ಹರಪನಹಳ್ಳಿಯಲ್ಲಿ ವಿದ್ಯುತ್‌ ಚಿತಾಗಾರ ಸ್ಥಾಪನೆಗೆ ಒತ್ತಾಯ

KannadaprabhaNewsNetwork | Published : Dec 24, 2024 12:48 AM

ಸಾರಾಂಶ

ಹೊರವಲಯದಲ್ಲಿ ವಿದ್ಯುತ್ ಚಿತಾಗಾರ ಅಳವಡಿಸಲು ಮುಂಬರುವ ಬಜೆಟ್‌ ನಲ್ಲಿ ಅವಕಾಶ ಮಾಡಿಕೊಳ್ಳಿ.

ಹರಪನಹಳ್ಳಿ: ಪಟ್ಟಣದ ಹೊರವಲಯದಲ್ಲಿ ವಿದ್ಯುತ್ ಚಿತಾಗಾರ ಅಳವಡಿಸಲು ಮುಂಬರುವ ಬಜೆಟ್‌ ನಲ್ಲಿ ಅವಕಾಶ ಮಾಡಿಕೊಳ್ಳಿ ಎಂದು ಕಾಂಗ್ರೆಸ್‌ ಯುವ ಮುಖಂಡ ಶೇಕ್ಷಾವಲಿ ಸೋಮವಾರ ನಡೆದ ಪುರಸಭಾ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಸಲಹೆ ನೀಡಿದರು.ಪಟ್ಟಣದಲ್ಲಿ ಅಂತ್ಯಸಂಸ್ಕಾರ ಮಾಡಲು ವಿದ್ಯುತ್ ಚಿತಾಗಾರದ ಅವಶ್ಯಕತೆ ಇದೆ ಎಂದು ಅವರು, ಮನವರಿಕೆ ಮಾಡಿದರು. ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಬಜೆಟ್‌ ನಲ್ಲಿ ಅವಕಾಶ ಮಾಡಿಕೊಳ್ಳಲು ಚಿಂತಿಸುವುದಾಗಿ ತಿಳಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ಮಂಜುನಾಥ ಇಜಂತಕರ್‌ ಬಹಳಷ್ಟು ಸ್ಮಶಾನಗಳಿಗೆ ಕಂಪೌಂಡ್‌, ಕುಡಿಯುವ ನೀರು ವ್ಯವಸ್ಥೆ ಇಲ್ಲ. ಅವುಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಪರ್ತಕರ್ತರ ಸಂಘದ ಅಧ್ಯಕ್ಷ ಚಂದ್ರಪ್ಪ ತಳವಾರ ಕೊಟ್ಟೂರು ವೃತ್ತದಿಂದ ಸ್ವಾಗತ ಕಮಾನ್ ವರೆಗೆ ಕೊಟ್ಟೂರು ರಸ್ತೆಯಲ್ಲಿ ಡಿವೈಡರ್‌ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಎಂದು ಸಲಹೆ ನೀಡಿದರು.

ನಾಮನಿರ್ದೇಶಿತ ಸದಸ್ಯ ಹೇಮಣ್ಣ ಮೋರಗೇರಿ ಮಾತನಾಡಿ, ಪಟ್ಟಣದಲ್ಲಿನ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಿ ಎಂದರೆ ಗುಡೇಕಟ್ಟಿಕೇರಿ ಡಿ.ಅಂಜಿನಪ್ಪನವರು ಉಪ್ಪಾರಗೇರಿ, ಗುಡೇಕಟ್ಟಿಕೇರಿ ಮುಂತಾದ ಓಣಿ ಜನರಿಗೆ ಅಂತ್ಯಕ್ರಿಯೆ ಮಾಡಲು ಸ್ಮಶಾನ ಇಲ್ಲ. ಸ್ಮಶಾನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಮೀನು ಮಾರುಕಟ್ಟೆ ಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕುರಿತು ಮುಂಬರುವ ಬಜೆಟ್‌ ನಲ್ಲಿ ಅವಕಾಶ ಮಾಡಿಕೊಳ್ಳಲು ಅನೇಕರು ಸಲಹೆ ಸೂಚನೆ ನೀಡಿದರು.

ಪುರಸಭೆ ಅಧ್ಯಕ್ಷೆ ಎಂ.ಫಾತಿಮಾಬಿ, ಉಪಾಧ್ಯಕ್ಷ ಎಚ್‌.ಕೊಟ್ರೇಶ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ, ಸದಸ್ಯರಾದ ರೊಕ್ಕಪ್ಪ, ಗೊಂಗಡಿ ನಾಗರಾಜ, ಶೋಭಾ, ಮಂಜುನಾಥ ಇಜಂತಕರ್, ಭೀಮವ್ವ, ಜೋಗಿನ ಭರತೇಶ, ಸುಮಾ ಜಗದೀಶ, ಹೇಮಣ್ಣ ಮೋರಗೇರಿ, ಗುಡಿನಾಗರಾಜ, ಚಿಕ್ಕೇರಿ ಬಸಪ್ಪ, ದಂಡೆಪ್ಪ ಪಾಲ್ಗೊಂಡಿದ್ದರು.

ಹರಪನಹಳ್ಳಿ ಪುರಸಭೆಯಲ್ಲಿ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಸದಸ್ಯರು, ಸಾರ್ವಜನಿಕರು ಸಲಹೆ ಸೂಚನೆ ನೀಡಿದರು.

Share this article