ಅಖಂಡ ಕುರುಬರಿಗೆ ಎಸ್‌ಟಿ ಮೀಸಲಾತಿಗೆ ಒತ್ತಾಯ

KannadaprabhaNewsNetwork |  
Published : Sep 27, 2026, 01:30 AM IST
26ಕೆಡಿವಿಜಿ1, 2-ದಾವಣಗೆರೆಯಲ್ಲಿ ಶನಿವಾರ ಜಿಲ್ಲಾ ಕುರುಬ ಸಮಾಜದಿಂದ ರಾಜ್ಯಸಭಾ ಸದಸ್ಯ ಮಾ.ನಾಗರಾಜರನ್ನು ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹಾಗ ಸಮಾಜದ ಮುಖಂಡರು ಸನ್ಮಾನಿಸಿದರು. | Kannada Prabha

ಸಾರಾಂಶ

ಅಖಂಡ ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಕೊಟ್ಟರೆ, ನೀವು ಹೆಂಗೆ ಹೇಳುತ್ತೀರೋ ಹಂಗೇ ಕೇಳುತ್ತೇವೆ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ರಾಜ್ಯಸಭಾ ಸದಸ್ಯ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮಾ.ನಾಗರಾಜ ಅವರಿಗೆ ಹೇಳಿದ್ದಾರೆ.

- ಮೀಸಲಾತಿ ಕೊಟ್ಟರೆ ನೀವು ಹೆಂಗೆ ಹೇಳ್ತೀರೋ ಹಂಗೇ ಕೇಳ್ತೇವೆ: ಕಾಗಿನೆಲೆ ಶ್ರೀಗಳು - ಕುರುಬ ಸಮಾಜ ರಾಜಕೀಯ ಶಕ್ತಿ ಪಡೆಯಲಿ: ರಾಜ್ಯಸಭಾ ಸದಸ್ಯ ಮಾ.ನಾಗರಾಜ್

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಅಖಂಡ ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಕೊಟ್ಟರೆ, ನೀವು ಹೆಂಗೆ ಹೇಳುತ್ತೀರೋ ಹಂಗೇ ಕೇಳುತ್ತೇವೆ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ರಾಜ್ಯಸಭಾ ಸದಸ್ಯ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮಾ.ನಾಗರಾಜ ಅವರಿಗೆ ಹೇಳಿದ್ದಾರೆ.

ನಗರದ ದಾ-ಹ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾ ಕುರುಬ ಸಮಾಜದಿಂದ ರಾಜ್ಯಸಭಾ ಸದಸ್ಯ ಮಾ.ನಾಗರಾಜ್‌ ಅವರಿಗೆ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಕಾಗಿನೆಲೆ ಸ್ವಾಮೀಜಿ 3 ತಾಸು ಇಲ್ಲಿ ಕುಳಿತಿದ್ದಾರೆ. ಇದೇನೂ ಹೊಸ ಶಕೆ ಏನಲ್ಲ. ಅಖಂಡ ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಕೊಟ್ಟರೆ ನೀವು ಹೆಂಗೇ ಹೇಳ್ತೀರೋ ಹಂಗೇ ಕೇಳ್ತೀವಿ ಎಂದರು.

