ಭಟ್ಕಳ: ಪಟ್ಟಣಕ್ಕೆ ಆಗಮಿಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಅವರ ನೇತೃತ್ವದಲ್ಲಿ ಶಿಕ್ಷಕರು ಭೇಟಿಯಾಗಿ ಶಿಕ್ಷಕರ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿ ಬಗೆಹರಿಸುವಂತೆ ಮನವಿ ಸಲ್ಲಿಸಿದರು.
ಶಿಕ್ಷಕರು 2017ರ ವೃಂದ ಮತ್ತು ನೇಮಕಾತಿ ನಿಯಮ ಬದಲಾವಣೆ, ಪಿಎಸ್‌ಟಿ ಶಿಕ್ಷಕರಿಗೆ ಅರ್ಹತೆ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡುವುದು, ಮುಖ್ಯಧ್ಯಾಪಕರ ಹುದ್ದೆಗೆ ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ ಕೊಡುವುದು, ವರ್ಗಾವಣೆ ಸಮಯದಲ್ಲಿ 6- 7ನೇ ತರಗತಿಯ ಖಾಲಿ ಹುದ್ದೆಗೆ ಪಿಎಸ್‌ಟಿ ಶಿಕ್ಷಕರಿಗೆ ಅವಕಾಶ ನೀಡಬೇಕೆಂದು ಸಚಿವರ ಗಮನಕ್ಕೆ ತಂದರು. ಇದಕ್ಕುತ್ತರಿಸಿದ ಸಚಿವರು, ನೀವು ಪ್ರಸ್ತಾಪಿಸಿದ ಎಲ್ಲ ಸಮಸ್ಯೆಗಳು ನಮ್ಮ ಗಮನಕ್ಕೆ ಇದ್ದು, ಆಯುಕ್ತರ ಬಳಿ ಚರ್ಚಿಸಿ ಶಿಕ್ಷಕರಿಗೆ ಅನುಕೂಲವಾಗುವಂತೆ ನಿಯಮ ತಿದ್ದುಪಡಿ ಮಾಡುತ್ತೇವೆ ಎಂಬ ಭರವಸೆ ನೀಡಿದರು. ಏಳನೇ ವೇತನ ಆಯೋಗದ ಜಾರಿ ಮಾಡುವುದರ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಮುಂದೆ ಆರೋಗ್ಯ ಸಂಜೀವಿನಿ ಹಾಗೂ ಎನ್‌ಪಿಎಸ್ ಅನ್ನು ಒಪಿಎಸ್ ಮಾಡುವುದು ಸರ್ಕಾರದ ಮುಂದಿದೆ. ಅನುದಾನಿತ ಶಾಲೆಯ ಶಿಕ್ಷಕರ ನೇಮಕಾತಿ 2020ರ ಪೂರ್ವದಲ್ಲಿ ಇದ್ದ ಖಾಲಿ ಹುದ್ದೆಯ ಭರ್ತಿಗೆ ಅವಕಾಶ ನೀಡಲು ಆದೇಶ ಮಾಡಲಾಗಿದೆ. ಹಂತ- ಹಂತವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ ಅವರು ಪ್ರೌಢಶಾಲಾ ದೈಹಿಕ ಶಿಕ್ಷಕರ ಸಮಸ್ಯೆಯ ಬಗ್ಗೆ ತಿಳಿಸಿದಾಗ ಸಚಿವರು ಪರಿಹರಿಸುವ ಭರವಸೆ ನೀಡಿದರು. ಶಿಕ್ಷಣ ಸಚಿವರು ಶಿಕ್ಷಕರ ಸಮಸ್ಯೆಯನ್ನು ಶಾಂತಚಿತ್ತದಿಂದ ಆಲಿಸಿದ್ದು, ಏನೇ ಸಮಸ್ಯೆ ಇದ್ದರೂ ಖುದ್ದಾಗಿ ತನ್ನನ್ನು ಭೇಟಿಯಾಗಿ ಎಂದು ಹೇಳಿರುವುದು ಶಿಕ್ಷಕರ ಸಂತಸಕ್ಕೆ ಕಾರಣವಾಯಿತು.
ನೌಕರರ ಸಂಘದ ಕೇಶವ ಮೊಗೇರ, ಸಿ.ಡಿ. ಪಡುವಣಿ, ಶಿಕ್ಷಕರಾದ ರಾಮಗೌಡ, ಶಂಕರ್ ನಾಯ್ಕ, ಶ್ವೇತಾ ನಾಯ್ಕ, ಹರೀಶ್ ಗೌಡ, ಪ್ರವೀಣ್ ರಾಥೋಡ್, ಮಹೇಶ್ ನಾಯ್ಕ ಮುಂತಾದವರಿದ್ದರು.