ಜೋಳ, ರಾಗಿ ಖರೀದಿ ಹಣ ಬಿಡುಗಡೆಗೆ ಆಗ್ರಹ

KannadaprabhaNewsNetwork |  
Published : Oct 06, 2026, 02:15 AM IST
ಜೋಳ, ರಾಗಿ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಬೆಂಗಳೂರಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಎಂ.ಡಿ ಕಚೇರಿ ಎದುರು ರೈತ ಸಂಘದ ಪದಾಧಿಕಾರಿಗಳು ಧರಣಿ ನಡೆಸಿದರು. | Kannada Prabha

ಸಾರಾಂಶ

ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಉತ್ಪನ್ನ ಖರೀದಿಸಿದ ಬಳಿಕ ಹಣ ಪಾವತಿಯಾಗದೆ ವಿಳಂಬವಾಗುತ್ತಿರುವುದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ

ಕಂಪ್ಲಿ: ಕಳೆದ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗಿರುವ ಜೋಳ ಹಾಗೂ ರಾಗಿ ಉತ್ಪನ್ನಗಳ ಹಣ ಕೂಡಲೇ ರಾಜ್ಯದ ರೈತರ ಖಾತೆಗಳಿಗೆ ಜಮೆ ಮಾಡುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಬೆಂಗಳೂರಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.

ಧರಣಿ ವೇಳೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ಕಳೆದ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರ ರೈತರಿಂದ ಖರೀದಿಸಲಾಗಿರುವ ಜೋಳ ಮತ್ತು ರಾಗಿಯ ಒಟ್ಟು ₹406.84 ಕೋಟಿ ಹಣ 15 ದಿನಗಳ ಹಿಂದೆಯೇ ಬಿಡುಗಡೆ ಮಾಡಲಾಗಿದೆ. ಆದರೆ, ಇದುವರೆಗೂ ರಾಜ್ಯದ ರೈತರ ಖಾತೆಗಳಿಗೆ ಹಣ ಜಮೆಯಾಗಿಲ್ಲ ಎಂದು ಆರೋಪಿಸಿದರು.

ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಉತ್ಪನ್ನ ಖರೀದಿಸಿದ ಬಳಿಕ ಹಣ ಪಾವತಿಯಾಗದೆ ವಿಳಂಬವಾಗುತ್ತಿರುವುದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.ಬಿತ್ತನೆ, ಗೊಬ್ಬರ, ಕೂಲಿ, ನೀರಾವರಿ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಾಲ ಮಾಡಿಕೊಂಡಿರುವ ರೈತರಿಗೆ ಉತ್ಪನ್ನ ಮಾರಾಟದ ಹಣ ಅತ್ಯಂತ ಅವಶ್ಯಕವಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಬಾಕಿ ಹಣ ರೈತರ ಖಾತೆಗಳಿಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.

ರೈತರ ಹಣ ಬಿಡುಗಡೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರ ಸಮಸ್ಯೆ ಕುರಿತು ಸರ್ಕಾರ ಮೌನ ವಹಿಸಿರುವುದನ್ನು ಖಂಡಿಸಿ ಅನಿವಾರ್ಯವಾಗಿ ಧರಣಿ ನಡೆಸಬೇಕಾಗಿದೆ ಎಂದು ಹೇಳಿದರು.

ಧರಣಿ ಸ್ಥಳಕ್ಕೆ ಆಹಾರ ಇಲಾಖೆಯ ಡಿಜಿಎಂ ರಾಘವೇಂದ್ರ ಭೇಟಿ ನೀಡಿ, ರೈತರ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಬಾಕಿ ಇರುವ ಜೋಳ ಮತ್ತು ರಾಗಿ ಖರೀದಿ ಹಣ ಹತ್ತು ದಿನಗಳೊಳಗಾಗಿ ರೈತರ ಖಾತೆಗಳಿಗೆ ಜಮೆ ಮಾಡುವುದಾಗಿ ಭರವಸೆ ನೀಡಿದರು.

ಈ ಭರವಸೆಯ ಹಿನ್ನೆಲೆ ಸದ್ಯದ ಧರಣಿ ಕೈಬಿಡಲಾಗುತ್ತಿದೆ. ಆದರೆ ಹತ್ತು ದಿನಗಳೊಳಗಾಗಿ ರೈತರ ಖಾತೆಗಳಿಗೆ ಹಣ ಪಾವತಿಯಾಗದಿದ್ದರೆ ರಾಜ್ಯಾದ್ಯಂತ ರೈತರನ್ನು ಸಂಘಟಿಸಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಬಿ.ವಿ. ಗೌಡ ಎಚ್ಚರಿಸಿದರು.

ರೈತರ ಉತ್ಪನ್ನಗಳಿಗೆ ಸಮರ್ಪಕ ಬೆಲೆ ದೊರಕಿಸುವುದರ ಜತೆಗೆ ಖರೀದಿ ಮಾಡಿದ ಉತ್ಪನ್ನಗಳ ಹಣ ಯಾವುದೇ ವಿಳಂಬವಿಲ್ಲದೆ ನಿಗದಿತ ಅವಧಿಯಲ್ಲಿ ಪಾವತಿಸುವ ವ್ಯವಸ್ಥೆ ಸರ್ಕಾರ ರೂಪಿಸಬೇಕು. ರೈತರ ಆರ್ಥಿಕ ಸಂಕಷ್ಟ ಪರಿಗಣಿಸಿ ಬಾಕಿ ಹಣ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಹೊಳೆಯಾಚೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ್, ಬಸವರಾಜ ಗೋಡೆಹಾಳ, ರಾಜ್ಯ ಮಹಿಳಾ ಸಂಚಾಲಕಿ ಉಮಾದೇವಿ ನಾಯಕ, ದೇವಕಿ ನಾಯಕ, ದೇವದುರ್ಗ ತಾಲೂಕಾಧ್ಯಕ್ಷ ಮರಿಲಿಂಗ ಪಾಟೀಲ್, ರಾಯಚೂರು ಜಿಲ್ಲಾ ಯುವ ಘಟಕ ಅಧ್ಯಕ್ಷ ಮಲ್ಲೇಶ್ ನಾಯಕ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಕರೆಗೆ ₹50 ಸಾವಿರ ಪರಿಹಾರ ಕೊಡಿ
ಗ್ರಾಮೀಣ ಪ್ರಥಮ ಚಿಕಿತ್ಸಕರ ಸೇವೆ ಶ್ಲಾಘನೀಯ