ಸಾರಾಂಶ
ಹಾನಗಲ್ಲ: ಬಹುಜನ್ಮದ ಪುಣ್ಯಫಲದಿಂದ ಮಾನವ ಜನ್ಮ ಪ್ರಾಪ್ತಿಯಾಗಿದೆ. ಒಳ್ಳೆಯ ಮತ್ತು ಕೆಟ್ಟ ಗುಣಗಳೆರಡೂ ಮಾನವನಲ್ಲಿವೆ. ಪರಿಶುದ್ಧ ಬದುಕಿನಿಂದ ಮಾತ್ರ ಜೀವನ ಉಜ್ವಲಗೊಳ್ಳಲಿದೆ ಎಂದು ಬಾಳೇಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.ಇತ್ತೀಚೆಗೆ ಶಂಕರಿಕೊಪ್ಪ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಈಶ ನಿರ್ಮಿತ ಈ ಪ್ರಪಂಚದಲ್ಲಿ ಅದ್ಭುತ ಶಕ್ತಿ ಅಡಗಿದೆ. ಅದನ್ನು ಅರಿತು ಬಾಳುವ ಅಗತ್ಯವನ್ನು ಮಾನವ ಮನಗಾಣಬೇಕಿದೆ. ದೇವರು, ಧರ್ಮ, ಗುರುವನ್ನು ಆಶ್ರಯಿಸಿ ಬದುಕು ಕಟ್ಟಿಕೊಳ್ಳಬೇಕಿದೆ. ಎಲ್ಲರೂ ನನ್ನವರು ಎನ್ನುವ ಉದಾತ್ತ ಮನೋಭಾವನೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಮುನ್ನಡೆಯಬೇಕಿದೆ. ಆಧುನಿಕ ಕಾಲದಲ್ಲಿ ಸ್ವಾರ್ಥ ಮತ್ತು ಸಂಕುಚಿತ ಮನೋಭಾವ ಬೆಳೆದು ಬದುಕು ತೊಳಲಾಟದಲ್ಲಿದೆ. ಜಗದ ಕತ್ತಲು ಕಳೆಯಲು ಸೂರ್ಯ ಬೇಕು. ಅಜ್ಞಾನ ಎಂಬ ಕತ್ತಲು ಕಳೆಯಲು ಗುರು ಬೇಕು. ಹಾಗಾಗಿ ಎಲ್ಲ ಕಾಲಘಟ್ಟದಲ್ಲಿ ಗುರುವನ್ನು ಆಶ್ರಯಿಸಿ ಬದುಕು ಕಟ್ಟಿಕೊಂಡವರ ಸಂಖ್ಯೆ ಹೆಚ್ಚಿದೆ. ರೇಣುಕಾಚಾರ್ಯರು ಜೀವನ ದರ್ಶನದ ಮಾನವೀಯ ಮೌಲ್ಯಗಳನ್ನು ಬೋಧಿಸಿ ಸಕಲರನ್ನು ಉದ್ಧರಿಸಿದ್ದಾರೆ ಎಂದರು.ಉದ್ಘಾಟನೆ ನೆರವೇರಿಸಿದ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಪಂಚ ಪೀಠಗಳು ಶತ, ಶತಮಾನಗಳಿಂದ ಶಾಂತಿ, ಸಮಾನತೆ, ಸಾಮರಸ್ಯ ಮತ್ತು ಸೌಹಾರ್ದತೆಯ ಸಂದೇಶ ಸಾರಿವೆ. ಪಂಚಪೀಠಗಳು ಜ್ಞಾನ, ಭಕ್ತಿ ಮತ್ತು ಸೇವಾ ಪರಂಪರೆಯ ಜೀವಂತ ಸಂಕೇತವಾಗಿವೆ. ಸಾಮಾಜಿಕ ಸುಧಾರಣೆಯಲ್ಲಿ ಪಂಚಪೀಠಾಧೀಶ್ವರರ ಕೊಡುಗೆ ಅಪಾರ. ಅನ್ನದಾನ, ಆಶ್ರಯದಾನ, ಶಿಕ್ಷಣದಾನ ಇತ್ಯಾದಿ ಚಟುವಟಿಕೆಗಳು ಅನುಕರಣೀಯವಾಗಿವೆ. ವಚನ ಸಾಹಿತ್ಯ, ಶರಣ ಸಂಪ್ರದಾಯ, ತತ್ವಶಾಸ್ತ್ರ ಉಳಿಸಿ, ಬೆಳೆಸಿದ ಶ್ರೇಯಸ್ಸೂ ಸಹ ಪೀಠಗಳಿಗೆ ಸಲ್ಲಬೇಕಿದೆ ಎಂದರು.ಕವಲೆದುರ್ಗದ ಭುವನಗಿರಿ ಮಠದ ಮರುಳಸಿದ್ದ ಸ್ವಾಮೀಜಿ, ಬಂಕಾಪುರದ ರೇವಣಸಿದ್ದೇಶ್ವರ ಸ್ವಾಮೀಜಿ, ರಟ್ಟೀಹಳ್ಳಿಯ ಶಿವಲಿಂಗ ಸ್ವಾಮೀಜಿ, ಸಾಲೂರಿನ ಗುರುಲಿಂಗ ಸ್ವಾಮೀಜಿ, ನೆಗಳೂರಿನ ಗುರುಶಾಂತೇಶ್ವರ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಕಡೆನಂದಿಹಳ್ಳಿಯ ರೇವಣಸಿದ್ದೇಶ್ವರ ಸ್ವಾಮೀಜಿ, ತಿಳವಳ್ಳಿಯ ನಿರಂಜನ ಸ್ವಾಮೀಜಿ, ಕುಮಾರಪಟ್ಟಣದ ಜಗದೀಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.ಹಾವೇರಿಯ ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಪಂ ಮಾಜಿ ಸದಸ್ಯ ಮಾಲತೇಶ ಸೊಪ್ಪಿನ, ಮುಖಂಡರಾದ ಭರಮಣ್ಣ ಶಿವೂರ, ಕರಬಸಪ್ಪ ಶಿವೂರ, ನಿಂಗಪ್ಪ ಪೂಜಾರ, ಸಿದ್ದಲಿಂಗಪ್ಪ ಶಂಕರಿಕೊಪ್ಪ, ಶೇಖರಯ್ಯ ಮಠದ, ಮಂಜುನಾಥ ಮಠದ ಇದ್ದರು. ಡಾ. ಗುರುಪಾದಯ್ಯ ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))