ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಕಣಬರ್ಗಿ ಗ್ರಾಮದ ವ್ಯಾಪ್ತಿಯಲ್ಲಿ ಉದ್ದೇಶಿತ ಯೋಜನೆ ಸಂಖ್ಯೆ61ಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಕೃಷಿ ಭೂಮಿಯನ್ನು ಮರಳಿ ರೈತರಿಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಕಣಬರ್ಗಿ ಗ್ರಾಮದ ಸ್ಕಿಂ ನಂ.61, ರೈತ ಹಿತರಕ್ಷಣಾ ಕಮಿಟಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ನಗರಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿದರು.ಕಣಬರ್ಗಿ ಗ್ರಾಮದ ವ್ಯಾಪ್ತಿಯಲ್ಲಿ ವಾಸಿಸಲು ನಿವೇಶನ ನಿಮಿರ್ಸಲು 2006 ರಲ್ಲಿ ಒಟ್ಟು159 ಎಕರೆ ಕೃಷಿ ಜಮೀನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಯಿತು. ಅಂದಿನ ಸರ್ಕಾರ ಜಮೀನನ್ನು ಮಾಲೀಕರ ಹೆಸರಿಗೆ 50:50 ಅನುಪಾತದಲ್ಲಿ ಹಸ್ತಾಂತರಿಸಲು ಯೋಜನೆ ರೂಪಿಸಿತ್ತು. ಈ ಯೋಜನೆ 2006 ರಲ್ಲಿ ಜಾರಿಗೆ ಬಂದಿದ್ದು. ನಮ್ಮಿಂದ ವಶಪಡಿಸಿಕೊಂಡಿರುವ ಜಮೀನಿನಲ್ಲಿ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2006 ರಲ್ಲಿ ರೈತರಿಂದ ವಶಪಡಿಸಿಕೊಂಡಿರುವ ಜಮೀನಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದವರು ಇದುವರೆಗೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಕೊಳ್ಳಲು ಸಂಪೂರ್ಣ ವಿಫಲವಾಗಿದೆ. ಅನೇಕ ಬಾರಿ ಕಚೇರಿಗೆ ತೆರಳಿ ವಿಚಾರಿಸಿದ ಸಮಯದಲ್ಲಿ ಟೆಂಡರ್ ಕರೆಯುವ ಪ್ರಕ್ರಿಯೆ ಚಾಲ್ತಿಯಲ್ಲಿರುವುದಾಗಿ ಹಾಗೂ ನಿವೇಶನಗಳನ್ನು ಮತ್ತೊಮ್ಮೆ ಅಭಿವೃದ್ಧಿಪಡಿಸುವುದಾಗಿ ಹೇಳಿ ರೈತರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದರು.ಈಗಾಗಲೇ ವಶಪಡಿಸಿಕೊಂಡಿರುವ ರೈತರ ಕೃಷಿ ಜಮೀನಿನಲ್ಲಿ ಕೃಷಿ ಕಾರ್ಯಗಳನ್ನು ಮಾಡಲು ಬಿಡುತ್ತಿಲ್ಲ ಕೃಷಿ ಆದಾಯವೂ ಇಲ್ಲ. ನಿವೇಶನ ಮಾರಾಟದಿಂದ ಗಳಿಸಿದ ಆದಾಯವೂ ಉಪಜೀವನಕ್ಕೆ ಸಾಕಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು. ಈ ಯೋಜನೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರ ಪ್ರಾರಂಭಿಸಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಾಗೂ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಈ ಯೋಜನೆಯನ್ನು ಪುನರಸ್ಥಾಪಿಸಲು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಮನವಿ ಮಾಡಿಕೊಂಡರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಅಥವಾ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆಸಕ್ತಿ ಇಲ್ಲದಿರುವುದು ತಿಳಿದು ಬಂದಿದೆ. ಆದ್ದರಿಂದ ನಮ್ಮಿಂದ ವಶಪಡಿಸಿಕೊಂಡಿರುವ ಜಮೀನುಗಳನ್ನು ರೈತರಿಗೆ ಹಿಂದಿರುಗಿಸಲು ಎನ್‌ಒಸಿ ಪ್ರಮಾಣ ಪತ್ರ ನೀಡಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶ ನೀಡುವಂತೆ ವಿನಂತಿಸಿಕೊಂಡರು.ಈ ಸಂದರ್ಭದಲ್ಲಿ ಎಸ್.ಪಿ.ಶಿಗಿಹಳ್ಳಿ, ಸೋಮಣ್ಣ ಮಲೈ, ಎಂ.ಪಿ.ಶಿಗೀಹಳ್ಳಿ, ಎಂ.ಜಿ.ಮಲೈ, ಎನ್.ಐ.ಸಂಕೇಶ್ವರ, ಎಸ್.ಆರ್.ಪಾಟೀಲ ಸೇರಿದಂತೆ ಮೊದಲಾದವರು ಇದ್ದರು.