-ಸಚಿವ ಈಶ್ವರ ಖಂಡ್ರೆ ಹೇಳಿಕೆ । ಭೀಮಣ್ಣ ಖಂಡ್ರೆಗೆ ಮರಣೋತ್ತರ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಪ್ರದಾನ । ತಂದೆಗೆ ಸಂದ ಪ್ರಶಸ್ತಿ ಸ್ವೀಕರಿಸಿದ ಈಶ್ವರ್
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಾಧಕರನ್ನು ಮಾತ್ರವೇ ಸಮಾಜ ಸ್ಮರಿಸುತ್ತದೆ. ಹೀಗಾಗಿ ಇಂದಿನ ಯುವಜನರು ಸಾಧನೆಯ ಉತ್ತುಂಗಕ್ಕೇರಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.ನಗರದ ವೀರಶೈವ ಸಾಂಸ್ಕೃತಿಕ ಭವನದಲ್ಲಿ ವೀರಶೈವ ಲಿಂಗಾಯತ ಮಹಾಸಭಾ, ಶಿವಮೊಗ್ಗ ಜಿಲ್ಲಾ ಘಟಕದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಹಾಗೂ ನಗದು ಬಹುಮಾನ ಪ್ರದಾನ ಮಾಡಿ ಅವರು ಮಾತನಾಡಿ, ನಮ್ಮಲ್ಲಿ ಹಲವರಿಗೆ ತಮ್ಮ ತಾತನ ಹೆಸರು ಮಾತ್ರ ತಿಳಿದಿದೆ.
ಅನ್ನ, ಅಕ್ಷರ ಮತ್ತು ಆಶ್ರಯ ಎಂಬ ತ್ರಿವಿಧ ದಾಸೋಹದ ಮೂಲಕ ಎಲ್ಲ, ಜಾತಿ, ಧರ್ಮದವರಿಗೂ ಗುಣಮಟ್ಟದ ಶಿಕ್ಷಣ ನೀಡಿದ ಕೀರ್ತಿ ನಮ್ಮ ಸಮಾಜದ ಮಠ ಮಾನ್ಯಗಳಿಗೆ ಸಲ್ಲುತ್ತದೆ. ನಾವು ನಮ್ಮ ಪೂರ್ವಜರ ಹಿರಿಮೆ ಕೊಂಡಾಡಿದರೆ ಸಾಲದು, ವರ್ತಮಾನದ ಜೀವಂತಿಕೆಯೊಂದಿಗೆ ಹೊರಹೊಮ್ಮಬೇಕು ಎಂದರು.
ಇಂದು ನಾವು ಆಧುನಿಕ ಸಮಾಜದಲ್ಲಿದ್ದೇವೆ. ಕೃತಕ ಬುದ್ಧಿಮತ್ತೆ ಕಾಲಘಟ್ಟದಲ್ಲಿದ್ದೇವೆ. ಮನುಷ್ಯನೇ ನಿರ್ಮಿಸಿದ ಈ ತಂತ್ರಜ್ಞಾನ ಜನರ ಉದ್ಯೋಗವನ್ನೇ ಕಸಿಯುತ್ತಿದೆ. ಈ ನಿಟ್ಟಿನಲ್ಲಿ ಯುವಜನರು ವಿದ್ಯೆಯ ಜೊತೆಗೆ ಬುದ್ಧಿವಂತಿಕೆ, ಕೌಶಲ ಬೆಳೆಸಿಕೊಳ್ಳಬೇಕು ಎಂದರು.
ತಾವು 2015-16ರಲ್ಲಿ ಸಚಿವನಾಗಿದ್ದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿಗೆ ನಿಯೋಗ ಹೋಗಿ ಮನವಿ ಮಾಡಿದಾಗ ಅವರು ಅತ್ಯಾಧುನಿಕ ಅನುಭವ ಮಂಟಪ ನಿರ್ಮಿಸಲು ಅನುಮತಿ ನೀಡಿದ್ದರು.
770 ಅಮರ ಗಣಂಗಳ ಸ್ಮರಣಾರ್ಥ 770 ಕಂಬಗಳ ಮೇಲೆ ಅನುಭವಮಂಟಪ ಕಟ್ಟಿದ್ದು, ಎಲ್ಲ ಕಂಬದಲ್ಲಿ ವಚನಗಳನ್ನು ಕೆತ್ತಿಸಲಾಗಿದೆ. ವೈಜ್ಞಾನಿಕವಾಗಿ ಇಷ್ಟಲಿಂಗಪೂಜೆಯ ಪರಿಕಲ್ಪನೆಯನ್ನೂ ಸೇರಿಸಲಾಗಿದೆ. ಕೆಳದಿ ಕರ್ನಾಟಕ ಎಂದು ಮಲೆನಾಡಿಗೆ ನಾಮಕರಣ ಮಾಡಬೇಕು ಎಂಬ ಸಮಾಜದ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ವೀರಶೈವ ಲಿಂಗಾಯತ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರೇ ಸ್ವಹಸ್ತಾಕ್ಷರದಲ್ಲಿ ಬರೆದುಕೊಟ್ಟಿದ್ದಾರೆ. ನಮ್ಮ ಸಮಾಜಕ್ಕೆ ಬಸವಾದಿ ಪ್ರಮಥರ, ರೇಣುಕಾದಿ ಆಚಾರ್ಯರ ಹಾಗೂ ಗುರುವಿರಕ್ತರ ಆಶೀರ್ವಾದವಿದ್ದು, ನಮ್ಮ ಸಮಾಜವನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭ ದೇಶದಲ್ಲಿ ‘ಬಲಿದಾನ್ ಬ್ಯಾಡ್ಜ್’ ಪ್ರಶಸ್ತಿ ಪಡೆದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೇಜರ್ ಡಾ. ದೀಕ್ಷಾ ಸಿ. ಮುದದೇವಣ್ಣನವರ್ ಅವರಿಗೆ 2025–26ನೇ ಸಾಲಿನ ಕೆಳದಿ ರಾಣಿ ಚನ್ನಮ್ಮ ಪ್ರಥಮ ಪ್ರಶಸ್ತಿಯನ್ನು ಸಂಸದ ಬಿ.ವೈ.ರಾಘವೇಂದ್ರ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಡಾ. ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಸಂಸದ ಬಿ.ವೈ. ರಾಘವೇಂದ್ರ ಪಾಲ್ಗೊಂಡಿದ್ದರು.....ಬಾಕ್ಸ್...
