ಕನ್ನಡಪ್ರಭ ವಾರ್ತೆ ಯಾದಗಿರಿ
ಅವಶ್ಯಕತೆ ಇರುವಲ್ಲಿ ಗೋಶಾಲೆ ಹಾಗೂ ಪ್ರತಿ ಗ್ರಾಪಂಗೆ ಒಂದರಂತೆ ಮೇವು ಬ್ಯಾಂಕ್ ಮತ್ತು ಜಾನುವಾರುಗಳಿಗೆ ಕುಡಿವ ನೀರಿನ ತೊಟ್ಟಿ ನಿರ್ಮಾಣ ಮಾಡುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಡಗೇರಾ ಪಟ್ಟಣದಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ವಿದ್ಯಾಧರ ಜಾಕಾ, ವಡಗೇರಾ ತಾಲೂಕು ಕೇಂದ್ರವನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ಸುಮಾರು ನಾಲ್ಕು ತಿಂಗಳು ಕಳೆದರೂ ಕೂಡ ಮೇವು ಬ್ಯಾಂಕ್, ಗೋಶಾಲೆ ಹಾಗೂ ಇನ್ನಿತರ ಬರಗಾಲಕ್ಕೆ ಸಂಬಂಧಿಸಿದ ಯಾವುದೇ ರೀತಿ ಕೆಲಸಗಳು ಆರಂಭಿಸಿಲ್ಲ. ಅವು ಬರೀ ಕಾಗದದಲ್ಲಿಯೇ ಉಳಿದಿವೆ ಎಂದು ಆರೋಪಿಸಿದರು.
ಬಿಸಿಲಿನಿಂದ ಜಾನುವಾರುಗಳು ಮೇವು, ನೀರಿಲ್ಲದೆ ಪರದಾಡುತ್ತಿವೆ. ಹಸಿವಿನಿಂದ ಪರದಾಡಿ ಹೊಟ್ಟೆ ತುಂಬಿಸಿಕೊಳ್ಳಲು ಪ್ಲಾಸ್ಟಿಕ್, ನ್ಯೂಸ್ ಪೇಪರ್ ಹಾಗೂ ಊಟದ ಪ್ಲೇಟ್ ಇನ್ನಿತರ ವಸ್ತು ತಿನ್ನುತ್ತಿವೆ. ಅದನ್ನು ನೋಡಿದರೆ ಮನಕಲುಕುತ್ತದೆ. ರಾಜ್ಯ ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದರೂ ಕೂಡ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಜನ-ಜಾನುವಾರು ಪರಿತಪಿಸುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಕೆಲವೆಡೆ ಕುಡಿವ ನೀರಿನ ಸಮಸ್ಯೆ ಇದೆ. ನೀರಿನ ಶುದ್ಧೀಕರಣ ಘಟಕಗಳು, ಬೋರವೆಲ್ ಕೆಟ್ಟು ನಿಂತಿವೆ. ಈ ಬಗ್ಗೆ ಅಧಿಕಾರಿ ವಿಚಾರಿಸಿದರೆ, ಚುನಾವಣೆ ಕೆಲಸದ ನೆಪ ಹೇಳುತ್ತಾರೆ. ಚುನಾವಣೆಯಷ್ಟೇ ಬರಗಾಲದಲ್ಲಿರುವ ಸಾರ್ವಜನಿಕರ ಕುಂದು ಕೊರತೆ ಆಲಿಸಿ, ಪರಿಹಾರ ಕಲ್ಪಿಸುವುದು ಅಧಿಕಾರಿ ಜವಾಬ್ದಾರಿ ಆಗಿದೆ ಎಂದರು.ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪ್ರತಿ ಗ್ರಾಪಂಗೆ ಒಂದರಂತೆ ಮೇವು ಬ್ಯಾಂಕ್ ಹಾಗೂ ಜಾನುವಾರಗಳಿಗೆ ಅಲ್ಲಲ್ಲಿ ಕುಡಿವ ನೀರಿನ ತೊಟ್ಟಿ ನಿರ್ಮಾಣ ಸೇರಿ ಇನ್ನಿತರ ಸೌಲಭ್ಯ ಒದಗಿಸಬೇಕು. ಒಂದು ವೇಳೆ ವಿಳಂಬವಾದಲ್ಲಿ ಕಚೇರಿ ಎದುರು ಉಗ್ರ ಹೋರಾಟ ರೂಪಿಸಲಾಗುವುದೆಂದು ಎಚ್ಚರಿಸಿದರು.
ವಡಗೇರಾ ತಾಲೂಕು ಗೌರವ ಅಧ್ಯಕ್ಷ ಶರಣು ಜಡಿ, ಹಳ್ಳೆಪ್ಪ ತೇಜೇರ, ಮರಲಿಂಗ ಗೋನಾಲ, ಸತೀಶ್ ನಾಟೇಕರ್, ತಿರುಮಲ ಮುಸ್ತಾಜೀರ್, ಅಶೋಕ್ ಚಿನ್ನಿ, ಚಂದ್ರು ಬಾಡದ, ದೇವೇಂದ್ರಪ್ಪ ಜಡಿ, ತಿಪ್ಪಣ್ಣಗೌಡ, ಬಸಲಿಂಗ ರಂಜಣಗಿ, ಶಿವು ಬೆಂಡೆಬೆಂಬಳಿ ಸೇರಿದಂತೆ ಇತರರಿದ್ದರು.