ಸಂಡೂರು: ಮಸಣ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಸಣ ಕಾರ್ಮಿಕರ ಸಂಘದ ತಾಲೂಕು ಘಟಕದ ವತಿಯಿಂದ ಮಂಗಳವಾರ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಕಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಎ. ಸ್ವಾಮಿ ಅವರು ಶಿರಸ್ತೇದಾರ್ ಕೆ.ಎಂ. ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ತಾಲೂಕಿನ ವಿವಿಧೆಡೆ ಇರುವ ಮಸಣ ಕಾರ್ಮಿಕರು ವಂಶಪರಂಪರೆಯಿಂದ ಸ್ಮಶಾನದಲ್ಲಿ ಕುಣಿ ತೆಗೆಯುವ ಹಾಗೂ ಮುಚ್ಚುವ ಕಾರ್ಯ ನೆರವೇರಿಸುತ್ತಿದ್ದಾರೆ. ಈ ಹಿಂದಿನ ಸರ್ಕಾರ ಮಸಣ ಕಾರ್ಮಿಕರ ಪಟ್ಟಿ ನೀಡುವಂತೆ ಸೂಚಿಸಿದರೆ, ತಾಲೂಕಿನಲ್ಲಿಯ ಪಿಡಿಒಗಳು ಮಸಣ ಕಾರ್ಮಿಕರು ಯಾರು ಇಲ್ಲವೆಂದು ವರದಿ ನೀಡಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಒಟ್ಟು ೪೦೨ ಮಸಣ ಕಾರ್ಮಿಕರನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿಯನ್ನು ಸರ್ಕಾರಕ್ಕೆ ನೀಡಿ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಮಸಣಕ್ಕೆ ಒಬ್ಬರನ್ನು ಮಸಣ ನಿರ್ವಾಹಕರನ್ನಾಗಿ ನೇಮಿಸಿಕೊಳ್ಳಬೇಕು. ಮಸಣ ಕಾರ್ಮಿಕರಿಗೆ ಅಗತ್ಯವಾದ ಪರಿಕರಗಳನ್ನು ನೀಡಬೇಕು. ಮಸಣ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸಬೇಕು. ಸ್ಮಶಾನಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಬೇಕು. ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಕುಡಿಯಲು ಮತ್ತು ಕೈಕಾಲು ತೊಳೆದುಕೊಳ್ಳಲು ನೀರಿನ ವ್ಯವಸ್ಥೆ ಮಾಡಬೇಕು. ಒತ್ತುವರಿಯಾಗಿರುವ ಸ್ಮಶಾನಗಳನ್ನು ಸರ್ವೆ ಮಾಡಿಸಿ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸುತ್ತಲು ತಡೆಗೋಡೆ ನಿರ್ಮಿಸಬೇಕು ಸೇರಿದಂತೆ ಮುಂತಾದವು ಪ್ರಮುಖ ಬೇಡಿಕೆಗಳಾಗಿದ್ದು, ಇವುಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಂಘದ ತಾಲೂಕು ಘಟಕದ ಅಧ್ಯಕ್ಷ ಹೊನ್ನೂರಸ್ವಾಮಿ, ಕಾರ್ಯದರ್ಶಿ ಎಚ್. ದುರುಗಮ್ಮ, ಸದಸ್ಯರಾದ ಜಿ. ರಾಜು, ಎಚ್. ಗಂಗಪ್ಪ, ಜೆ. ಅಣ್ಣಪ್ಪ, ಎನ್. ನರಸಿಂಹ, ಎ. ರಾಜಣ್ಣ, ವಿವಿಧ ಕಾರ್ಮಿಕರ ಸಂಘಟನೆಗಳ ಮುಖಂಡರಾದ ಜೆ.ಎಂ. ಚನ್ನಬಸಯ್ಯ, ಎಸ್. ಕಾಲುಬ ಮುಂತಾದವರು ಉಪಸ್ಥಿತರಿದ್ದರು.