- ಜಿಲ್ಲೆಯಾದ್ಯಂತ ಶಾಸಕರ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತೆಯರು। ನಿವೃತ್ತರಿಗೆ ಇಡುಗಂಟು 3 ಲಕ್ಷ ರು. ಘೋಷಿಸಲು ಆಗ್ರಹ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಂಗನವಾಡಿಗಳಲ್ಲಿ ಹಲವಾರು ದಶಕಗಳಿಂದ ದುಡಿಯುತ್ತಿರುವ ಮಹಿಳಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಗೊಳಿಸಬೇಕು ಎಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಫೆಡರೇಷನ್ ಜಿಲ್ಲೆಯಾದ್ಯಂತ ಬುಧವಾರ ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಯಿತು.ಚಿಕ್ಕಮಗಳೂರಿನ ತಾಲೂಕು ಕಚೇರಿ ಕಟ್ಟಡದಲ್ಲಿರುವ ಶಾಸಕರ ಕಚೇರಿ ಎದುರು ಕಾರ್ಯಕರ್ತೆಯರು ಧರಣಿ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ಜಿಲ್ಲಾಧ್ಯಕ್ಷೆ ಗ್ರೇಟ್ಟ ಫರ್ನಾಂಡೀಸ್, ಕಾರ್ಯಕರ್ತೆಯರ ಬೇಡಿಕೆಗಳನ್ನು ನಿಗಧಿತ ಸಮಯದೊಳಗೆ ಈಡೇರಿಸದಿದ್ದಲ್ಲಿ ಅಂಗನವಾಡಿ ಕೇಂದ್ರಗಳನ್ನು ಜಿಲ್ಲೆಯಾದ್ಯಂತ ವಾರಗಟ್ಟಲೇ ಬಂದ್ ಮಾಡಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವಧನ ಹೆಚ್ಚಿಸುವ ಆರನೇ ಗ್ಯಾರಂಟಿಯನ್ನು ಪ್ರಿಯಾಂಕಾ ಗಾಂಧಿ ರ್‍ಯಾಲಿ ವೇಳೆ ಘೋಷಿಸಿದ್ದರು. ಚುನಾವಣಾ ಪ್ರಣಾಳಿಕೆಯಲ್ಲೂ ಪ್ರಸ್ತಾಪಿಸ ಲಾಗಿದ್ದರೂ ಬೇಡಿಕೆ ಈಡೇರಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಬೇಸರ ಮೂಡಿಸಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ಬಜೆಟ್‌ಗೆ ಅನುಮೋದನೆ ಪಡೆಯುವ ಮುನ್ನ ಆರನೇ ಗ್ಯಾರಂಟಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಮತ್ತು ಸಹಾಯಕಿಯರಿಗೆ 10 ಸಾವಿರ ರು. ಗೌರವಧನ ಹೆಚ್ಚಿಸಬೇಕು. ನಿವೃತ್ತರಿಗೆ ಇಡುಗಂಟನ್ನು ಕನಿಷ್ಟ 3 ಲಕ್ಷ ರು.ಗೆ ಘೋಷಿಸಬೇಕು ಎಂದು ಆಗ್ರಹಿಸಿದರು. ಬಹುತೇಕ ಮಹಿಳಾ ಕಾರ್ಯಕರ್ತೆಯರು ಮಾಸಿಕ ಸಂಬಳದಲ್ಲಿ ಇಡೀ ಕುಟುಂಬ ನಿರ್ವಹಿಸಬೇಕಾಗಿದೆ. ಮಕ್ಕಳ ವಿದ್ಯಾಭ್ಯಾಸ, ಬಾಡಿಗೆ ಹಾಗೂ ದಿನೋಪಯೋಗಿ ವಸ್ತುಗಳನ್ನು ಖರೀದಿಸಬೇಕಾಗಿದೆ.ಈ ವೃತ್ತಿ ಯಲ್ಲಿರುವ ಕೆಲವು ವಿಧವೆಯರು ಮಾಸಿಕ ಸಂಬಳವನ್ನು ಅವಲಂಬಿಸಿದ್ದಾರೆ. ಗೌರವಧನ ಹೆಚ್ಚಳಗೊಳಿಸಿದರೆ ಬಹಳಷ್ಟು ಅನುಕೂಲ ವಾಗಲಿದೆ ಎಂದರು. ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಪುಷ್ಪ ಬಸವರಾಜು ಮಾತನಾಡಿ, ಅಂಗನವಾಡಿ ಸಿಬ್ಬಂದಿ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ, ಬಜೆಟ್‌ನಲ್ಲೂ ಗೌರವಧನ ಹೆಚ್ಚಿಸುವ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ರಾಜ್ಯಾ ದ್ಯಂತ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಕಾರ್ಯಕರ್ತರಿಗೆ ತೀವ್ರ ನಿರಾಸೆ ಮಾಡಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣಾ ಕೆಲಸಕ್ಕೂ ಮಹಿಳಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಬಾರದು ಎಂದು ಹೇಳಿದರು. ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ನಿರ್ವಹಣೆಗೆ ಸಾದಿಲ್ವಾರು ರೂಪದಲ್ಲಿ ತಿಂಗಳಿಗೆ 83 ರು.ಗಳನ್ನು ನೀಡುತ್ತಿದ್ದು ಅದನ್ನು ಕೂಡ ತಡೆ ಹಿಡಿಯಲಾಗಿದೆ. ಪೋಷಣ್ ಅಭಿಯಾನದಡಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ನಡೆಸಲು ಹಣಕಾಸಿನ ವ್ಯವಸ್ಥೆಯಿಲ್ಲದಂತಾಗಿದೆ ಎಂದು ತಿಳಿಸಿದರು. ಶಾಸಕರ ಕಚೇರಿ ಮುಂಭಾಗದಲ್ಲಿ ನೂರಾರು ಮಹಿಳಾ ಕಾರ್ಯಕರ್ತೆಯರು ಚಳುವಳಿ ನಡೆಸುವ ಮೂಲಕ ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಸರ್ಕಾರದ ಗಮನ ಸೆಳೆಯುವ ಮುಖಾಂತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸ ಬೇಕು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಎಐಟಿಯುಸಿ ಗೌರವಾಧ್ಯಕ್ಷ ಗುಣಶೇಖರ್, ತಾಲೂಕು ಅಧ್ಯಕ್ಷೆ ಶೈಲಾ ಬಸವರಾಜು, ಕಾರ್ಯದರ್ಶಿ ವಸಂತ ಧರ್ಮೇಗೌಡ, ಸದಸ್ಯರಾದ ಕುಶಲ, ಗೌರಮ್ಮ, ಧನಲಕ್ಷ್ಮೀ, ಅನುಸೂಯ, ಸಾವಿತ್ರಿ, ಗಿರಿಜಾ, ಅರುಣಾಕ್ಷಿ, ಸಾವಿತ್ರಿ, ಗೀತಾ, ಜಯಶ್ರೀ, ಸುಕನ್ಯ ಹಾಗೂ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. 21 ಕೆಸಿಕೆಎಂ 1ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಚಿಕ್ಕಮಗಳೂರು ತಾಲೂಕು ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬುಧವಾರ ಪ್ರತಿಭಟನೆ ನಡೆಸಿದರು.