ಮಂಗಳೂರು: ಅಡಕೆ ಬಳಕೆ ಮತ್ತು ಅದರ ನೀತಿ ಪರಿಣಾಮಗಳ ಕುರಿತು 2026 ರ ಜನವರಿ 30 ರಂದು ವಿಶ್ವ ಆರೋಗ್ಯ ಸಂಸ್ಥೆ (WHO) ವತಿಯಿಂದ Areca Nut Challenge: Turning Policy into Impact in South-East Asia ವಿಷಯದಲ್ಲಿ ವೆಬಿನಾರ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಡಕೆ ಸಂಬಂಧಿತ ಮಹತ್ವದ ವಿಚಾರಗಳ ಮೇಲೆ ಚರ್ಚಿಸಲು ವಿಜ್ಞಾನಿಗಳು, ಸಂಶೋಧಕರು, ಸಹಕಾರ ಕ್ಷೇತ್ರದ ನಾಯಕರು ಹಾಗೂ ಅಡಕೆ ಬೆಳೆಗಾರ ಹಿತ ಚಿಂತನೆಯ ಪ್ರಮುಖರ ಪೂರ್ವಭಾವಿ ಸಭೆ ಶುಕ್ರವಾರ ನಡೆಯಿತು.ಪುತ್ತೂರಿನ ಕ್ಯಾಂಪ್ಕೋ ಚಾಕೋಲೇಟ್ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ವಹಿಸಿದ್ದರು.
ಅಡಕೆ ಪುಡಿ, ಪಾನ್ ಮಸಾಲಾ ಮತ್ತು ಇತರ ಮಿಶ್ರಿತ ಉತ್ಪನ್ನಗಳನ್ನು ಕ್ಯಾನ್ಸರ್‌ಕಾರಕವೆಂದು ಗುರುತಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಅಡಕೆ ಮಾತ್ರವೇ ಅಥವಾ ಅಡಕೆಯನ್ನು ಮಾತ್ರವೇ ವಿಶೇಷ ಸಂಶೋಧನೆ ನಡೆಸಿದೆಯೇ ಎಂಬ ಸಂದೇಹ ನಿವಾರಿಸಬೇಕಿದೆ ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಆಯುರ್ವೇದ ಮತ್ತು ಪಾರಂಪರಿಕ ವೈದ್ಯಕೀಯ ಪದ್ಧತಿಗಳಲ್ಲಿ ಅಡಕೆಯನ್ನು ಶತಮಾನಗಳಿಂದ ಔಷಧೀಯ ಗುಣಗಳಿಗಾಗಿ ಬಳಸಲಾಗುತ್ತಿದೆ. ಈ ಐತಿಹಾಸಿಕ ಹಿನ್ನೆಲೆಯನ್ನು ನೀತಿ ನಿರ್ಣಯಗಳಲ್ಲಿ ಪರಿಗಣಿಸಬೇಕು ಎಂದು ಸಭೆ ಅಭಿಪ್ರಾಯಪಟ್ಟಿತು.ಈ ಸಂದರ್ಭದಲ್ಲಿ ಕ್ಯಾಂಪ್ಕೊ ಸಂಸ್ಥೆ ರೈತರಿಗೆ ನ್ಯಾಯ ದೊರಕಿಸುವಂತೆ, ಸಾರ್ವಜನಿಕ ಆರೋಗ್ಯದ ಚಿಂತನೆಗಳನ್ನು ಜವಾಬ್ದಾರಿಯಿಂದ ಎದುರಿಸುವ ದೃಷ್ಟಿಯಿಂದ ನೀತಿ ನಿರೂಪಕಾರರು, ವೈಜ್ಞಾನಿಕ ಸಂಸ್ಥೆಗಳು ಹಾಗೂ ಅಂತರರಾಷ್ಟ್ರೀಯ ಸಂಘಟನೆಗಳೊಂದಿಗೆ ಸಂವಾದದ ಮೂಲಕ ಸಮಸ್ಯೆ ಬಗೆಹರಿಸಲು ಯೋಜನೆ ರೂಪಿಸಲಾಯಿತು. ಮುಂದಿನ ದಿನಗಳಲ್ಲಿ ಅಡಕೆ ಹಾನಿಕಾರಕ ಪಟ್ಟಿಯಿಂದ ತೆಗೆಯಲು ಬೇಕಾದ ಅಗತ್ಯ ಕ್ರಮಗಳ ಬಗ್ಗೆ ಹಂತ ಹಂತವಾಗಿ ಮುನ್ನಡೆಯುವ ಬಗ್ಗೆಯೂ ಇದೇ ವೇಳೆ ನಿರ್ಧರಿಸಲಾಯಿತು.ಸಭೆಯಲ್ಲಿ ಸಿಪಿಸಿಆರ್‌ಐ ನಿರ್ದೇಶಕ ಡಾ. ಬಾಲಚಂದ್ರ ಹೆಬ್ಬಾರ್, ವಿಜ್ಞಾನಿ ಡಾ.ರಮೇಶ್, ಟಿಎಸ್ಎಸ್ ಸಂಸ್ಥೆಯ ಡಾ. ಕೇಶವ ಕೋರ್ಸೆ, ರಾಮಯ್ಯ ವಿಶ್ವವಿದ್ಯಾಲಯದ ಡಾ. ರಾಜಾ ಹಾಗೂ ಡಾ. ಕದಂಬಿ, ಮ್ಯಾಮ್ಕೋಸ್ ಎಂಡಿ ಶ್ರೀಕಾಂತ್, ಕ್ಯಾಂಪ್ಕೊ ನಿರ್ದೇಶಕ ವಿಶ್ವನಾಥ ಇ. ಹೆಗಡೆ ಅವರು ಆನ್‌ಲೈನ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದರು. ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸತ್ಯನಾರಾಯಣ, ಕೃಷಿ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ಭಟ್ ವರ್ಮುಡಿ, ಅಗ್ರಿಲೀಫ್ ಸಂಸ್ಥೆಯ ಅವಿನಾಶ್ ರಾವ್, ಎಆರ್‌ಡಿಎಫ್ ಕಾರ್ಯನಿರ್ವಹಣಾಧಿಕಾರಿ ಡಾ. ಕೇಶವ ಭಟ್, ದಂತ ವೈದ್ಯ ಡಾ.ಪ್ರಕಾಶ್, ವಿವೇಕಾನಂದ ಆಯುರ್ವೇದ ಸಂಸ್ಥೆಯ ಡಾ.ಗುರುರಾಜ್, ಕ್ಯಾಂಪ್ಕೋ ನಿರ್ದೇಶಕ ಮುರಳಿಕೃಷ್ಣ ಚಳ್ಳಂಗಾರು, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.