ಹುಬ್ಬಳ್ಳಿ: ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಗರದಲ್ಲಿ ಕಳಸಾ- ಬಂಡೂರಿ ರೈತ ಹೋರಾಟ ಸಮಿತಿಯಿಂದ ಗುರುವಾರ ಧರಣಿ ನಡೆಸಲಾಯಿತು.
ಇಲ್ಲಿನ ಸರ್ ಸಿದ್ದಪ್ಪ ಕಂಬಳಿ ಪ್ರತಿಮೆ ಬಳಿ ಬೆಳಗ್ಗೆ 10ರಿಂದ 2ರ ವರೆಗೆ ಧರಣಿ ನಡೆಸಲಾಯಿತು. ಬೇಡಿಕೆ ಈಡೇರುವ ವರೆಗೂ ಪ್ರತಿನಿತ್ಯ ಧರಣಿ ನಡೆಯಲಿದೆ.ಜಿಲ್ಲೆಯ ವಿವಿಧ ಭಾಗಗಳಿಂದ ಧರಣಿ ಸ್ಥಳಕ್ಕೆ ಆಗಮಿಸಿ ಸಮಾವೇಶಗೊಂಡ ರೈತ ಮುಖಂಡರು ಕೇಂದ್ರ ಸರ್ಕಾರ ಮತ್ತು ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗದ ಬಹುವರ್ಷಗಳ ಬೇಡಿಕೆಯಾದ ಮಹದಾಯಿ ಯೋಜನೆಯ ಅನುಷ್ಠಾನಕ್ಕೆ ನಿರಂತರ ಪ್ರತಿಭಟನೆ, ಸತ್ಯಾಗ್ರಹ ಹಾಗೂ ಕಾನೂನು ಹೋರಾಟ ನಡೆಸಿದರೂ ಕೇಂದ್ರ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಅನುಮತಿ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ಜೋಶಿ ಅವರು ಮನಸು ಮಾಡಿದರೆ ಎರಡೇ ದಿನದಲ್ಲಿ ಅನುಮತಿ ಕೊಡಿಸಬಹುದು. ಆದರೆ, ಅವರು ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಹೋರಾಟಗಾರರು ಆರೋಪಿಸಿದರು.ಒಂದಿಲ್ಲೊಂದು ಕಾನೂನು ಮತ್ತು ಪರಿಸರ ಸಮಿತಿಯ ಒಪ್ಪಿಗೆ ನೆಪದಲ್ಲಿ ಯೋಜನೆಗೆ ಹಿನ್ನಡೆ ಮಾಡಿಸುತ್ತಲೇ ಬರಲಾಗುತ್ತಿದೆ. ಯೋಜನೆಯ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯ. ಕೂಡಲೇ ಯೋಜನೆಗೆ ಬೇಕಾದ ಅನುಮತಿಯನ್ನು ಕೇಂದ್ರ ಸರ್ಕಾರ ನೀಡಬೇಕು. ಇಲ್ಲದೇ ಹೋದಲ್ಲಿ ವಿವಿಧ ಬಗೆಯಲ್ಲಿ ನಿರಂತರ ಹೋರಾಟ ಮುಂದುವರೆಸಲಾಗುವುದು. ಒಂದೇ ದಿನಕ್ಕೆ ಹೋರಾಟ ನಿಲ್ಲದು. ಅನುಮತಿ ಸಿಗುವ ವರೆಗೂ ಪ್ರತಿನಿತ್ಯ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಧರಣಿ ಸತ್ಯಾಗ್ರಹದಲ್ಲಿ ಕಳಸಾ- ಬಂಡೂರಿ ರೈತ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಎಐಟಿಯುಸಿ, ಕಟ್ಟಡ ಕಾರ್ಮಿಕರ ಸಂಘಟನೆ, ಆಟೋ ಚಾಲಕರ, ನಿವೃತ್ತ ಶಿಕ್ಷಕರ ಕೃಷಿಕ ಸಮಾಜ, ಪಕ್ಷಾತೀತ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದವು.ಪ್ರತಿಭಟನೆಯಲ್ಲಿ ಕಳಸಾ- ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದು ತೇಜಿ, ಸಂಘಟನೆ ಉಪಾಧ್ಯಕ್ಷ ಬಾಬಾಜಾನ ಮುಧೋಳ, ಜಿಲ್ಲಾಧ್ಯಕ್ಷ ರವಿ ಕಂಬಳಿ, ಬಿ.ಎಂ. ಹಣಸಿ, ರಾಜು ನಾಯಕವಾಡಿ, ಮಾಣಿಕ್ಯ ಚಿಲ್ಲೂರ, ಬಿ.ಎ. ಮುಧೋಳ., ಹನುಮಂತಪ್ಪ ಪವಾಡಿ, ರಮೇಶ ಬೋಸ್ಲೆ, ಎಸ್.ಬಿ. ಪಾಟೀಲ ಸೇರಿದಂತೆ ಅನೇಕರಿದ್ದರು.