ಅತ್ಯಂತ ಹಿಂದುಳಿದ ಸಮುದಾಯಗಳಾದ ಹೂಗಾರ, ಕಂಬಾರ, ಗಾಣಿಗ, ಹಡಪದ, ಈಡಿಗ, ಮಾಳಿ ಸೇರಿದಂತೆ ಸಣ್ಣ ಸಣ್ಣ ಸಮುದಾಯಗಳ ನಿಗಮಗಳಿಗೂ ಸಹ ಹಣ ನೀಡಿಲ್ಲ. ಹಿಂದುಳಿದ ವರ್ಗಗಳ ನಿಗಮಗಳಿಗೆ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿ ಹಿಂದುಳಿದವರ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ಬಿಡುಗಡೆಗೆ ಒತ್ತಾಯಿಸಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ನೀಡದ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ನಿಗಮಗಳನ್ನು ಮುಚ್ಚುವಂತೆ ಆಕ್ರೋಶ ವ್ಯಕ್ತಪಡಿಸಿದರು.
ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಜನರ ಆರ್ಥಿಕ, ಔದ್ಯೋಗಿಕ, ಕೃಷಿ ಮತ್ತು ಶಿಕ್ಷಣಕ್ಕಾಗಿ ನಿಗಮಗಳಿಗೆ ಹಣ ಬಿಡುಗಡೆ ಮಾಡದೇ ವಂಚಿಸುತ್ತಿದೆ ಎಂದು ಆರೋಪಿಸಿದರು.
ಕಳೆದ ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಡಿ.ದೇವರಾಜ ಅರಸು, ಒಕ್ಕಲಿಗ, ಮರಾಠ, ವಿಶ್ವಕರ್ಮ, ವೀರಶೈವ ಲಿಂಗಾಯತ, ನಿಜಶರಣ ಅಂಬಿಗರ ಚೌಡಯ್ಯ, ಸವಿತಾ ಸಮಾಜ, ಅಲೆಮಾರಿ, ಅರೆ ಅಲೆಮಾರಿ, ಮಡಿವಾಳ ಮಾಚಿದೇವ ಮತ್ತು ಕಾಡುಗೊಲ್ಲರ ಅಭಿವೃದ್ಧಿ ನಿಗಮಗಳಿಗೆ 1000 ಕೋಟಿ ರು.ಗೂ ಹೆಚ್ಚು ಅನುದಾನ ನೀಡಲಾಗಿತ್ತು ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ ಹಿಂದುಳಿದ ವರ್ಗಗಳಿಗೆ 1600 ಕೋಟಿ ರು. ಘೋಷಣೆ ಮಾಡಿ ಕೇವಲ 57.04 ಕೋಟಿ ರು. ವೆಚ್ಚ ಮಾಡಿ ಮೋಸ ಮಾಡಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಲಕ್ಕೆ 6065 ಅರ್ಜಿಗಳು ಸಲ್ಲಿಕೆಯಾಗಿದ್ದರೂ ನಯಾ ಪೈಸೆ ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ ಎಂದು ದೂರಿದರು.
ಅತ್ಯಂತ ಹಿಂದುಳಿದ ಸಮುದಾಯಗಳಾದ ಹೂಗಾರ, ಕಂಬಾರ, ಗಾಣಿಗ, ಹಡಪದ, ಈಡಿಗ, ಮಾಳಿ ಸೇರಿದಂತೆ ಸಣ್ಣ ಸಣ್ಣ ಸಮುದಾಯಗಳ ನಿಗಮಗಳಿಗೂ ಸಹ ಹಣ ನೀಡಿಲ್ಲ. ಹಿಂದುಳಿದ ವರ್ಗಗಳ ನಿಗಮಗಳಿಗೆ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿ ಹಿಂದುಳಿದವರ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ನರಸಿಂಹಮೂರ್ತಿಗೌಡ, ಜಿಲ್ಲಾಧ್ಯಕ್ಷ ನರಸಿಂಹಾಚಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್, ವಾಸು, ಬಿಜೆಪಿ ಮುಖಂಡ ಸಿ.ಟಿ.ಮಂಜುನಾಥ್, ಸಿದ್ದರಾಜುಗೌಡ, ಮಹಿಳಾಧ್ಯಕ್ಷೆ ಮಂಗಳ, ಮಲ್ಲಿಕಾರ್ಜುನ್, ಲಕ್ಷ್ಮಣಗೌಡ, ಧರಣಿ, ಕಲ್ಲಳ್ಳಿ ರಾಜು, ಪ್ರಸನ್ನ, ಚಂದ್ರು ಸೇರಿದಂತೆ ಹಲವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.