ಕನ್ನಡಪ್ರಭ ವಾರ್ತೆ ಕನಕಗಿರಿ
ಪಿಂಜಾರ (ನದಾಫ್) ನಿಗಮಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪಿಂಜಾರ ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಸೋಮವಾರ ಮನವಿ ಸಲ್ಲಿಸಿದರು.ಸಂಘದ ತಾಲೂಕು ಘಟಕದ ಅಧ್ಯಕ್ಷ ಮಾಬುಸಾಬ ಗುರಿಕಾರ ಮಾತನಾಡಿ, ರಾಜ್ಯದಲ್ಲಿ ೨೫ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಿಂಜಾರ ಸಮಾಜ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದಿದೆ. ನಮ್ಮ ಸಮಾಜ ಇಸ್ಲಾಂ ಧರ್ಮದ ಪಂಗಡದಲ್ಲಿದ್ದರೂ ಸರ್ಕಾರದ ವೃತ್ತಿಪರ ಜಾತಿಗಳ ವಿಂಗಡನೆಯನ್ವಯ ಪ್ರವರ್ಗ ೧ಕ್ಕೆ ಒಳಪಡುತ್ತಿದ್ದೇವೆ. ಇದರಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮತ್ತು ಇತರೇ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಅನೇಕ ವರ್ಷಗಳಿಂದ ವಂಚಿತರಾಗಿದ್ದೇವೆ.
ಈ ಸಮಸ್ಯೆ ಪರಿಹಾರಕ್ಕೆ ಹಿರಿಯರು ಹೋರಾಟ ಮಾಡುತ್ತಾ ಬಂದಿದ್ದಕ್ಕೆ ಹಿಂದಿನ ಸರ್ಕಾರ ಪಿಂಜಾರ ಸೇರಿ ೧೩ ಜಾತಿಗಳ ಅಭಿವೃದ್ಧಿ ನಿಗಮಗಳನ್ನು ಘೋಷಿಸಿತ್ತು. ಪ್ರಸಕ್ತ ಸರ್ಕಾರಕ್ಕೆ ಸಮಾಜದ ಜನಸಂಖ್ಯೆಯ ಆಧರಿಸಿ ಯೋಜನೆ ರೂಪಿಸಲು ಒತ್ತಾಯ ಮಾಡುತ್ತಾ ಬಂದರೂ ಸ್ಪಂದಿಸಿಲ್ಲ. ಹಿಂದುಳಿದ ನಮ್ಮ ಸಮಾಜಕ್ಕೆ ನ್ಯಾಯ ಕೊಡಬೇಕು. ಹೊಸ ಯೋಜನೆಗಳನ್ನು ರೂಪಿಸಬೇಕು ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಪ್ರಮುಖರಾದ ರಾಜಾಸಾಬ ನಂದಾಪುರ, ಹೊನ್ನೂರಸಾಬ ಉಪ್ಪು, ಐ.ಎಚ್. ಕಿನ್ನಾಳ, ಲಾಲಸಾಬ ನದಾಫ್, ಚಂದುಸಾಬ ಗುರಿಕಾರ, ಹುಸೇನಸಾಬ ಗೋರಳ್ಳಿ, ಮೈಬುಸಾಬ ಗುರಿಕಾರ, ದಾದಸಾಬ ವಟಪರ್ವಿ, ಶಾಮೀದಾಬ, ಹೊನ್ನೂಸಾಬ, ಶೇಖಹುಸೇನ, ಅಕ್ಬರ್ ಬಂಕದಮನಿ ಸೇರಿದಂತೆ ಇತರರು ಇದ್ದರು.
ಸಮಾಜದ ಆರ್ಥಿಕ ಅಭಿವೃದ್ಧಿಗೆ ಸಹಕರಿಸಲಿ:ಪಿಂಜಾರ ನಿಗಮ ಮಂಡಳಿಗೆ ಪ್ರತ್ಯೇಕ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಕುಷ್ಟಗಿ ತಾಲೂಕು ನದಾಫ್ ಸಂಘದ ವತಿಯಿಂದ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ತಾಲೂಕಾಧ್ಯಕ್ಷ ಮೆಹಬೂಬಸಾಬ ನೆರೆಬೆಂಚಿ ಮಾತನಾಡಿ, ಕರ್ನಾಟಕ ರಾಜ್ಯಾದ್ಯಂತ ಸುಮಾರು 25 ಲಕ್ಷ ಜನಸಂಖ್ಯೆ ಹೊಂದಿರುವ ನದಾಫ್ ಜನಾಂಗವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ, ರಾಜಕೀಯ ಹಾಗೂ ಹಲವಾರು ರಂಗಗಳಲ್ಲಿ ಅತ್ಯಂತ ಹಿಂದುಳಿದಿದೆ. ನಮ್ಮ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಇದ್ದರು ಸಹಿತ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದು ನೈಯಾ ಪೈಸೆ ಅನುದಾನ ನೀಡಿಲ್ಲ ಎಂದರು.ಆದ ಕಾರಣ ನಮ್ಮ ನಿಗಮ ಮಂಡಳಿಗೆ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಬೇಕು. ಕಷ್ಟಕರ ಜೀವನ ನಡೆಸುತ್ತಿರುವ ಶೋಷಿತ ನದಾಫ್ ಜನಾಂಗ ಇಸ್ಲಾಂ ಧರ್ಮದ ಮುಸ್ಲಿಂ (ಅಲ್ಪಸಂಖ್ಯಾತರ) ಪಂಗಡದಲ್ಲಿದ್ದರೂ ಸಹ ಸರ್ಕಾರದ ವೃತ್ತಿಪರ ಜಾತಿಗಳ ವಿಂಗಡಣೆ ಅನ್ವಯ ನದಾಫ್, ಪಿಂಜಾರ ಉಪ ಪಂಗಡಕ್ಕೆ ಸೇರಿದ್ದು, ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದ ಪ್ರವರ್ಗ-1 ರ ಮೀಸಲಾತಿ ಹೊಂದಿದೆ.ತಾಂತ್ರಿಕ ದೋಷ ಹಾಗೂ ಅಧಿಕಾರಿಗಳ ನಿರ್ಲಕ್ಷತೆಯಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಇತರ ಯೋಜನೆಗಳಿಂದ ವಂಚಿತರಾಗಿದ್ದೇವೆ. ಆದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ನದಾಫ್ ಜನಾಂಗದ ನಿಗಮ ಮಂಡಳಿಗೆ ಪ್ರತ್ಯೇಕ ಅನುದಾನವನ್ನು ಬಿಡುಗಡೆ ಮಾಡಿ ಸಮಾಜದ ಆರ್ಥಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಘದ ಮುಖ್ಯಸ್ಥರಾದ ಹುಸೇನಸಾಬ, ಯಮನೂರಸಾಬ, ಮೋದಿನಸಾಬ, ದಾವಲಸಾಬ, ಫಕೀರಸಾಬ, ಅಲ್ಲಾಸಾಬ, ಬುಡ್ನೆಸಾಬ, ಇಮಾಮ್ ಸಾಬ ಸೇರಿದಂತೆ ಹಲವರು ಉಪಸ್ಥಿತರಿದ್ದರು.