ಕನ್ನಡಪ್ರಭ ವಾರ್ತೆ ಬೆಳಗಾವಿ
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ಅಂಬೇಡ್ಕರ್ ಉದ್ಯಾನದಿಂದ ಹಲಗಿ ಬಾರಿಸುತ್ತ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಮಾದಿಗ ಸಮಾಜಕ್ಕೆ ಒಳಮೀಸಲಾತಿ ಜಾರಿ ಮಾಡುವಂತೆ ಕಳೆದೊಂದು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೂ ರಾಜ್ಯ ಸರ್ಕಾರ ಮಾದಿಗರಿಗೆ ಒಳಮೀಸಲಾತಿ ಜಾರಿ ಮಾಡುವಲ್ಲಿ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.ಈ ವೇಳೆ ರಾಯಬಾಗ ಮತಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್ ಸೇರಿ ಮತ್ತಿತರ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿ ಮಾಡಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮೀಸಲಾತಿ ಜಾರಿಗೆ ತರಬೇಕು. ಮೀಸಲಾತಿ ನೀಡಲು ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಒಳ ಮೀಸಲಾತಿ ಜಾರಿಯಾಗಬೇಕು ಎನ್ನುವುದು ಕಳೆದ ಮೂರೂವರೆ ದಶಕಗಳ ನಮ್ಮ ಹೋರಾಟವಾಗಿದೆ. ಅಲ್ಲದೇ ಮಾದಿಗ ಸಮಾಜಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಹಾಮೋಸ ಮಾಡಿದೆ. ಒಳಮೀಸಲಾತಿ ಕಾಂಗ್ರೆಸ್ ಸರ್ಕಾರದ ಭಿಕ್ಷೆಯಲ್ಲ, ನಮ್ಮ ಹಕ್ಕಾಗಿದೆ. ಆ.15 ರೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೇ ರಾಜ್ಯಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಬಳಿಕ ಒಳಮೀಸಲಾತಿ ತಕ್ಷಣ ಜಾರಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮೂಲಕ ಪ್ರತಿಭಟನಾಕಾರರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಶಾಂತ್ ಐಹೊಳೆ, ಅನಂತಕುಮಾರ ಬ್ಯಾಕೂಡ್, ಚಂದ್ರಕಾಂತ ಕಾದ್ರೋಳ್ಳಿ, ರಮೇಶ ಮಾದರ, ಸಿದ್ದು ಮೇತ್ರಿ, ಉದಯ ಎಸ್.ರೆಡ್ಡಿ, ಬಾಳವ್ವ ಹರಿಜನ, ರೇಖಾ ಜಕ್ಕನ್ನವರ, ಹನುಮವ್ವ ಮರೆನ್ನವರ, ಜ್ಯೋತಿ ಮಣಿ, ಯಲ್ಲವ್ವ ಹಳ್ಳೂರ ಮತ್ತಿತರರು ಪಾಲ್ಗೊಂಡಿದ್ದರು.