ಕಾಂತರಾಜ ಆಯೋಗದ ವರದಿ ಜಾರಿಗೆ ಆಗ್ರಹ

KannadaprabhaNewsNetwork | Published : Dec 19, 2024 12:30 AM

ಸಾರಾಂಶ

ಕಾಂತರಾಜ ಆಯೋಗದ ವರದಿಯನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿ ಅಹಿಂದ ಚಳುವಳಿ ಸಂಘಟನೆ ಮತ್ತು ಹಿಂದುಳಿದ ಜನಜಾಗೃತಿ ವೇದಿಕೆ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂತರಾಜ ಆಯೋಗದ ವರದಿಯನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿ ಅಹಿಂದ ಚಳುವಳಿ ಸಂಘಟನೆ ಮತ್ತು ಹಿಂದುಳಿದ ಜನಜಾಗೃತಿ ವೇದಿಕೆ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಂಚಮಸಾಲಿ ಸಮುದಾಯ 2ಎ ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಸಿ, ಸಂವಿಧಾನ ಪರಿಚ್ಛೇದ 15(4), 16(4) ಹಾಗೂ ಪರಿಚ್ಛೇದ 340 ಅಡಿಯಲ್ಲಿ ನೇಮಕವಾದ ಕಾಂತರಾಜ ಆಯೋಗ ವರದಿ ಜಾರಿಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.ಕಳೆದ ವಾರ ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಕೆಲವರು ವಿಧಾನಸಭೆಯ ಅಧಿವೇಶನಕ್ಕೆ ಮುತ್ತಿಗೆ ಹಾಕಿ 2ಎ ಮೀಸಲಾತಿ ನೀಡಲು ಗಲಾಟೆ ನಡೆಸಿರುವುದು ಖಂಡನೀಯ. 2ಎ ಮೀಸಲಾತಿ ಹರಿದು ತಿನ್ನುವ ಯಾವುದೇ ಪ್ರಯತ್ನವನ್ನು ಈ ಶ್ರೇಣಿಯಲ್ಲಿರುವ ಹಿಂದುಳಿದ ವರ್ಗಗಳು ವಿರೋಧಿಸುತ್ತವೆ. ಸಂವಿಧಾನ ವಿರೋಧಿಯಾದ ಈ ಬೇಡಿಕೆ ಹಿಂದುಳಿದ ವರ್ಗಗಳಲ್ಲಿ ಭಾರೀ ಆಕ್ರೋಶವನ್ನು ಉಂಟುಮಾಡಿದ್ದು, ಸಮಾಜದಲ್ಲಿ ಅಶಾಂತಿ ತಲೆದೂರಲು ಕಾರಣವಾಗಿದೆ. ಆದ್ದರಿಂದ 2ಎ ಮೀಸಲಾತಿ ಸೇರ್ಪಡೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕಾಂತರಾಜ ಆಯೋಗವು ಹಿಂದುಳಿದ ಜಾತಿ ವರ್ಗಗಳ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ, ರಾಜಕೀಯ ಅಧಿಕಾರ ಹಂಚಿಕೆಗೆ ಮತ್ತು ರಾಜ್ಯ ಸರ್ಕಾರದ ನಿಗಮ ಮಂಡಳಿಗಳಿಗೆ ಹಣಕಾಸಿನ ಹಂಚಿಕೆ ಮಾಡುವಾಗಲೂ ಸಹ ಅಂಕಿ ಅಂಶಗಳು ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಆಯೋಗವು ಬಹು ಉಪಯೋಗಿ ಅಂಕಿ ಅಂಶಗಳನ್ನು ಸಂಗ್ರಹಿಸಿ ವರದಿ ತಯಾರಿಸಿದೆ. ಆದ್ದರಿಂದ ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯಕ್ಕೆ ಬದ್ಧರಾದ ತಾವುಗಳು ಕೂಡಲೇ ವರದಿಯನ್ನು ಚಾಚು ತಪ್ಪದಂತೆ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಅಹಿಂದ ಚಳುವಳಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪ್ರಮುಖರಾದ ಮೊಹಮ್ಮದ್ ಸನಾವುಲ್ಲಾ, ಪ್ರೊ. ಎಚ್. ರಾಚಪ್ಪ, ಆರ್. ಪ್ರಸನ್ನಕುಮಾರ್, ಎನ್.ಪಿ. ಧರ್ಮರಾಜ್, ಮಂಜುನಾಥ ಬಾಬು, ಪ್ರೊ. ಕಲ್ಲಣ್ಣ, ಪ್ರೊ.ಜಿ. ಪರಮೇಶ್ವರಪ್ಪ, ಬಿ. ಜನಮೇಜಿರಾವ್, ಆರ್.ಟಿ. ನಟರಾಜ್, ವಿ. ರಾಜು, ಎಸ್.ವಿ. ರಾಜಮ್ಮ, ಚನ್ನವೀರ ಗಾಮನಗಟ್ಟಿ, ನಗರದ ಮಹಾದೇವಪ್ಪ, ಹತ್ತಿಗುಂದ ಚಂದ್ರಶೇಖರ್, ಎಸ್.ಬಿ. ಅಶೋಕ್‍ಕುಮಾರ್, ಸುರೇಶ್ ಬಾಬು, ಅಫ್ರಿದಿ ಇನ್ನಿತರರು ಭಾಗವಹಿಸಿದ್ದರು.

Share this article