ಕೇಂದ್ರದಿಂದ ನಮ್ಮ ನಿರೀಕ್ಷೆಗಳನ್ನು ಈಡೇರಿಸುವ ಕೆಲಸವಾಗಬೇಕು. ಸರ್ಕಾರ ನಮ್ಮ ಸಮುದಾಯದ ನಿರೀಕ್ಷೆಗಳನ್ನು ಫುಲ್‌ಫಿಲ್ ಮಾಡಿದರೆ, ನಮ್ಮ ಅಖಂಡ ಕುರುಬ ಸಮಾಜವೂ ನಿಮ್ಮ (ಸರ್ಕಾರದ) ನಿರೀಕ್ಷೆಗಳನ್ನು ಖಂಡಿತವಾಗಿ ಫುಲ್‌ಫಿಲ್ ಮಾಡುತ್ತದೆ. ರಾಣೆಬೆನ್ನೂರಿನಲ್ಲಿ 2 ದಶಕದ ಹಿಂದೆ ಮೆಡಿಕಲ್ ಕಾಲೇಜು ಸ್ಥಾಪಿಸಲು 46 ಎಕರೆ ಭೂಮಿ ಖರೀದಿಸಿದ್ದೆವು. ಆದರೆ, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಿಗಿಂತ ನಮ್ಮ ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಬೇಕೆಂಬುದೇ ನಮ್ಮ ದೊಡ್ಡ ಗುರಿ ಎಂದು ಸ್ಪಷ್ಟಪಡಿಸಿದರು.

ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುವಂತೆ ನೂರಾರು ಸಲ ದೆಹಲಿಗೆ ಹೋಗಿ, ಕೇಂದ್ರಕ್ಕೆ ಮನವಿ ಮಾಡಿ ಬಂದಿದ್ದೇವೆ. ಈಗ ಹೋರಾಟದ ನೆಲವಾದ ದಾವಣಗೆರೆಯಿಂದ ಹೊಸ ಸಂಚಲನ ಶುರುವಾಗಿದೆ. 2022ರಲ್ಲಿ ಕುರುಬರಿಗೆ ಎಸ್‌ಟಿ ಯಾಕೆ ಕೊಡಬೇಕೆಂದು ಆಲೋಚಿಸುತ್ತಿದ್ದ ಬಿಜೆಪಿ ನಾಯಕರಲ್ಲಿ ಈಗ ಕುರುಬ ಸಮಾಜಕ್ಕೆ ಎಸ್ಟಿ ಯಾಕೆ ಕೊಡಬಾರದೆಂಬ ಮನಸ್ಥಿತಿ ಬಂದಿದೆ. ಇದನ್ನು ಉಳಿಸಿಕೊಂಡು, ಎಸ್‌ಟಿ ಮೀಸಲಾತಿ ಪಡೆಯುವ ಕೆಲಸ ಈಗ ಸಮಾಜದ ಕೈಯಲ್ಲಿದೆ ಎಂದು ಅವರು ತಿಳಿಸಿದರು.

ರಾಜ್ಯಸಭಾ ಸದಸ್ಯ ಮಾ.ನಾಗರಾಜ ಅವರಿಗೆ ಇಲ್ಲಿ ಕೂಡಿಸಿ, ಕಂಬಳಿ ಹಾಕಿದ್ದು ಶೋಕಿಗಲ್ಲ. ಇದು ಅಖಂಡ ಕುರುಬರ ನೋವು ಕಂಬಳಿಯಲ್ಲಿದೆ. ಅದನ್ನು ನೀಗಿಸುವ ಶಕ್ತಿಯನ್ನು ಶ್ರೀ ಗುರು ರೇವಣಸಿದ್ದರು ನಿಮಗೆ ನೀಡಲಿ. ನಮ್ಮ ಸಮುದಾಯದ ಧ್ವನಿಯಾಗಿ ಕೇಂದ್ರದ ಮಟ್ಟದಲ್ಲಿ ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸುವ ಕೆಲಸ ಮಾಡಿ. ಅದೇ ರೀತಿ ನಮ್ಮ ಸಮುದಾಯದ ಮಾ.ನಾಗರಾಜ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ, ಅಭಿನಂದಿಸಲು ಬಯಸಿದ್ದೇವೆ. ಹಾಗಾಗಿ, 10 ಜನರ ಪಟ್ಟಿಯನ್ನು ಮಾ.ನಾಗರಾಜ ಕಳಿಸಿದ್ದಾರೆ. ಎಷ್ಟು ಬೇಗ ಆಗುತ್ತದೋ ಅಷ್ಟು ಬೇಗ ದೆಹಲಿಗೆ ಹೋಗಿ, ಮೋದಿಯವರನ್ನು ಅಭಿನಂದಿಸಲು ಬಯಸುತ್ತೇವೆ ಎಂದು ಅವರು ಹೇಳಿದರು.

