ತಿಪಟೂರು ಮಾದರಿ ಕೊಬ್ಬರಿ ಮಾರುಕಟ್ಟೆ ವ್ಯವಸ್ಥೆ ರಾಜ್ಯಾದ್ಯಂತ ಜಾರಿಗೆ ಆಗ್ರಹ

KannadaprabhaNewsNetwork |  
Published : Oct 07, 2026, 01:30 AM IST
ತಿಪಟೂರು ಮಾದರಿ ಕೊಬ್ಬರಿ ಮಾರುಕಟ್ಟೆ ವ್ಯವಸ್ಥೆ ರಾಜ್ಯಾದ್ಯಂತ ಜಾರಿಗೆ ಆಗ್ರಹ | Kannada Prabha

ಸಾರಾಂಶ

ಟೆಂಡರ್ ದರ, ತೂಕ, ಖರೀದಿ ಪ್ರಮಾಣ, ಬಿಲ್ ಮೊತ್ತ ಮತ್ತು ಪಾವತಿ ವಿವರಗಳನ್ನು ಪರಸ್ಪರ ಪರಿಶೀಲಿಸುವ ವ್ಯವಸ್ಥೆ ರೂಪಿಸಬೇಕು. ಅಗತ್ಯವಿದ್ದಲ್ಲಿ ಎರಡೂ ಇಲಾಖೆಗಳು ಜಂಟಿಯಾಗಿ ತಪಾಸಣೆ ನಡೆಸಿ, ವ್ಯತ್ಯಾಸಗಳು ಕಂಡುಬಂದಲ್ಲಿ ಅನ್ವಯಿಸುವ ನಿಯಮಗಳಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು.

ಕನ್ನಡಪ್ರಭವಾರ್ತೆ ತಿಪಟೂರು

ತೆಂಗು ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಕೊಬ್ಬರಿ ಮಾರುಕಟ್ಟೆಗಳಲ್ಲಿ ತಿಪಟೂರಿನಲ್ಲಿ ಜಾರಿಯಲ್ಲಿರುವ ಟೆಂಡರ್ ವ್ಯವಸ್ಥೆ ಹಾಗೂ ಇತರ ಪಾರದರ್ಶಕ ಮಾರುಕಟ್ಟೆ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸದೃಢ ಫೌಂಡೇಶನ್ ಅಧ್ಯಕ್ಷ ಭೋಜರಾಜ ಬಿ.ಜಿ. ಮನವಿ ಮಾಡಿದ್ದಾರೆ.

ತಿಪಟೂರು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಟೆಂಡರ್ ಪದ್ಧತಿಯೊಂದಿಗೆ ತೂಕ, ಗುಣಮಟ್ಟ ಪರಿಶೀಲನೆ, ಬಿಲ್ಲಿಂಗ್, ದಾಖಲೆ ನಿರ್ವಹಣೆ ಮತ್ತು ಪಾವತಿ ವ್ಯವಸ್ಥೆಗಳನ್ನು ರಾಜ್ಯದ ಎಲ್ಲಾ ಕೊಬ್ಬರಿ ಮಾರುಕಟ್ಟೆಗಳಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಅವರು ಅಧಿಕಾರಿಗಳ ಗಮನಕ್ಕೆ ತಂದರು. ಈ ಸಂಬಂದ ಭೋಜರಾಜ ಅವರು ಕೃಷಿ ಮಾರಾಟ ಇಲಾಖೆ ಕೇಂದ್ರ ಕಚೇರಿಯಲ್ಲಿ ಇಲಾಖೆ ನಿರ್ದೇಶಕರಾದ ಯೋಗೀಶ್ ಎ.ಎಂ., ಹಾಗೂ ಕೊಬ್ಬರಿ ಮಾರುಕಟ್ಟೆ ನೋಡಲ್ ಅಧಿಕಾರಿಯಾದ ಎಸ್.ಬಿ. ನ್ಯಾಮಗೌಡ ಅವರನ್ನು ಭೇಟಿ ಮಾಡಿದ ಭೋಜರಾಜ, ಕೊಬ್ಬರಿ ಮಾರುಕಟ್ಟೆಗಳಲ್ಲಿನ ವಹಿವಾಟು ವ್ಯವಸ್ಥೆ ಹಾಗೂ ರೈತರಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದರು.

