ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲೆಯಲ್ಲಿ ಕೇವಲ 538 ಕೆರೆಗಳಿದ್ದು, ಕೆರೆಗಳ ಸಂಖ್ಯೆ ಹೆಚ್ಚಿಸುವ ಮೂಲಕ ಬೇಸಿಗೆಯಲ್ಲಿ ನೀರನ್ನು ಕ್ರೋಢೀಕರಿಸಲು ಪ್ರತ್ಯೇಕ ಅನುದಾನ ಬಿಡುಗಡೆ, ಪರಿಸರ ಸಂರಕ್ಷಣೆಗೆ ವಿಶೇಷ ಗಮನ ಹರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನ ಸಮಿತಿ ಒಕ್ಕೂಟದಿಂದ ಮನವಿ ಅರ್ಪಿಸಲಾಯಿತು.ನಗರದ ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ ಸಭಾಂಗಣದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ರನ್ನು ಭೇಟಿ ಮಾಡಿದ ಒಕ್ಕೂಟದ ಮುಖಂಡ ರವಿಕುಮಾರ ಬಲ್ಲೂರು ಇತರರು ಮನವಿ ಅರ್ಪಿಸಿ, ಸಂಬಂಧಿಸಿದ ಮಂತ್ರಿಗಳು, ಸಂಸದರು ಎಲ್ಲಾ ಇಲಾಖೆಗಳು ಪತ್ರದನ್ವಯ ಜಿಲ್ಲಾಧಿಕಾರಿಗಳು 14 ಸಭೆ ಮಾಡಿ, ಸುತ್ತೋಲೆ ಹೊರಡಿಸಿದ್ದಾರೆ. ಪ್ರಗತಿಯತ್ತ ಸಾಗಿರುವ ಜಿಲ್ಲೆಗೆ ಪ್ರಥಮಾದ್ಯತೆ ಮೇಲೆ ಸ್ಪಂದಿಸಲು ಮನವಿ ಮಾಡಲಾಯಿತು.
ಬೃಹತ್ ನೀರಾವರಿ ಇಲಾಖೆಯಿಂದ ಭದ್ರಾ ನಾಲೆ ವ್ಯಾಪ್ತಿಯು ದಾವಣಗೆರೆ ವಿಭಾಗದಿಂದ 9 ಕೆರೆ, ಉಪ ವಿಭಾಗದ 6 ಕೆರೆ, ಉಪ ವಿಭಾಗ ತ್ಯಾವಣಿಗೆ 8 ಕೆರೆ, ಉಪ ವಿಭಾಗ ಹರಿಹರ 2 ಕೆರೆ ಒಟ್ಟು 25 ಕೆರೆಗಳಿಗೆ 2053.00 ಲಕ್ಷ ರು. ಕೆರೆ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಸಭೆಯಲ್ಲಿ ಮಂಡಿಸಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬೃಹತ್ ನೀರಾವರಿ ಇಲಾಖೆಗೆ 500 ಕೋಟಿ ರು., ಸಣ್ಣ ನೀರಾವರಿ ಇಲಾಖೆಗೆ 500 ಕೋಟಿ ರು. ಸೇರಿದಂತೆ ಒಟ್ಟು 1 ಸಾವಿರ ಕೋಟಿ ರು. ನೀಡುವಂತೆ ಪತ್ರ ಬರೆದಿದ್ದು ಎಲ್ಲಾ ಜಿಲ್ಲೆಗಳಿಗೆ ಕೆರೆ ಹೂಳೆತ್ತಲು 1 ಸಾವಿರ ಕೋಟಿ ರು. ಅನುದಾನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಸಣ್ಣ ನೀರಾವರಿ ಇಲಾಖೆಯಿಂದ ಜ.10ರಂದು 12 ಕೆರೆಗಳ ದುರಸ್ತಿಗೆ ಸಭೆಯಲ್ಲಿ ಒಪ್ಪಿಕೊಂಡಿದ್ದರೂ, ಹಣದ ಕೊರತೆ ಇದೆ. ಜಿಪಂ ಈಗಾಗಲೇ ಜಿಲ್ಲೆಯ 101 ಕೆರೆ ಹೂಳು ತೆಗೆಯುವ ಕಾರ್ಯವನ್ನು 2023-24ರಲ್ಲಿ ಪೂರ್ಣಗೊಳಿಸಿದೆ. ಜಿಪಂನಿಂದ ಬಾಕಿ ಉಳಿದ ಕೆರೆಗಳ ಹೂಳೆತ್ತಿಸಬೇಕು. ಸಣ್ಣ ಮತ್ತು ದೊಡ್ಡ ಕೆರೆಗಳು ಸೇರಿ 697 ಕೆರೆ ಹೂಳು ತೆಗೆಯುವ ಪ್ರಸ್ತಾವನೆಯನ್ನು 2025-26ರಲ್ಲಿ ಸಲ್ಲಿಸಿದ್ದು, ಇದಕ್ಕೆ ತುರ್ತಾಗಿ ಹಣ ಬಿಡುಗಡೆ ಮಾಡಿ, ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಸರ್ಕಾರಿ ಕಟ್ಟಡ, ಸರ್ಕಾರಿ ಸಿಬ್ಬಂದಿ ಗೃಹ, ಸರ್ಕಾರಿ ಸಿಬ್ಬಂದಿ, ಸಾರ್ವಜನಿಕರು ಮಳೆ ನೀರನ್ನು ಸಂಗ್ರಹಿಸಿದರೆ, ನಗರ-ಗ್ರಾಮೀಣ ಪ್ರದೇಶದಲ್ಲಿ ಸುಮಾರು 20 ಟಿಎಂಸಿ ನೀರನ್ನು ಶೇಖರಣೆ ಮಾಡಬಹುದು. ಇದನ್ನು ತಕ್ಷಣ ಸಂಬಂಧಿಸಿದ ಇಲಾಖೆಗಳು ಕಾರ್ಯೋನ್ಮುಖವಾಗಬೇಕು. ಜಿಲ್ಲೆಯ ಎಲ್ಲಾ ಕೆರೆಗಳ ಹೂಳು ಮಣ್ಣನ್ನು ರೈತರಿಗೆ ನೀಡಿದರೆ ಆರೋಗ್ಯಕರ ಆಹಾರ ಬೆಳೆದು, ಸಾರ್ವಜನಿಕರಿಗೆ ನೀಡಬಹುದು ಎಂದು ಹೇಳಿದೆ.ಬೇಸಿಗೆಯಲ್ಲಿ ನೀರಿನ ಹಾಹಾಕಾರ ಹೆಚ್ಚಾಗುವ ಪ್ರಯುಕ್ತ ದಾವಣಗೆರೆ ಜಿಲ್ಲೆಗೆ 1000 ಕೋಟಿ ರು.ವನ್ನು ಕೆರೆಗಳ ದುರಸ್ತಿಗೆ ಅನುದಾನ ನೀಡಲು ಈಗಾಗಲೇ ಮುಖ್ಯಮಂತ್ರಿಗಳಿಗೂ ಸಹ ಮನವಿ ಸಲ್ಲಿಸಲಾಗಿದ್ದು, ಅದರಂತೆ ತಮಗೂ ಸಹ ಮನವಿ ಸಲ್ಲಿಸುತ್ತಿದ್ದು, ತುರ್ತುಕ್ರಮ ಕೈಗೊಳ್ಳಲು ಸಮಿತಿ ಮುಖಂಡರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ದಾವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ತಹಸೀಲ್ದಾರ ಅಶ್ವತ್, ಸಮಿತಿ ಜಿಲ್ಲಾ ಸಂಚಾಲಕರಾದ ಹೆಬ್ಬಾಳು ರಾಜಯೋಗಿ, ನಿಟುವಳ್ಳಿ ಅಂಜಿನಪ್ಪ ಪೂಜಾರ್, ಮಿಯಾಪುರ ತಿರುಮಲೇಶ ಇತರರು ಇದ್ದರು.