ಸಮಾರಂಭ ಉದ್ಘಾಟಿಸಿ, ಸನ್ಮಾನಿತರಾಗಿ ಮಾತನಾಡಿದ ರಾಜ್ಯಸಭಾ ಸದಸ್ಯ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮಾ.ನಾಗರಾಜ ಮಾತನಾಡಿ, ಮಂಡ್ಯ, ಬೆಂಗಳೂರು, ಭದ್ರಾವತಿಯಲ್ಲಿ ಬೆಳೆದರೂ ನನಗೆ ನಾಯಕತ್ವದ ಗುಣ ನೀಡಿದ್ದು ದಾವಣಗೆರೆ. 1978ರಲ್ಲಿ ನಾನು ಇಲ್ಲಿ ಬಂದಾಗ ಆಗಿನ ಶಾಸಕ ಪಂಪಾಪತಿ, ಕೆ.ಮಲ್ಲಪ್ಪ, ಚನ್ನಯ್ಯ ಒಡೆಯರ್ ಸೇರಿದಂತೆ ಅನೇಕರೊಂದಿಗೆ ಒಡನಾಟ ಹೊಂದಿದ್ದೆ. ಮಲೆನಾಡಿನಿಂದ ಬಂದ ನನಗೆ ಇಲ್ಲಿ ನಾಯಕರು ಮಾರ್ಗದರ್ಶನ ನೀಡಿದ್ದರು. ದಾವಣಗೆರೆ ನನಗೆ ನಾಯಕತ್ವ ಗುಣ ಕಟ್ಟಿಕೊಟ್ಟಿತು ಎಂದು ಸ್ಮರಿಸಿದರು.

ದಾವಣಗೆರೆ ಜನ ಸ್ವಲ್ಪ ಒರಟು, ತೆಂಗಿನಕಾಯಿ ತರಹ. ಹೊರಗಿನಿಂದ ಗಟ್ಟಿ, ಒಳಗೆ ಮೃದು ಮನಸ್ಸಿನವರು. ಅದೇ ರೀತಿ ಕುರುಬ ಬಾಂಧವರು, ಮುಖಂಡರು ಮನಸ್ಸು ಸಹ. ಹಾಲುಮತ ಹಾಲಿನಷ್ಟೇ ಬೆಳ್ಳಗೆ. ಪ್ರಹ್ಲಾದ ಜೋಷಿ ಪ್ರತಿ ಪೂಜೆಗೆ ಮೊದಲ ಸಲ ಹಾಲುಮತದವರಿಗೆ ಪೂಜೆಗೆ ಕರೆಯುತ್ತಾರೆ. ಕುರುಬರ ಬೋಣಿಗೆ ಎನ್ನುತ್ತಾರೆ. ಕುರುಬರ ಮನಸ್ಸು ಅಷ್ಟೊಂದು ಸೃಜನಶೀಲ, ನಿರಾಪೇಕ್ಷ ಭಾವನೆ ಇಟ್ಟುಕೊಂಡ ನಿಷ್ಕಲ್ಮಷ ಮನಸ್ಸಿನ ವ್ಯಕ್ತಿಗಳು. ಸಂಘ ಪರಿವಾರದಲ್ಲಿ ನಾನು ಕೆಲಸ ಮಾಡುತ್ತಿದ್ದರೂ ವರಿಷ್ಠರು ಆರ್‌ಎಸ್‌ಎಸ್‌ನಲ್ಲಿ ಹಾಲುಮತದವರಿಗೆ ಪ್ರೋತ್ಸಾಹಿಸುತ್ತಿರುವುದು ಗಮನಾರ್ಹ ಎಂದು ಅವರು ತಿಳಿಸಿದರು.

