ಕುಷ್ಟಗಿ: ಕೃಷ್ಣಾ ಬಿ ಸ್ಕೀಮ್ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ. ನಾರಾಯಣಗೌಡ ಬಣದ ವತಿಯಿಂದ ತಹಸೀಲ್ದಾರ್ ಮೂಲಕ ನೀರಾವರಿ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಸಂಘದ ಸದಸ್ಯರು, ಕೃಷ್ಣಾ ಬಿ ಸ್ಕೀಂನ ಕೊಪ್ಪಳ ಏತನೀರಾವರಿ ಯೋಜನೆಗೆ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಆಗಿನ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದ ಬಳಿ ಅಡಿಗಲ್ಲು ನೆರವೇರಿಸಿದರು. ಅಂದಿನಿಂದ ಇಂದಿನವರೆಗೂ ಈ ಕಾಮಗಾರಿ ಕುಂಟುತ್ತ ಸಾಗಿ, ಕಳೆದ ವರ್ಷ ಕಲಾಲಬಂಡಿಯವರೆಗೆ ನೀರು ಬಿಟ್ಟು ನಂತರ ಕೆಲವು ಕೆರೆಗಳಿಗೆ ನೀರನ್ನು ಹರಿಸಲಾಯಿತು. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಕರ್ನಾಟಕಕ್ಕೆ ಒಟ್ಟು 150 ಟಿಎಂಸಿ ನೀರನ್ನು ನೀಡಬೇಕಿದೆ. ಅದರಲ್ಲಿ ಇದುವರೆಗೆ 110 ಟಿಎಂಸಿ ನೀರನ್ನು ಬಳಕೆ ಮಾಡಲು ವಿವಿಧ ಯೋಜನೆಗಳನ್ನು ಮಾಡಲಾಗಿದೆ. ರಾಜ್ಯದ ಪಾಲಿಗೆ ಇನ್ನೂ 40 ಟಿಎಂಸಿ ನೀರು ಬರಬೇಕಿದೆ. ರಾಜ್ಯಕ್ಕೆ ಬರಬೇಕಿರುವ ನೀರಿನ ಪಾಲಿನಲ್ಲಿ ವಿವಿಧ ಏತ ನೀರಾವರಿ ಯೋಜನೆಗಳ ಮೂಲಕ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸಬೇಕಿದೆ. ಆರಂಭದಲ್ಲಿ ಕೊಪ್ಪಳ ಏತನೀರಾವರಿ ಯೋಜನೆಯನ್ನು ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಮತ್ತು ಕನಕಗಿರಿ ತಾಲೂಕುಗಳ ಕೃಷಿ ಜಮೀನುಗಳಿಗೆ ನೀರಾವರಿ ಸೌಕರ್ಯ ಒದಗಿಸಲು ಜಾರಿಗೊಳಿಸಲು ರೂಪಿಸಲಾಗಿದೆ. ಆದರೆ, ಸರಕಾರ ಯೋಜನೆಯ ಮೂಲ ಉದ್ದೇಶವನ್ನು ತಿರುಚಿ ಇದೀಗ ಈ ಯೋಜನೆಯನ್ನು ಕೆರೆತುಂಬಿಸುವ ಯೋಜನೆಯನ್ನಾಗಿ ಪರಿವರ್ತಿಸಲು ಹೊರಟಿದೆ. ಯೋಜನೆಯ ಮೂಲಕ ಕೆರೆಗಳನ್ನು ತುಂಬಿಸುವುದಕ್ಕಿಂತ ರೈತರ ಜಮೀನುಗಳಿಗೆ ನೀರೊದಗಿಸುವ ಅವಶ್ಯಕತೆ ಇದೆ. ಮಳೆಯಾಶ್ರಿತ ಕೃಷಿ ಜಮೀನುಗಳನ್ನು ಹೊಂದಿರುವ ಈ ಭಾಗದ ರೈತರ ಪಾಲಿಗೆ ವರದಾನವಾಗಬೇಕಿರುವ ಈ ಯೋಜನೆಯನ್ನು ತಿರುಚುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರಕಾರ ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಗಂಭೀರ ಚಿಂತನೆ ನಡೆಸಿ ಅಗತ್ಯ ಅನುದಾನ ಬಿಡುಗಡೆ ಮಾಡಿ ಕೂಡಲೇ ಮುಂದಿನ ಹಂತಗಳ ಕಾಮಗಾರಿ ಆರಂಭಿಸಬೇಕು. ಆ ಮೂಲಕ ರೈತರಿಗೆ ಸರಕಾರ ನೆರವಾಗಬೇಕು.
ಪ್ರಸಕ್ತ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದು ಕೃಷ್ಣಾ ನದಿಯ ನೀರು ವ್ಯರ್ಥವಾಗಿ ಹರಿದು ಹೋಗಿರುವುದು ಎಲ್ಲರಿಗೂ ಗೊತ್ತಿದೆ. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ನೀರಾವರಿ ಯೋಜನೆಗಳಿಗೆ ಬಳಕೆ ಮಾಡುವುದು ಸೂಕ್ತವಾಗಿದೆ. ಸರಕಾರ ಈ ನಿಟ್ಟಿನಲ್ಲಿ ಕೂಡಲೇ ಕಾರ್ಯೋನ್ಮುಖವಾಗಬೇಕು. ಈ ಭಾಗದ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿ ಯೋಜನೆಯ ಸಂಪೂರ್ಣ ಅನುಷ್ಠಾನಕ್ಕೆ ಬದ್ಧರಾಗಬೇಕು. ಹೀಗೆ ವಿಳಂಬ ಧೋರಣೆ ಮುಂದುವರೆಸಿದರೆ ನಮ್ಮ ಸಂಘಟನೆಯಿಂದ ಹೋರಾಟ ತೀವ್ರಗೊಳಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷ ಆದಪ್ಪ ಎಸ್. ಉಳ್ಳಾಗಡ್ಡಿ, ತಾಲೂಕಾಧ್ಯಕ್ಷ ಪ್ರಕಾಶ ಮನ್ನೇರಾಳ, ಉಪಾಧ್ಯಕ್ಷ ಚನ್ನಪ್ಪ ನಾಲಗಾರ, ಅಶೋಕ ಮಿಸ್ಕಿನ್, ಶರಣಪ್ಪ ಡಿ. ನವಲಹಳ್ಳಿ ಸೇರಿದಂತೆ ಅನೇಕರು ಇದ್ದರು.