ಕೊಬ್ಬರಿ ವಹಿವಾಟಿನಲ್ಲಿ ಅಂಡರ್ ಬಿಲ್ಲಿಂಗ್ ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಭೋಜರಾಜ ಒತ್ತಾಯಿಸಿದರು. ಟೆಂಡರ್‌ನಲ್ಲಿ ನಿಗದಿಯಾದ ದರ, ಕೊಬ್ಬರಿ ತೂಕ ಮತ್ತು ಪ್ರಮಾಣ, ಬಿಲ್ ಮೊತ್ತ ಹಾಗೂ ವಾಸ್ತವಿಕ ಪಾವತಿ ಮೊತ್ತಗಳ ನಡುವೆ ವ್ಯತ್ಯಾಸವಾಗದಂತೆ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.

ಟೆಂಡರ್ ದರ, ತೂಕ, ಖರೀದಿ ಪ್ರಮಾಣ, ಬಿಲ್ ಮೊತ್ತ ಮತ್ತು ಪಾವತಿ ವಿವರಗಳನ್ನು ಪರಸ್ಪರ ಪರಿಶೀಲಿಸುವ ವ್ಯವಸ್ಥೆ ರೂಪಿಸಬೇಕು. ಅಗತ್ಯವಿದ್ದಲ್ಲಿ ಎರಡೂ ಇಲಾಖೆಗಳು ಜಂಟಿಯಾಗಿ ತಪಾಸಣೆ ನಡೆಸಿ, ವ್ಯತ್ಯಾಸಗಳು ಕಂಡುಬಂದಲ್ಲಿ ಅನ್ವಯಿಸುವ ನಿಯಮಗಳಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು.

ಕೊಬ್ಬರಿ ಮಾರುಕಟ್ಟೆಗಳಲ್ಲಿ ಯುಆರ್‌ಡಿ ವಹಿವಾಟು ಹಾಗೂ ನಿಯಮಬಾಹಿರ ಖರೀದಿ ನಡೆಯದಂತೆ ಪರಿಣಾಮಕಾರಿ ಮೇಲ್ವಿಚಾರಣೆ ನಡೆಸಬೇಕು. ಮಾರುಕಟ್ಟೆಯಲ್ಲಿ ನಡೆಯುವ ಪ್ರತಿಯೊಂದು ವಹಿವಾಟು ಅಧಿಕೃತವಾಗಿ ದಾಖಲಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಭೋಜರಾಜ ತಿಳಿಸಿದರು.

ಟೆಂಡರ್ ವ್ಯವಸ್ಥೆ ಜಾರಿಯಾಗುವುದರ ಜೊತೆಗೆ ಬಿಲ್ಲಿಂಗ್‌ನಲ್ಲೂ ಸಂಪೂರ್ಣ ಪಾರದರ್ಶಕತೆ ಇರಬೇಕು. ಅಂಡರ್ ಬಿಲ್ಲಿಂಗ್ ತಡೆಗಟ್ಟಲು ಎಪಿಎಂಸಿ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಜಂಟಿಯಾಗಿ ಬಿಲ್‌ಗಳನ್ನು ಪರಿಶೀಲಿಸುವ ವ್ಯವಸ್ಥೆ ಅಗತ್ಯ. ರೈತರ ಉತ್ಪನ್ನದ ವಹಿವಾಟಿನಲ್ಲಿ ಯಾವುದೇ ಹಂತದಲ್ಲೂ ಪಾರದರ್ಶಕತೆಯ ಕೊರತೆ ಇರಬಾರದು ಎಂದು ಭೋಜರಾಜ ಹೇಳಿದರು.ತಿಪಟೂರು ಮಾದರಿ ಟೆಂಡರ್ ವ್ಯವಸ್ಥೆ, ಅಂಡರ್ ಬಿಲ್ಲಿಂಗ್ ನಿಯಂತ್ರಣ, ಜಂಟಿ ಬಿಲ್ ಪರಿಶೀಲನೆ, ಯುಆರ್‌ಡಿ ವಹಿವಾಟಿನ ನಿಯಂತ್ರಣ ಹಾಗೂ ಇತರ ಮಾರುಕಟ್ಟೆ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸದೃಢ ಫೌಂಡೇಶನ್ ವತಿಯಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯಪುರ ಶಾಸಕ ಯತ್ನಾಳ್ ವಿರುದ್ಧ ದಾವಣಗೆರೆ ಕಾಂಗ್ರೆಸ್ ದೂರು
ಶಿಥಿಲ, ಹಳೇ ಪಶು ವೈದ್ಯಕೀಯ ಆಸ್ಪತ್ರೆಗಳ ಪಟ್ಟಿ ನೀಡಿ: ಶಾಂತನಗೌಡ