ಕಂಪ್ಲಿ: ಚಾಲಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಖಾಸಗಿ ಬಸ್ ಚಾಲಕರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಶಿವರಾಜ ಶಿವಪುರ ಅವರ ಮುಖಾಂತರ ರಾಜ್ಯಪಾಲರಿಗೆ ಬುಧವಾರ ಮನವಿ ಪತ್ರ ಸಲ್ಲಿಸಲಾಯಿತು.
ಖಾಸಗಿ ಬಸ್ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಅಧ್ಯಕ್ಷ ಶರ್ಮಸ್ ವಲಿ ಮಾತನಾಡಿ, ರಾಜ್ಯ ಸರ್ಕಾರದ ವತಿಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಹಾಗೂ ನಮ್ಮ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಈಡೇರಿಸುವವರೆಗೆ ವಾಹನಗಳ ಓಡಾಟ ನಿಲ್ಲಿಸಲು ನಿರ್ಧರಿಸಿದ್ದು, ಗಡಿ ಭಾಗಗಳಲ್ಲಿರುವ ಎಲ್ಲ ಸಾರಿಗೆ ಇಲಾಖೆ ತಪಾಸಣೆ ಠಾಣೆಗಳನ್ನು ತೆಗೆದುಹಾಕಬೇಕು. ಏಳು ಲಕ್ಷ ಜುಲ್ಮಾನೆ ಮತ್ತು ಹತ್ತು ವರ್ಷ ಜೈಲು ಶಿಕ್ಷೆ ಮಂಡಿಸಿರುವುದು ಒಪ್ಪುವುದಿಲ್ಲ ಎಂದರು.ಕಪ್ಪುಪಟ್ಟಿ ಹೆಸರಿನಲ್ಲಿ ವಾಣಿಜ್ಯ ವಾಹನಗಳಿಗೆ ಎಫ್‌ಸಿ ಮತ್ತು ಪರ್ಮಿಟ್ ನವೀಕರಣ ಮಾಡಿಕೊಡಲು ಸಾರಿಗೆ ಅಧಿಕಾರಿಗಳು ನಿರಾಕರಿಸುವುದನ್ನು ನಿಲ್ಲಿಸಬೇಕು.
ಡಿಎಸ್ಎ ಕೇಸುಗಳು ಎಲ್ಲೇ ಇದ್ದರೂ ಅದನ್ನು ವಾಹನ ಮಾಲೀಕರು ತಮ್ಮ ಮೂಲ ಕಚೇರಿಯಲ್ಲಿ ಸರಿಪಡಿಸಿಕೊಳ್ಳಲು ಅವಕಾಶ ಮಾಡಿ ಕೊಡಬೇಕು.ಗಂಗಾವತಿಯ ಹತ್ತಿರ ಇರುವ ಟೋಲ್ ಹತ್ತಿರ ಹೈವೇ ರಸ್ತೆಯಲ್ಲಿ ಹೈವೇ ಪೆಟ್ರೋಲಿಯಂನಿಂದ ಮತ್ತು 112 ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸರು 24 ತಾಸುಗಳು ರಸ್ತೆಯಲ್ಲಿ ಪ್ರತಿ ಲಾರಿಗಳೇ ನಿಲ್ಲಿಸಿ ತೊಂದರೆ ಕೊಡುವುದನ್ನು ನಿಲ್ಲಿಸಬೇಕು.
ಗಂಗಾವತಿಯಿಂದ 40 ಕಿಮೀ ಒಳಗೆ 4 ಟೋಲ್‌ಗಳು ಮರಳಿ, ಹೇಮಗುಡ್ಡ, ಶಹಪುರ, ಹಿಟ್ನಾಳ ಬಳಿ ಇರುತ್ತವೆ. ಇವುಗಳಿಂದ ಸ್ಥಳೀಯ ಲಾರಿಗಳಿಗೆ ವಿನಾಯಿತಿ ಕೊಡಿಸಬೇಕು. ಕೇಂದ್ರ ಸರ್ಕಾರದ ಮುಂದಿರುವ ಚಾಲಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಖಾಸಗಿ ಬಸ್ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಒತ್ತಾಯವಾಗಿದೆ ಎಂದರು.ಈ ಸಂದರ್ಭದಲ್ಲಿ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಗುರುಸ್ವಾಮಿ, ಮಹೇಶನಾಯಕ, ಆಟೋ ರಾಘವೇಂದ್ರ, ಖಾಜಾ, ವೆಂಕಟೇಶ, ಉಮೇಶ, ಅಮರೇಸ್ವಾಮಿ, ಚನ್ನಕೇಶವ, ಗೌಸಪೀರ ಚಾಲಕರು ಸೇರಿದಂತೆ ಅನೇಕರಿದ್ದರು.