಗೆ ನೀಡಿದಂತೆ ಪಂಚಾಯತ ನೌಕರರಿಗೂ ₹10 ಲಕ್ಷ ಇಡಗಂಟು ನೀಡಬೇಕು. ತರಬೇತಿ ಪಡೆದಿರುವ ಎಲ್ಲ ಸ್ವಚ್ಛ ವಾಹಿನಿ ನೌಕರರಿಗೆ ಉದ್ಯೋಗ ನೀಡಬೇಕು. ಒಡಂಬಡಿಕೆ ಪತ್ರ ಮತ್ತು ಪ್ರತಿ ವರ್ಷದ ನವಿಕರಣ ಪದ್ದತಿ ರದ್ದು ಪಡಿಸಬೇಕು. 15ನೇ ಹಣಕಾಸಿನಲ್ಲಿ ವೇತನ ಪಾವತಿ ಮಾಡಬೇಕು. ಪ್ರತಿಯೊಂದು ಪಂಚಾಯತಿಗೆ ಒಬ್ಬರೇ ಚಾಲಕರೆಂದು ಪರಿಗಣಿಸಿ ₹15 ಸಾವಿರ ವೇತನ ನೀಡಬೇಕು. ₹1.20 ಲಕ್ಷ ಆದಾಯ ಇರುವ ನೌಕರರ ಮತ್ತು ಕಾರ್ಮಿಕರ ಪಡಿತರ ಚೀಟಿಯನ್ನು ರದ್ದುಪಡಿಸದೇ ಆದಾಯದ ಮಿತಿಯನ್ನು ತಾವು ನಿಗದಿ ಮಾಡುತ್ತಿರುವ ಕನಿಷ್ಠ ವೇತನವನ್ನು ಮಾನದಂಡವಾಗಿಟ್ಟುಕೊಂಡು ಆದಾಯದ ಮಿತಿ ಹೆಚ್ಚಿಸಬೇಕು. ಈಗಾಗಲೇ ಗ್ರಾಮ ಪಂಚಾಯತಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಂಡು ಮುಂದುವರೆಸಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸಬೇಕು. 2017 ರ ಒಳಗೆ ಇರುವ ಹೆಚ್ಚುವರಿ ಕರವಸೂಲಿಗಾರರಿಗೆ ಅನುಮೋದನೆ ನೀಡಬೇಕು ಹಾಗೂ ಇತರೆ ಸೇರಿ 17ಕ್ಕೂ ಹೆಚ್ಚು ಬೇಡಿಕೆಗಳ ಮನವಿಯನ್ನು ಶಾಸಕರು ಸಧನದಲ್ಲಿ ಪ್ರಸ್ತಾಪಿಸುವ ಮೂಲಕ ನಮ್ಮ ಪರ ಧ್ವನಿಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವೀರಸೇನ ರೆಡ್ಡಿ, ಕಂಪ್ಲಿ ತಾಲೂಕು ಅಧ್ಯಕ್ಷ ಜಡೆಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಾಂದ್ ಬಾಷಾ, ಪ್ರಮುಖರಾದ ಚಂದ್ರಶೇಖರ, ಜೋಸೆಫ್, ಈಡಿಗರ ರಾಮಾಂಜಿನಿ, ಕುರುಗೋಡು ಮತ್ತು ಕಂಪ್ಲಿ ತಾಲೂಕಿನಲ್ಲಿನ ಎಲ್ಲ ಪಂಚಾಯತಿಗಳ ಸಿಬ್ಬಂದಿ ಇದ್ದರು.