ಕನ್ನಡಪ್ರಭ ವಾರ್ತೆ ಮಂಡ್ಯ
ತಮಿಳು ಕಾಲೋನಿ ನಿವಾಸಿಗಳಿಗೆ ಮಂಡ್ಯ ಕೆರೆಯಂಗಳದಲ್ಲಿ ರಾಜ್ಯ ಸರ್ಕಾರ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಿಸಿರುವ ಮನೆಗಳನ್ನು ಅನ್ಯರಿಗೆ ವಿತರಿಸುವ ಸಂಬಂಧ ನ್ಯಾಯಾಲಯಕ್ಕೆ ಅಫಿಡೆವಿಟ್ ಸಲ್ಲಿಸುವ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಜೊತೆ ಶಾಸಕ ಪಿ.ರವಿಕುಮಾರ್ ಚರ್ಚಿಸಿರುವುದರಿಂದ ಗೊಂದಲ ಉಂಟಾಗಿದೆ. ಯಾವುದೇ ಕಾರಣಕ್ಕೂ ಮನೆಗಳನ್ನು ಬೇರೆಯವರಿಗೆ ವಿತರಿಸದೆ ತಮಿಳು ಕಾಲೋನಿ ನಿವಾಸಿಗಳಿಗೆ ವಿತರಣೆ ಮಾಡಿ ಆಸ್ಪತ್ರೆ ವಿಸ್ತರಣೆಗೆ ಅವಕಾಶ ಮಾಡಿಕೊಡುವಂತೆ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ತಮಿಳು ಕಾಲೋನಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ, ಸ್ಥಳಾಂತರಿಸುವಂತೆ ಹೈಕೋರ್ಟ್ ಆದೇಶದ ಹಿನ್ನೆಲೆ ೨೦೧೮ರ ಜಿಲ್ಲಾಧಿಕಾರಿ ಮಂಜುಶ್ರೀ ರಾಜೀವ್ ಆವಾಸ್ ಯೋಜನೆಯಡಿ ೩೮ ಕೋಟಿ ರು. ವ್ಯಯಿಸಿ ೫೭೬ ಮನೆ ನಿರ್ಮಿಸಿದ್ದು, ತಮಿಳು ಕಾಲೋನಿ ನಿವಾಸಿಗಳು ತಮ್ಮ ಮನೆಗಳನ್ನು ಪಡೆಯಬೇಕು ಮತ್ತು ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ಅವರು ಇದಕ್ಕೆ ಕ್ರಮವಹಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ತಮಿಳು ಕಾಲೋನಿಯ ಜನಗಳನ್ನು ಅಲ್ಲಿಯೇ ಉಳಿಸಿ ತಮ್ಮ ಓಟ್ ಬ್ಯಾಂಕ್ ರಾಜಕೀಯ ಮಾಡಲು ಕೆಲವರು ಹೊರಟಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು. ಮಿಮ್ಸ್‌ನ ಸ್ಥಳದಲ್ಲೇ ತಮಿಳು ಕಾಲೋನಿ ನಿವಾಸಿಗಳು ಉಳಿಯುವಂತೆ ಮಾಡಲು ಹಾಗೂ ಅವರ ಓಲೈಕೆಗಾಗಿ ಸ್ಥಳೀಯ ಜನಪ್ರತಿನಿಧಿಗಳು ಟೊಂಕಕಟ್ಟಿ ನಿಂತಿದ್ದು ಅವರಿಗಾಗಿ ನಿರ್ಮಿಸಿದ ಮನೆಗಳನ್ನು ಇತರರಿಗೆ ವಿತರಿಸುವ ಸಂಚು ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಿಮ್ಸ್‌ನ ೧೮ ಎಕರೆ ಸ್ಥಳವನ್ನು ತಮಿಳು ಕಾಲೋನಿ ನಿವಾಸಿಗಳು ಸೇರಿದಂತೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ತೆರವುಗೊಳಿಸಿ ಮಿಮ್ಸ್ ಅಭಿವೃದ್ಧಿಗೆ ಸಹಕರಿಸಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.