ಕುರುಬರ ಇತಿಹಾಸ ನೋಡಿದರೆ 1978ರಲ್ಲಿ ನಾನಿಲ್ಲಿ ಬಂದಾಗ ಆಗಿನ ರಾಜಕೀಯ ಪ್ರಾತಿನಿಧ್ಯ ನೋಡಿದರೆ ಕೆ.ಮಲ್ಲಪ್ಪ, ಚನ್ನಯ್ಯ ಒಡೆಯರ್‌, ಹರಿಹರದಲ್ಲಿ ಡಾ. ವೈ.ನಾಗಪ್ಪ, ಕಡೂರಿನಲ್ಲಿ ಕೃಷ್ಣಮೂರ್ತಿ, ತರೀಕೆರೆ ಪರಮೇಶ್ವರಪ್ಪ, ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಇದ್ದರು. ರಾಣೆಬೆನ್ನೂರಲ್ಲಿ ನಂತರ ಶಂಕರ್ ಹೀಗೆ ಎಲ್ಲಾ ಕ್ಷೇತ್ರದಲ್ಲಿದ್ದ ನಮ್ಮ ಸಮಾಜದ ಪ್ರಾತಿನಿಧ್ಯ ಈಗ ಶೂನ್ಯವಾಗಿದೆ. ಬಹುಶಃ ಎಲ್ಲೋ ಒಂದು ಕಡೆ ನಮ್ಮ ಸಮಾಜದ ಬಂಧುಗಳು, ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಅಂತಹ ಪ್ರಾತಿನಿಧ್ಯ ಮತ್ತೆ ಗಳಿಸಲು ಪ್ರಯತ್ನಿಸಬೇಕು ಎಂದು ಮಾ.ನಾಗರಾಜ ತಿಳಿಸಿದರು.

ಸಮಾಜದ ಜಿಲ್ಲಾಧ್ಯಕ್ಷ ಬಿ.ಎಚ್.ಪರಶುರಾಮಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ, ಜಡಗನಹಳ್ಳಿ ವಿರುಪಾಕ್ಷಪ್ಪ, ಅಣಜಿ ಗುಡ್ಡೇಶ್, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ, ಸೊಕ್ಕೆ ನಾಗರಾಜ, ಪರಶುರಾಮಪ್ಪ, ಕೆ.ರೇವಣಸಿದ್ದಪ್ಪ, ಎಚ್.ಬಿ.ಸಂಗಪ್ಪ ಪೈಲ್ವಾನ್, ಹದಡಿ ಜಿ.ಸಿ.ನಿಂಗಪ್ಪ, ಶಿವಾನಂದ ದಳವಾಯಿ, ಪುಷ್ಪಾ ಆನಂದ, ಎಚ್.ಎನ್.ಗುರುನಾಥ, ಹಾಲೇಕಲ್ಲು ಅರವಿಂದ್, ಬಿ.ಎಂ.ಸತೀಶ ಕೊಳೇನಹಳ್ಳಿ, ರಾಜು ಮೌರ್ಯ, ಬಿ.ಕೆ.ರಮೇಶ, ವೀರಣ್ಣ, ಅಣಬೇರು ಶಿವಮೂರ್ತಿ, ಬೀರಪ್ಪ, ಭೈರೇಶ, ಬಸವರಾಜಪ್ಪ, ಗೋಣೆಬಸಪ್ಪ, ಎಂ.ಮನು ದೇವನಗರಿ, ಚಂದ್ರಮೌಳಿ ಇತರರು ಇದ್ದರು.