ಡಾ. ಭೀಮಣ್ಣ ಖಂಡ್ರೆಗೆ ಕರ್ನಾಟಕ ರತ್ನ ಪ್ರಶಸ್ತಿಗೆ ನಿರ್ಣಯಶಿವಮೊಗ್ಗ: ಸ್ವಾತಂತ್ರ್ಯ ಸೇನಾನಿ, ಏಕೀಕರಣದ ಹೋರಾಟಗಾರ, ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಜಿಲ್ಲಾ ಘಟಕ ನಿರ್ಣಯ ಕೈಗೊಂಡಿದೆ.
ವೀರಶೈವ ಸಾಂಸ್ಕೃತಿಕ ಭವನದಲ್ಲಿ ನಡೆದ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ನಿರ್ಣಯವನ್ನು ವೀರಶೈವ ಲಿಂಗಾಯತ ಮಹಾಸಭಾ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಎನ್ ಸಜ್ಜನ್ ಮಂಡಿಸಿದರು.ಸಭೆ ಕರತಾಡನದ ಮೂಲಕ ಅನುಮೋದಿಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ತಾವು ನೋವುಂಡು, ಸಮಾಜಕ್ಕೆ ಒಳಿತನ್ನೇ ಮಾಡಿದ ಭೀಮಣ್ಣ ಖಂಡ್ರೆ ಅವರಿಗೆ ಕರ್ನಾಟಕ ರತ್ನ ಗೌರವ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಲಾಯಿತು.
ಭೀಮಣ್ಣ ಖಂಡ್ರೆ ಅವರು, ವಕೀಲರಾಗಿ ನೊಂದ ಸಾವಿರಾರು ಬಡ ಜನರಿಗೆ ನ್ಯಾಯ ಕೊಡಿಸಿದ್ದರು. ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಹೈದ್ರಾಬಾದ್ ಕರ್ನಾಟಕದಲ್ಲಿ ರಜಾಕಾರರ ದಬ್ಬಾಳಿಕೆಯ ನಡುವೆಯೂ ಕನ್ನಡ ಜೀವಂತವಾಗಿ ಉಳಿಯಲು ಶ್ರಮಿಸಿದ್ದರು. ಜೊತೆಗೆ ಬಸವ ಕಲ್ಯಾಣದಲ್ಲಿ ಈಗಿರುವ ಆಧುನಿಕ ಅನುಭವ ಮಂಟಪ ನಿರ್ಮಾಣದಲ್ಲಿ ಭಾಲ್ಕಿ ಹಿರೇಮಠದ ಚನ್ನಬಸವ ಪಟ್ಟದ್ದೇವರೊಂದಿಗೆ ಹೆಗಲಿಗೆ ಹೆಗಲುಕೊಟ್ಟು ಶ್ರಮಿಸಿದ್ದರು. ಇಂತಹ ಕನ್ನಡ ಕಟ್ಟಾಳುವಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಬೇಕು ಎಂದು ಸಭಾ ಒತ್ತಾಯಿಸಿದೆ.--------------
ಪೊಟೋ: 25ಎಸ್ಎಂಜಿಕೆಪಿ03 ................ಶಿವಮೊಗ್ಗ ನಗರದ ವೀರಶೈವ ಸಾಂಸ್ಕೃತಿಕ ಭವನದಲ್ಲಿ ನಡೆದ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೋಕನಾಯಕ ಭೀಮಣ್ಣ ಖಂಡ್ರೆ ಅವರಿಗೆ ಮರಣೋತ್ತರವಾಗಿ 2023-24ನೇ ಸಾಲಿನ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ನೀಡಲಾಯಿತು. ಸಚಿವ ಈಶ್ವರ ಬಿ ಖಂಡ್ರೆ ಅವರು ತಮ್ಮ ತಂದೆಗೆ ಸಂದ ಈ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿದರು.
------------------ಪೊಟೋ: 25ಎಸ್ಎಂಜಿಕೆಪಿ04
ಶಿವಮೊಗ್ಗ ನಗರದ ವೀರಶೈವ ಸಾಂಸ್ಕೃತಿಕ ಭವನದಲ್ಲಿ ವೀ.ಲಿಂ. ಮಹಾಸಭಾ, ಶಿವಮೊಗ್ಗ ಜಿಲ್ಲಾ ಘಟಕದಲ್ಲಿ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ದೇಶದಲ್ಲಿ ‘ಬಲಿದಾನ್ ಬ್ಯಾಡ್ಜ್’ ಪ್ರಶಸ್ತಿ ಪಡೆದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೇಜರ್ ಡಾ. ದೀಕ್ಷಾ ಸಿ. ಮುದದೇವಣ್ಣನವರ್ ಅವರಿಗೆ ಕೆಳದಿ ರಾಣಿ ಚನ್ನಮ್ಮ ಪ್ರಥಮ ಪ್ರಶಸ್ತಿ ಪ್ರದಾನ ಮಾಡಲಾಯಿತು.