ಕಾಡುಗೊಲ್ಲರ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ । ಡಿಸಿಗೆ ಮನವಿ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಕೊಡುಗೊಲ್ಲರನ್ನು ಪರಿಶಿಷ್ಟ ಪಂಗಡ ಜಾತಿ ಪಟ್ಟಿಗೆ ಸೇರ್ಪಡೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಡುಗೊಲ್ಲರ ಸಂಘದ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಚಿತ್ರದುರ್ಗದಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಚಿತ್ರದುರ್ಗ ಜಿಲ್ಲೆಯಲ್ಲಿರುವ ಬಹುತೇಕ ಗೊಲ್ಲರಹಟ್ಟಿಗಳಲ್ಲಿ ಕಾಡುಗೊಲ್ಲರು ವಾಸವಾಗಿದ್ದು ದನ, ಕುರಿ ಸಾಕಾಣಿಕೆ ಮೂಲ ಕಸುಬಾಗಿದೆ. ಕಾಡಿನಲ್ಲಿ ಊರಿಂದ ಊರಿಗೆ ಮೇವು, ನೀರಿಗಾಗಿ ಅಲೆಯುತ್ತಾ ಜೀವನ ಸಾಗಿಸುತ್ತಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿಯೂ ಕಾಡುಗೊಲ್ಲ ಸಮುದಾಯ ಶೋಷಣೆಗೆ ಒಳಗಾಗಿದೆ ಎಂದು ಧರಣಿ ನಿರತರು ನೋವು ತೋಡಿಕೊಂಡರು.
ಕಾಡುಗೊಲ್ಲರು ಬುಡಕಟ್ಟು ಸಂಸ್ಕೃತಿ ಆರಾಧಕರು. ಹಾಗಾಗಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ ಸಕಲ ಸರ್ಕಾರಿ ಸೌಲಭ್ಯ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ. ಸರ್ಕಾರದ ಆದೇಶದಂತೆ ಜನಾಂಗಕ್ಕೆ ಕಾಡುಗೊಲ್ಲ ಪ್ರಮಾಣ ಪತ್ರ ನೀಡಬೇಕು. ಅಲೆಮಾರಿ, ಅರೆಅಲೆಮಾರಿ ಪಟ್ಟಿಗೆ ಸೇರ್ಪಡೆ ಮಾಡಿ ಹಿಂದಿನ ಸರ್ಕಾರ ರಚಿಸಿರುವ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಪುನಶ್ಚೇತನಗೊಳಿಸಬೇಕೆಂದು ಧರಣಿ ನಿರತರು ಆಗ್ರಹಿಸಿದರು.ಕಾಡುಗೊಲ್ಲರು ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವಾಗುವಂತೆ ಪ್ರವರ್ಗ-1ರ ಅಡಿ ಬರಲು ಸರ್ಕಾರ ಆದೇಶ ಹೊರಡಿಸಬೇಕು. ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿವಾರು ಜನಗಣತಿ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕಾಡುಗೊಲ್ಲರ ಆವಾಸ ಸ್ಥಾನಗಳು ಮೂಲತಹ ಭೌಗೋಳಿಕವಾಗಿ ಇತರೆ ಸಮುದಾಯಗಳಿಂದ ದೂರ ಉಳಿದಿದ್ದು ಗೊಲ್ಲರ ಹಟ್ಟಿಗಳಾಗಿ ಗುರುತಿಸಿಕೊಂಡಿವೆ. ಇದುವರೆಗೂ ಕಂದಾಯ ಗ್ರಾಮಗಳಾಗಿಲ್ಲ. ರಾಜ್ಯ ಸರ್ಕಾರ ಗೊಲ್ಲರಹಟ್ಟಿಗಳನ್ನು ಕೂಡಲೇ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಮೂಲ ಸೌಕರ್ಯ ಒದಗಿಸಬೇಕು. ಸಮುದಾಯದ ಹೆಣ್ಣುಮಕ್ಕಳ ವಿಶಿಷ್ಟ ಆಚರಣೆಗಳು ಮೂಡನಂಬಿಕೆಗಳಿಂದ ಕೂಡಿವೆ. ಮಹಿಳೆಯರ ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕಾಗಿ ಶುಚಿತ್ವ ಮತ್ತು ಶಿಕ್ಷಣದೊಂದಿಗೆ ಅರಿವಿನೆಡೆಗೆ ಕಾರ್ಯಕ್ರಮ ರೂಪಿಸಬೇಕೆಂದು ಧರಣಿನಿರತರು ಆಗ್ರಹಿಸಿದರು.ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ್, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಲಿಂಗಪ್ಪ, ತಾಪಂ ಮಾಜಿ ಅಧ್ಯಕ್ಷ ಆನಂದ್, ಶಿವಣ್ಣ, ಚಿತ್ತಯ್ಯ, ಪ್ರಕಾಶ್, ರೇವಣಸಿದ್ದಪ್ಪ, ಜಿ.ಸಿ.ರಂಗಸ್ವಾಮಿ, ಸಂತೋಷ್, ಅರುಣ್, ಜಯಣ್ಣ, ತಿಮ್ಮಣ್ಣ, ಕೃಷ್ಣಪ್ಪ, ಶಿವರಾಜ್, ವೀರಣ್ಣ, ಮಂಜುನಾಥ್, ಕಾಟಪ್ಪ, ವೀರಭದ್ರಪ್ಪ ಧರಣಿ ನೇತೃತ್ವ ವಹಿಸಿದ್ದರು.