ರೈತರು ಮತ್ತು ಜೆಎಸ್‌ಡಬ್ಲು ಸ್ಟೀಲ್ ಕಂಪನಿ ಜೊತೆಗೆ ಒಪ್ಪಂದವಾಗಿದೆ. ಆದರೆ, ಈ ಒಪ್ಪಂದ ಸಂಪೂರ್ಣವಾಗಿ ಉಲ್ಲಂಘನೆಯಾಗಿದೆ.
ಸಂಡೂರು: ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ತಹಶೀಲ್ದಾರ್ ಜೆ.ಅನಿಲ್‌ಕುಮಾರ್ ನೇತೃತ್ವದಲ್ಲಿ ನಡೆದ ಅಧಿಕಾರಿಗಳು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರ ಸಭೆಯಲ್ಲಿ ಜೆಎಸ್‌ಡಬ್ಲು ಕೈಗಾರಿಕಾ ಸಮೂಹ ಸೇರಿದಂತೆ ಇತರೆ ಕೈಗಾರಿಕೆ, ಗಣಿ ಮತ್ತು ರಸ್ತೆ ಅಪಘಾತಗಳ ತಡೆ, ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ, ಅವಘಡಗಳಲ್ಲಿ ಮೃತಪಟ್ಟ ಕಾರ್ಮಿಕರಿಗೆ ನೀಡುವ ಪರಿಹಾರ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಎಸ್. ಶಿವಶಂಕರ್ ಮಾತನಾಡಿ, 2005 - 06 ರಲ್ಲಿ ರೈತರು ಮತ್ತು ಜೆಎಸ್‌ಡಬ್ಲು ಸ್ಟೀಲ್ ಕಂಪನಿ ಜೊತೆಗೆ ಒಪ್ಪಂದವಾಗಿದೆ. ಆದರೆ, ಈ ಒಪ್ಪಂದ ಸಂಪೂರ್ಣವಾಗಿ ಉಲ್ಲಂಘನೆಯಾಗಿದೆ. ಕಂಪನಿಗೆ ಭೂಮಿ ನೀಡಿದ ಎಷ್ಟು ರೈತರಿಗೆ ಆಗಿನ ಒಪ್ಪಂದದಂತೆ ಮತ್ತು ಸರೋಜಿನಿ ಮಹಿಷಿ ವರದಿ ಪ್ರಕಾರ ಕೆಲಸ ನೀಡಿದ್ದೀರಿ?1994 ರಲ್ಲಿ ಕಂಪನಿಗೆ ಸರ್ಕಾರ ನೀಡಿದ ಭೂಮಿ ಎಷ್ಟು?, ಈಗಿರುವ ಭೂಮಿ ಎಷ್ಟು? ಕೇಂದ್ರ ಸರ್ಕಾರ, ಲೀಜ್ ಕಂ ಸೇಲ್, ಬ್ರೋಕರ್‌ಗಳ ಮೂಲಕ ಎಷ್ಟು ಜಮೀನು ಪಡೆಯಲಾಗಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಮಾಹಿತಿ ನೀಡುವಂತೆ ಜೆಎಸ್‌ಡಬ್ಲು ಕಂಪನಿಯ ಅಧಿಕಾರಿಗಳನ್ನು ಕೇಳಿದರು.ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಜೆ.ಸತ್ಯಬಾಬು ಮಾತನಾಡಿ, ಕೈಗಾರಿಕೆಗಳಲ್ಲಿ ಕಾರ್ಮಿಕರ ಸುರಕ್ಷತೆ ಕಡೆಗಣಿಸಲಾಗಿದೆ. ಕಾರ್ಮಿಕ ಇಲಾಖೆಯೂ ಕಾರ್ಮಿಕರ ಸುರಕ್ಷತೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಮೇ 9 ರಂದು ಸ್ಟೀಲ್ ಕಾರ್ಖಾನೆಯಲ್ಲಿ ನಡೆದ ಅವಘಡದಲ್ಲಿ ಮೂವರು ಯುವ ನೌಕರರು ಮೃತಪಟ್ಟಿದ್ದಾರೆ. ಅವರಿಗೆ ಎಷ್ಟು ಪರಿಹಾರ ಕೊಟ್ಟಿದ್ದೀರಿ? ಅವಘಡಕ್ಕೆ ಕಾರಣರಾದವರ ವಿರುದ್ಧ ಏನು ಕ್ರಮಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದರು.
ಜೆಎಸ್‌ಡಬ್ಲು ಕಂಪನಿಯ ಜನರಲ್ ಮ್ಯಾನೇಜರ್ ಶಶಿಕುಮಾರ್ ಮಾತನಾಡಿ, ಮೇ 9 ರಂದು ನಡೆದ ಅವಘಡದಲ್ಲಿ ಮೃತಪಟ್ಟ ನೌಕರರಿಗೆ ಕಂಪನಿಯ ನಿಯಮಾನುಸಾರ ಪರಿಹಾರ ನೀಡಲಾಗುವುದು. ಈ ಕುರಿತು ಮೃತರ ಕುಟುಂಬದವರಿಂದ ಕೆಲ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಅವಘಡದ ಕುರಿತು ಮೇಲಧಿಕಾರಿಗಳಿಂದ ವಿಚಾರಣೆ ನಡೆಯುತ್ತಿದೆ. ಕಾರ್ಖಾನೆಗೆ ಭೂಮಿ ನೀಡಿದ ರೈತ ಕುಟುಂಬದವರಿಗೆ ಉದ್ಯೋಗ ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು.
ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಮಾತನಾಡಿ, ಮೇ 9 ರಂದು ನಡೆದ ಅವಘಡದಲ್ಲಿ ಮೃತಪಟ್ಟ ನೌಕರರ ಕುಟುಂಬದವರಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು. ಇಂತಹ ಅವಘಡಗಳು ಇನ್ನು ಮುಂದೆ ನಡೆಯದಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಕಾರ್ಮಿಕ ಸಂಘಟನೆಗಳು ಎತ್ತಿದ ಹಲವು ಪ್ರಶ್ನೆಗಳಿಗೆ ಕಂಪನಿಯ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ದೊರೆಯದ ಕಾರಣ ಜೂ.೬ರಂದು ಪುನಃ ಸಭೆ ಸೇರಿ ಚರ್ಚಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕ ಆರ್.ವರುಣ್, ಕಾರ್ಮಿಕ ನಿರೀಕ್ಷಕ ಮಂಜುನಾಥ ತೊಂಡಿಹಾಳ, ಬಳ್ಳಾರಿಯ ಕಾರ್ಮಿಕ ಅಧಿಕಾರಿ ಅಲ್ತಾಫ್ ಅಹಮದ್, ಸಿಐಟಿಯು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ, ಗಿರೀಶ್ ಎನ್. ಕಬಾಡಿ, ಜೆಎಸ್‌ಡಬ್ಲು ಸ್ಟೀಲ್ ಕಂಪನಿಯ ಎಜಿಎಂ ಕೆ.ಎನ್ ಸವಣೂರ್, ಪಿಆರ್‌ಒ ಬಿ. ಸುರೇಶ್, ಎಲ್.ಎಸ್. ವೀರೇಶ್, ಎ.ಸ್ವಾಮಿ, ಎಸ್.ಕಾಲುಬಾ, ಎಚ್.ದುರುಗಮ್ಮ, ಸೋಮಪ್ಪ, ಎಂ.ತಿಪ್ಪೇಸ್ವಾಮಿ, ಎನ್.ಶಂಕ್ರಣ್ಣ ಉಪಸ್ಥಿತರಿದ್ದರು.