- - -

(ಕೋಟ್ಸ್‌) ಕುರುಬ ಸಮಾಜಕ್ಕೆ ಎಸ್‌ಟಿಗೆ ಕೇಳುತ್ತಿಲ್ಲ, ಇರುವ ಬ್ರಾಕೆಟ್ ತೆಗೆದು ವಿಸ್ತಾರ ಮಾಡುವಂತೆ ಕೇಳುತ್ತಿದ್ದೇವೆ. ರಾಜ್ಯದ 60 ಲಕ್ಷ ಕುರುಬರಿಗೆ ಅನುಕೂಲ ಮಾಡಿಕೊಡುವಂತೆ ಶ್ರೀಗಳ ನೇತೃತ್ವದಲ್ಲಿ ಶೀಘ್ರವೇ ಕೇಂದ್ರದ ಬಳಿ ನಿಯೋಗಿ ಹೋಗಿ ಒತ್ತಾಯಿಸುತ್ತೇವೆ. ಬೆಳಗಾವಿ-ಮೈಸೂರು, ಬೆಳಗಾವಿ-ಬೆಂಗಳೂರು ರೈಲುಗಳ ಪೈಕಿ ಯಾವುದಾದರೂ ಒಂದು ರೈಲಿಗೆ ಸಂಗೊಳ್ಳಿ ರಾಯಣ್ಣ ಹೆಸರಿಡಬೇಕು. ಈ ಮೂಲಕ ತಾಯಿ ಕಿತ್ತೂರು ಚನ್ನಮ್ಮ ರೈಲಿನ ಹಿಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿನ ರೈಲು ಹೋಗುವಂತೆ ಮಾಡಲಿ. ಕೇಂದ್ರ ಸಚಿವ ಸೋಮಣ್ಣಗೆ ಮನವಿ ಮಾಡಿದ್ದೇವೆ. ರಾಜ್ಯಸಭಾ ಸದಸ್ಯ ಮಾ.ನಾಗರಾಜರಿಗೆ ಕಾಗಿನೆಲೆಗ ಶ್ರೀಗಳ ಮೂಲಕ ಮನವಿ ಮಾಡುತ್ತಿದ್ದೇವೆ.

- ರಾಜು ಮೌರ್ಯ, ಮುಖಂಡ, ಕುರುಬ ಸಮಾಜ.

- - - ದಾವಣಗೆರೆ ಬಂಡಾಯದ ಭೂಮಿ. ಇಲ್ಲಿ ಯಾವ್ಯಾವ ಕ್ರಾಂತಿಯ ವೇದಿಕೆ ಆಗಿವೆಯೋ ಅವೆಲ್ಲಾ ಗುರಿ ಮುಟ್ಟಿವೆ. ಮಾ.ನಾಗರಾಜ ಅವರಿಗೆ ದಾವಣಗೆರೆ ಕುರುಬರು ಪಕ್ಷಾತೀತವಾಗಿ ಕಂಬಳಿ ಹೊದಿಸಿ, ಶ್ರೀರಕ್ಷೆ ನೀಡಿ, ನೀವು ಮುಂದೆ ನಡೆಯಿರಿ, ನಾವು ಹಿಂದಿದ್ದೇವೆಂಬ ಸಂದೇಶ ನೀಡಿದ್ದಾರೆ. ಇದನ್ನೆಲ್ಲಾ ಬಿಜೆಪಿಯವರು ಗಮನಿಸುತ್ತಿದ್ದಾರೆ.

- ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠ.

- - -

-26ಕೆಡಿವಿಜಿ1, 2:

ದಾವಣಗೆರೆಯಲ್ಲಿ ಶನಿವಾರ ಜಿಲ್ಲಾ ಕುರುಬ ಸಮಾಜದಿಂದ ರಾಜ್ಯಸಭಾ ಸದಸ್ಯ ಮಾ.ನಾಗರಾಜ ಅವರನ್ನು ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಸಮಾಜದ ಮುಖಂಡರು ಸನ್ಮಾನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿರತೆ ಹಾವಳಿ ಗ್ರಾಮಸ್ಥರ ಆಕ್ರೋಶ ಸಾಕು ಪ್ರಾಣಿಗಳ ಮೇಲೆ ದಾಳಿ
ಜನಪದ ಸಾಹಿತ್ಯಕ್ಕೆ ಪ್ಲೀಟ್ ಕೊಡುಗೆ ಅನನ್ಯ: ಕೊಡಂಬಲ್