ಬಳ್ಳಾರಿ: ಗ್ರಾಪಂ ಸದಸ್ಯರಿಗೆ ಗೌರವಧನ ಹೆಚ್ಚಳ ಮಾಡಬೇಕು. ಗ್ರಾಪಂ ಅಧ್ಯಕ್ಷರಿಗೆ ಚೆಕ್ ಪವರ್ ಮರಳಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ "ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ " ವತಿಯಿಂದ ಜ. 8ರಂದು ಬೆಂಗಳೂರು ಚಲೋ ಹೋರಾಟ ಹಮ್ಮಿಕೊಂಡಿದ್ದು, ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಗ್ರಾಪಂ ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷೆ ಹಾಗೂ ಶ್ರೀಧರಗಡ್ಡೆ ಗ್ರಾಪಂ ಸದಸ್ಯೆ ಎಚ್.ಎಂ. ಹೇಮಾ ಮಂಜುನಾಥ್ ತಿಳಿಸಿದರು.
ಕೇರಳ ರಾಜ್ಯದ ಮಾದರಿಯಲ್ಲಿ ಪಂಚಾಯಿತಿ ಅಧ್ಯಕ್ಷರಿಗೆ ₹15 ಸಾವಿರ, ಉಪಾಧ್ಯಕ್ಷರಿಗೆ ₹12 ಸಾವಿರ ಹಾಗೂ ಸದಸ್ಯರಿಗೆ ₹10 ಸಾವಿರ ಮಾಸಿಕ ಗೌರವಧನ ನೀಡಬೇಕು. ಸದಸ್ಯರಿಗೆ ಸಭಾಭತ್ಯೆ ₹500 ಹೆಚ್ಚಿಸಿ ಆದೇಶ ಹೊರಡಿಸಬೇಕು. ಸದಸ್ಯರ ಅವಧಿ ಬಳಿಕ ಶಾಸಕರಿಗೆ ಸಿಗುವಂತೆ ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಸದಸ್ಯರಿಗೆ ಉಚಿತ ವಿಮೆ ನೀಡಬೇಕು. ಸ್ಥಳೀಯ ಗ್ರಾಮ ಆಡಳಿತದಲ್ಲಿ ಆರ್‌ಡಿಪಿಆರ್ ಅಧಿಕಾರಿಗಳ, ಜಿಪಂ ಸಿಇಒ, ತಾಪಂ ಇಒ, ಅವರ ಹಸ್ತಕ್ಷೇಪ ನಿಲ್ಲಿಸಬೇಕು. ಪಂಚಾಯಿತಿ ಸದಸ್ಯರ ಗೌರವಧನ ನೇರವಾಗಿ ಅವರ ಖಾತೆಗಳಿಗೆ ಜಮೆ ಮಾಡಬೇಕು ಎಂಬುದು ಸೇರಿದಂತೆ 15 ಬೇಡಿಕೆಗಳನ್ನಿಟ್ಟುಕೊಂಡು ಚಳವಳಿಗೆ ಕರೆ ನೀಡಲಾಗಿದೆ ಎಂದರು.
ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಏಳುಬೆಂಚೆ ಗ್ರಾಪಂ ಸದಸ್ಯ ಎ. ಶ್ರೀಧರ್ ಏಳುಬೆಂಚೆ, ಸಂಡೂರು ತಾಲೂಕು ಅಧ್ಯಕ್ಷ ಹಾಗೂ ಕೃಷ್ಣನಗರ ಕ್ಯಾಂಪ್‌ನ ಗ್ರಾಪಂ ಸದಸ್ಯ ರೆಡ್ಡಿ ಬಾಬು ಸುದ್ದಿಗೋಷ್ಠಿಯಲ್ಲಿದ್ದರು.